ಸೋಮವಾರ, ಸೆಪ್ಟೆಂಬರ್ 27, 2021
28 °C

ಆಂತರಿಕ ಕಿತ್ತಾಟ ಮರೆಮಾಚಲು ವಿಪಕ್ಷ ನಾಯಕರ ಮೇಲೆ ಬಿಜೆಪಿ ದಾಳಿ: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಕ್ಷದೊಳಗಿನ ಆಂತರಿಕ ಕಿತ್ತಾಟ ಮರೆಮಾಚಲು ವಿಪಕ್ಷ ನಾಯಕರ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ಕುರಿತು ಗುರುವಾರ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, 'ಬ್ರಿಟಿಷರು ಒಡೆದು ಆಳುವ(Divide and rule) ಸೂತ್ರವನ್ನು ಅನುಸರಿಸಿದ್ದರು. ಬ್ರಿಟಿಷರ ಗುಲಾಮಗಿರಿ ಮಾಡುತ್ತಿದ್ದವರ ಸಂತತಿಯಾದ ಬಿಜೆಪಿ ಇಂದು ಒಡೆದಾಳುವುದು ಹಾಗೂ ದಿಕ್ಕು ತಪ್ಪಿಸಿ ಆಳುವುದು (Divert and rule) ಎಂಬ ಎರಡೂ ಸೂತ್ರಗಳನ್ನು ಅನುಸರಿಸುತ್ತಿದೆ. ತಮ್ಮ ವೈಫಲ್ಯವನ್ನು, ಆಂತರಿಕ ಕಿತ್ತಾಟವನ್ನು, ಮರೆಮಾಚಲು ವಿಪಕ್ಷ ನಾಯಕರ ಮೇಲಿನ ದಾಳಿಯ ಸೂತ್ರ ಕಂಡುಕೊಂಡಿದೆ' ಎಂದು ಕಾಂಗ್ರೆಸ್‌ ಟೀಕಿಸಿದೆ.

'ಒಂದು ಆಡಳಿತ ಪಕ್ಷ ಪ್ರತಿನಿತ್ಯ ತಮ್ಮ ಸಾಧನೆ ಹೇಳುವಂತಿರಬೇಕು. ಆದರೆ, ಸಾಧನೆಗಳಿಲ್ಲದ ರಾಜ್ಯ ಬಿಜೆಪಿ ಜನರ ದಿಕ್ಕು ತಪ್ಪಿಸುವ ಸೂತ್ರಕ್ಕೆ ಮೊರೆ ಹೋಗಿದೆ. ನೆರೆ ಸಂತ್ರಸ್ತರ ನೆರವಿನ ಬಗ್ಗೆ ಒಂದು ಅಕ್ಷರವೂ ಇಲ್ಲ. ಕೋವಿಡ್‌ 3ನೇ ಅಲೆ ಎದುರಿಸುವ ಸಿದ್ಧತೆಗಳ ಬಗ್ಗೆ ಒಂದು ಪದವೂ ಇಲ್ಲ. ಏಕೆಂದರೆ ಜನಪರ ಕೆಲಸಗಳನ್ನ ಈ ಸರ್ಕಾರ ಮಾಡಿಯೇ ಇಲ್ಲ' ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

'ಆಂತರಿಕ ಕಿತ್ತಾಟ ಹಾಗೂ ನೆರೆ ಸಂತ್ರಸ್ತರಿಗೆ ನೆರವು ನೀಡದ ವೈಫಲ್ಯ ಮರೆಮಾಚಲು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯ ವಿಷಯ ತೆಗೆದರು. ಕೊರೊನಾ ನಿರ್ವಹಣೆಯ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಮೇಲೆ ವೈಯುಕ್ತಿಕ ದಾಳಿಯನ್ನು ಮಾಡುತ್ತಿದ್ದಾರೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಬಿಜೆಪಿಯವರೇ, ನಿಮ್ಮ ಈ ಆಟ ನಡೆಯದು' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

'ಸಿಟಿ ರವಿಯಂತಹ ಅನಾಗರಿಕ ವ್ಯಕ್ತಿ ಇನ್ನೊಬ್ಬರಿಲ್ಲ. ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆಯಂತೆ ಮೋದಿಯಿಂದ ಹಿಡಿದು ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಅವರ ವರೆಗೂ ಎಲ್ಲರೂ ಗಟರ್(ಚರಂಡಿ) ಸಂಸ್ಕೃತಿಯವರು. ತಮ್ಮ ನೀಚ ನಾಲಿಗೆ ಹರಿಬಿಡುವ ಬಿಜೆಪಿಯವರು ಲಸಿಕೆ ಕೊರತೆ ನಿಗಿಸುವಲ್ಲಿ, ನೆರೆ ಪರಿಹಾರ ತರುವಲ್ಲಿ ತಮ್ಮ ತಾಕತ್ತು ತೋರಿಸಲಿ' ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು