ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ವಿಫಲ: ‘ಕೈ’ ಯುವ ಶಾಸಕರ ಆಕ್ರೋಶ

Last Updated 18 ಮೇ 2021, 18:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನೆರವಿಗೆ ಧಾವಿಸಬೇಕಾದ ಕೇಂದ್ರ ಸರ್ಕಾರ, ತಾರತಮ್ಯ ಧೋರಣೆ ಅನುಸರಿಸುತ್ತಿದೆ’ ಎಂದು ರಾಜ್ಯ– ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕರಾದ ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ, ರಿಜ್ವಾನ್ ಅರ್ಷದ್ ದೂರಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈ ಮೂವರೂ, ‘ಇಂಥ ಸಂದರ್ಭದಲ್ಲಿ ರಾಜ್ಯದ ಸಂಸದರು ಮಾತನಾಡಬೇಕು. ಆದರೆ, ಅವರು ತಮ್ಮ ಪಕ್ಷದ ಸಮರ್ಥನೆಗೆ ನಿಂತಿದ್ದಾರೆ’ ಎಂದೂ ದೂರಿದರು.

’ರಾಜ್ಯಕ್ಕೆ 1,200 ಟನ್ ಆಮ್ಲಜನಕ ಪೂರೈಸುವಂತೆ ಕೋರ್ಟ್‌ ಹೇಳಿದರೂ ಕೇಂದ್ರ ಕೊಡುತ್ತಿಲ್ಲ. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಮೂವರಲ್ಲ, 26 ಮಂದಿ ಸಾವಿಗೀಡಾಗಿದ್ದಾರೆ ಎಂದು ನ್ಯಾಯಮೂರ್ತಿಗಳ ಸಮಿತಿ ಹೇಳಿದರೆ, ಅವರು ಸರ್ವಜ್ಞರಲ್ಲ ಎನ್ನುತ್ತಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಬದಲಾವಣೆಗೆ ಪ್ರಯತ್ನ ನಡೆಯುತ್ತಿದೆ. ಇದೆಂಥ ನ್ಯಾಯ ಸ್ವಾಮಿ’ ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು.

‘ಬಿಜೆಪಿ ಶಾಸಕರೇ ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಖರೀದಿಸಿ ಹಂಚಿದ್ದಾರೆ. ಯಾವ ಶಾಸಕರೆಂದು ನಾನು ಹೇಳುವುದಿಲ್ಲ. ರಾಜ್ಯಕ್ಕೆ ₹ 5 ಸಾವಿರ ಕೋಟಿ ನೀಡುವಂತೆ ಹಣಕಾಸು ಆಯೋಗ ಮಾಡಿದ್ದ ಶಿಫಾರಸ್ಸನ್ನು ನಿರ್ಮಲಾ ಸೀತಾರಾಮನ್ ತಡೆದಿದ್ದಾರೆ’ ಎಂದರು.

ಪ್ರಿಯಾಂಕ ಖರ್ಗೆ ಮಾತನಾಡಿ, ‘ನಾವು ಯಾರನ್ನು ಪ್ರಶ್ನೆ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಪಿಎಂ ಕೇರ್‌ಗೆ ಎಷ್ಟು ಹಣ ಬಂದಿದೆ ಗೊತ್ತಿಲ್ಲ. ಸಿರಿಂಜ್, ಗ್ಲೌಸ್, ಮಾಸ್ಕ್ ಹೀಗೆ ಎಲ್ಲದಕ್ಕೂ ತೆರಿಗೆ ಹಾಕುತ್ತಾರೆ. ಅಗತ್ಯ ವಸ್ತುಗಳ ಮೇಲೆ ತೆರಿಗೆ ಯಾಕೆ. ಇದು ಸುಲಿಗೆ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಇದೊಂದು ಸೋಂಕಿತ ಸರ್ಕಾರ. ಸರ್ಕಾರ ರಚನೆಗೆ ತೋರಿಸಿದ ಅರ್ಧ ಆಸಕ್ತಿಯನ್ನು ಕೋವಿಡ್‌ ನಿರ್ವಹಣೆಗೆ ತೋರಿಸಬೇಕಿತ್ತು. ಬಿಎಸ್‌ವೈ ಮುಕ್ತ ಮಾಡಲು ಬಿಜೆಪಿ ಹೈಕಮಾಂಡ್ ಹೊರಟಿದೆ. ಅದಕ್ಕೆ ಹಲವರು ಬಹಳ ಆಸಕ್ತಿ ತೋರಿಸುತ್ತಿದ್ದಾರೆ. ಈ ಆಸಕ್ತಿಯನ್ನು ಜನಸಾಮಾನ್ಯರ ಮೇಲೆ ತೋರಿಸಬೇಕಿತ್ತು’ ಎಂದು ಲೇವಡಿ ಮಾಡಿದರು.

ರಿಜ್ವಾನ್ ಅರ್ಷದ್, ‘ಸರ್ಕಾರಕ್ಕೆ ಬದ್ಧತೆ ಇಲ್ಲ. ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಿಂದಕ್ಕೆ ಸರಿದಿದೆ. ರಾಜ್ಯ ಸರ್ಕಾರವೂ ಲಸಿಕೆ ನೀಡುತ್ತಿಲ್ಲ. ಆರೋಗ್ಯ ಮಂತ್ರಿ ಸುಧಾಕರ್ ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT