ಶನಿವಾರ, ಏಪ್ರಿಲ್ 17, 2021
30 °C
ನಡೆಯದ ಚರ್ಚೆ

ಒಂದೇ ಚುನಾವಣೆ: ಇಲ್ಲ ಮನ್ನಣೆ, ಉಭಯ ಸದನಗಳಲ್ಲಿ ಕಾಂಗ್ರೆಸ್‌ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ವಿಶೇಷ ಚರ್ಚೆ ನಡೆಸುವುದನ್ನು  ವಿರೋಧಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲೂ ಕಾಂಗ್ರೆಸ್‌ ಪಕ್ಷ ಧರಣಿ ನಡೆಸಿತು.

ಧಿಕ್ಕಾರ, ಕೂಗಾಟ, ಕಲಾಪ ಮುಂದೂಡಿಕೆ, ಮತ್ತೆ ಆರಂಭ, ಸಭಾತ್ಯಾಗದ ವಿದ್ಯಮಾನಗಳು ಪದೇ ಪದೇ ನಡೆದಿದ್ದರಿಂದ ವಿಧಾನಸಭೆಯಲ್ಲಿ ಮೊದಲ ದಿನದ ಕಲಾಪ ನಡೆಯಲಿಲ್ಲ. ಪರಿಷತ್ತಿನಲ್ಲಿ ಅರ್ಧದಿನ ಮಾತ್ರ ಕಲಾಪ ನಡೆಯಿತು.

ಈ ವಿಷಯದ ವಿಶೇಷ ಚರ್ಚೆಗಾಗಿ ಎರಡು ದಿನಗಳನ್ನು ನಿಗದಿ ಮಾಡಲಾಗಿತ್ತು. ಗುರುವಾರ ಬೆಳಿಗ್ಗೆ ಕಲಾಪ ಆರಂಭವಾದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,  ಪ್ರಾಸ್ತಾವಿಕ ಮಾತುಗಳನ್ನು ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಧರಣಿ ನಡೆಸಿದರು. ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನಸೆಳೆ
ಯುವ ಸೂಚನೆಯ ನಿಗದಿತ ಕಾರ್ಯಸೂಚಿ ಬಳಿಕ ಕಾಂಗ್ರೆಸ್ ಸದಸ್ಯರು ಇದೇ ಹಾದಿ ಅನುಸರಿಸಿದರು.

ಜೆಡಿಎಸ್‌ ಸದಸ್ಯರು ಚರ್ಚೆಯನ್ನು ವಿರೋಧಿಸಿ ಸಭಾತ್ಯಾಗ ನಡೆಸಿದರು.

‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಣತಿಯಂತೆ ವಿಧಾನಸಭಾಧ್ಯಕ್ಷರು ಈ ಚರ್ಚೆ ನಡೆಸುತ್ತಿದ್ದಾರೆ. ಈ ಚರ್ಚೆಯನ್ನು ವಿರೋಧಿಸುತ್ತೇವೆ’ ಎಂದು ಕಾಂಗ್ರೆಸ್ ಸದಸ್ಯರು ಹರಿಹಾಯ್ದರು.

‘ಈ ಚರ್ಚೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ. ಎಲ್ಲ ವಿಧಾನಸಭೆಗಳಲ್ಲೂ ಚರ್ಚೆ ನಡೆಸಬೇಕು ಎಂದು ಅಖಿಲ ಭಾರತ ವಿಧಾನಸಭಾಧ್ಯಕ್ಷರ ಸಮಾವೇಶದಲ್ಲಿ ತೀರ್ಮಾನವಾಗಿದೆ. ಈ ಚರ್ಚೆಗೆ ನಮ್ಮ ರಾಜ್ಯವೇ ನಾಂದಿ ಹಾಡಲಿ ಎಂಬ ಕಾರಣಕ್ಕೆ ಎಲ್ಲ ಪಕ್ಷಗಳ ಜತೆ ಚರ್ಚಿಸಿಯೇ ನಿಗದಿ ಮಾಡಲಾಗಿದೆ’ ಎಂದು ಸಭಾಧ್ಯಕ್ಷ ಕಾಗೇರಿ ಸಮಜಾಯಿಷಿ ನೀಡಿದರು.

‘ನಾವು ಇದನ್ನು ವಿರೋಧಿಸುತ್ತೇವೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್‌ ಚುನಾವಣೆವರೆಗೆ ಇದೆ. ಯಾವ ಚುನಾವಣೆ ಬಗ್ಗೆ ಚರ್ಚೆ ನಡೆಸಬೇಕು? ಈ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗಲಿ. ಇಲ್ಲಿನ ಚರ್ಚೆಯಿಂದ ಉಪಯೋಗ ಇಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಹಿಂದೆ ನೀವು ಸಂವಿಧಾನದ ವಿಚಾರ ಬಗ್ಗೆ ಚರ್ಚೆ ಏರ್ಪಡಿಸಿದ್ದೀರಿ. ಸಂವಿಧಾನಕ್ಕೂ ಈ ವಿಚಾರಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸಂಸದೀಯ ಮೌಲ್ಯಗಳು ವಿಷಯದ ಬಗ್ಗೆ ಮೊನ್ನೆ ಚರ್ಚೆ ನಡೆಯಿತು. ಒಳ್ಳೆ ಚರ್ಚೆ ಎಂದು ನಾವೆಲ್ಲ ಬಂದೆವು. ಆಗಲೇ ನಿಮ್ಮ ಮುಖವಾಡ ಗೊತ್ತಾಯಿತು’ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌ ಛೇಡಿಸಿದರು.

‘ಮಹಾತ್ಮ ಗಾಂಧಿ  ಕೊಂದವರಿಗೆ ಧಿಕ್ಕಾರ’,  ‘ಆರ್‌ಎಸ್‌ಎಸ್‌ ಹಾಗೂ ಕೇಶವ ಕೃಪಾದ ಅಜೆಂಡಾ ಓದುತ್ತಿರುವ ಕಾಗೇರಿ ಅವರಿಗೆ ಧಿಕ್ಕಾರ’, ’ಸಂವಿಧಾನದ ನಿಯಮಾವಳಿ ಗಾಳಿಗೆ ತೂರಿದ ಬಿಜೆಪಿಗೆ ಧಿಕ್ಕಾರ‘ ಎಂದು ಘೋಷಣೆಗಳನ್ನು ಕೂಗಿದರು.

ಪರಿಷತ್ತಿನಲ್ಲೂ ವಿರೋಧ: ವಿಧಾನ ಪರಿಷತ್‌ನಲ್ಲಿ ಚರ್ಚೆ ವಿರೋಧಿಸಿ ಮಾತನಾಡಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ‘ಒಂದೇ ಚುನಾವಣೆ ನಡೆಸಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಅಂತಹ ಅಧಿಕಾರ ಸಂಸತ್ತಿಗೆ ಇದೆ. ಒಂದು ಸಂಘಟನೆ, ಒಂದು ಪಕ್ಷದ ಕಾರ್ಯಸೂಚಿಯನ್ನು ಇಲ್ಲಿ ತರಲಾಗಿದೆ’ ಎಂದು ಟೀಕಿಸಿದರು.

‘ಚರ್ಚೆಗೆ ಅವಕಾಶ ಕಲ್ಪಿಸಲು ನನಗೆ ಅಧಿಕಾರವಿದೆ’ ಎಂದ ಸಭಾಪತಿ ಬಸವರಾಜ ಹೊರಟ್ಟಿ, ಶುಕ್ರವಾರ ಕಲಾಪ ಸಲಹಾ ಸಮಿತಿ ಸಭೆ ನಡೆಯುವವರೆಗೂ ಚರ್ಚೆಗೆ ಸಮ್ಮತಿ ನೀಡಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತು ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು. ಹೀಗಾಗಿ, ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

***

ವಿಶೇಷ ಚರ್ಚೆಯಲ್ಲಿ ಭಾಗವಹಿಸುವುದಾಗಿ ಹೇಳಿ ಒಪ್ಪಿಕೊಂಡಿದ್ದಿರಿ. ಈಗ ಚರ್ಚೆ ಮಾಡುವುದಿಲ್ಲ ಎನ್ನುತ್ತೀರಿ. ಇದು ನಿಮಗೆ (ಕಾಂಗ್ರೆಸ್‌) ಶೋಭೆ ತರುವುದಿಲ್ಲ

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

***

ಈ ವಿಷಯ ಸಂಸತ್ತಿನಲ್ಲಿ ಚರ್ಚೆ ಆಗಲಿ. ನಾವು ಇಲ್ಲಿ ಕೂರತು ಚರ್ಚೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಇದು ಆರ್‌ಎಸ್‌ಎಸ್‌ ಅಜೆಂಡಾ

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

ಹಿಂದೆ ನೀವೇ (ಸಿದ್ದರಾಮಯ್ಯ) ಒಂದು ದೇಶ ಒಂದು ಚುನಾವಣೆ ಆಗಲಿ ಎಂದಿದ್ದಿರಿ. ಬಿಎಸಿ ಸಭೆಯಲ್ಲೂ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಿರಿ. ಈಗ ಹಿಂದೇಟು ಏಕೆ

- ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು