ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಂಸ್ಥೆಗೆ ಮತದಾರರ ಮಾಹಿತಿ: ಸಿಎಂ ಬೊಮ್ಮಾಯಿ ಬಂಧನವಾಗಬೇಕು- ಸುರ್ಜೇವಾಲ

ಖಾಸಗಿ ಸಂಸ್ಥೆಯಿಂದ ಮತದಾರರ ಮಾಹಿತಿ ಅಕ್ರಮ ಸಂಗ್ರಹ– ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು
Last Updated 17 ನವೆಂಬರ್ 2022, 5:58 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಸಂಸ್ಥೆಯೊಂದು (ಎನ್‌ಜಿಒ) ಮತದಾರರ ಅಂಕಿಅಂಶಗಳನ್ನು (ಡಾಟಾ) ಅಕ್ರಮವಾಗಿ ಸಂಗ್ರಹಿಸುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಕಾರಣ. ಅವರ ಮೇಲೆ ಎಫ್‌ಐಆರ್‌ ದಾಖಲಿಸಿ, ಬಂಧಿಸಬೇಕು. ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುವ ಈ ಅಪರಾಧದ ಬಗ್ಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಗ್ರಹಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಗುರುವಾರ ಬೆಳಿಗ್ಗೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಲುಮೆ’ ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ತನ್ನ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದೆ. ಈ ಅಕ್ರಮದ ಹೊಣೆಯನ್ನು ಬಸವರಾಜ ಬೊಮ್ಮಾಯಿ ಹೊರಬೇಕು. ಅಲ್ಲದೆ, ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಡಾಟಾ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡಾ ಇದಕ್ಕೆ ಕಾರಣ. ಮಹದೇವಪುರ ಕ್ಷೇತ್ರದಲ್ಲಿ ಮೊದಲು ಮಾಹಿತಿ ಸಂಗ್ರಹಿಸಲಾಗಿದೆ. ಡಾಟಾ ಸಂಗ್ರಹಕ್ಕೆ ಆಗಸ್ಟ್ 20ರಂದು ಆದೇಶ ಹೊರಡಿಸಲಾಗಿದೆ. ಚಿಲುಮೆ ಸಂಸ್ಥೆಯವರು ಸರ್ಕಾರಿ ಅಧಿಕಾರಿಗಳೆಂದು ಮಾಹಿತಿ ಸಂಗ್ರಹಿಸಿದ್ದಾರೆ’ ಎಂದರು.

‘ಮತದಾರರ ಡಾಟಾ ಸಂಗ್ರಹಿಸಲು ಖಾಸಗಿ ಸಂಸ್ಥೆಯವರಿಗೆ ಅವಕಾಶ ಸಿಕ್ಕಿದೆ ಹೇಗೆ? ಅಕ್ರಮವಾಗಿ ಸಂಗ್ರಹಿಸುತ್ತಿರುವುದು ಏಕ? ಬೂತ್ ಮಟ್ಟದ ಅಧಿಕಾರಿಗಳು ಏನು‌ ಮಾಡುತ್ತಿದ್ದಾರೆ. ಅವರ ಸಹಕಾರವೇನಾದರೂ ಇದೆಯೇ? ಎಂದು ಸುರ್ಜೇವಾಲ ಪ್ರಶ್ನಿಸಿದರು,

‘ಮತದಾರರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಬೇಕು. ಆದರೆ, ಇಲ್ಲಿ ಖಾಸಗಿ ಸಂಸ್ಥೆ ಸಂಗ್ರಹಿಸಿದೆ. ಮತದಾರರ ಮೊಬೈಲ್ ಸಂಖ್ಯೆ, ವಿಳಾಸ, ಇತರ ವೈಯುಕ್ತಿಕ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಈ ಮಾಹಿತಿ ಸಂಗ್ರಹಿಸಿದ್ದಾರೆ. ಕೃಷ್ಣಪ್ಪ ರವಿಕುಮಾರ್ ಎಂಬವರು ಇದರ ಹಿಂದೆ ಇದ್ದಾರೆ. ಈ ವ್ಯಕ್ತಿ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಹಾಲಿ ಸಚಿವರ ಆಪ್ತ’ ಎಂದು ಆರೋಪಿಸಿದರು.

‘ಮತದಾರರ ಮಾಹಿತಿ ಸಂಗ್ರಹಿಸಲು ಚಿಲುಮೆ ಖಾಸಗಿ ಸಂಸ್ಥೆಗೆ ಹೇಗೆ ಅವಕಾಶ ಕೊಟ್ಟರು ಎನ್ನುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಬೇಕು. ಈ ಅಕ್ರಮದಲ್ಲಿ ಸರ್ಕಾರ, ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ. ವೈಯುಕ್ತಿಕ ಮಾಹಿತಿ ಸಂಗ್ರಹಿಸಿದ್ದು ಏಕೆ? ಪ್ರತಿಯೊಬ್ಬ ಮತದಾರರ ಮಾಹಿತಿ ಸಂಗ್ರಹಿಸಿದ್ದೇಕೆ? ಇವರೇನು ಸರ್ಕಾರಿ ಅಧಿಕಾರಿಗಳೇ ಸಂಗ್ರಹಿಸಲು’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ‌ ಮುಂದುವರಿಯಬಾರದು. ಅವರು ಕೂಡಲೇ ರಾಜೀನಾಮೆ ನೀಡಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು ಕೂಡಾ ಹುದ್ದೆಗೆ ರಾಜೀನಾಮೆ ನೀಡಬೇಕು. ಕೂಡಲೇ ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು‘ ಎಂದು ಆಗ್ರಹಿಸಿದರು.

‘ಚುನಾವಣಾ ಆಯೋಗ ಕೂಡಾ ಇದರ ಹೊಣೆ ಹೊರಬೇಕು. ಈ ಅಕ್ರಮದ ಬಗ್ಗೆ 30 ದಿನಗಳ ಒಳಗೆ ಸಮಗ್ರ ತನಿಖೆ ಆಗಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆಯಾಗಬೇಕು‘ ಎಂದೂ ಆಗ್ರಹಿಸಿದರು.

‘ಮತದಾರರ ಮಾಹಿತಿಯನ್ನು ಸರ್ಕಾರದ ಅಧಿಕಾರಿಗಳನ್ನು ಹೊರತುಪಡಿಸಿ ಇತರರು ಸಂಗ್ರಹಿಸುವಂತಿಲ್ಲ. ಆದರೆ, ಚಿಲುಮೆ ಸಂಸ್ಥೆ ಕಾನೂನುಬಾಹಿರವಾಗಿ ಈ ಕೆಲಸ ಮಾಡಿದೆ. ಇದು ಗಂಭೀರ ಅಪರಾಧ’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಅಕ್ರಮ ಚುನಾವಣಾ ಪ್ರಕ್ರಿಯೆಗೆ ಮುಖ್ಯಮಂತ್ರಿಯೇ ಕಾರಣ. ಮತದಾರರ ಮಾಹಿತಿ ಸಂಗ್ರಹಿಸಿ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಅವರು ಹೊರಟಿದ್ದಾರೆ‘ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ನೈತಿಕ ಹಕ್ಕು ಇಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು. ಬೊಮ್ಮಾಯಿ ಅವರನ್ನು ಮೊದಲು ಬಂಧಿಸಬೇಕು. ಮುಖ್ಯಮಂತ್ರಿ ವಿರುದ್ಧ ನಾವು ದೂರು ನೀಡುತ್ತೇವೆ’ ಎಂದರು.

ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಈ ಅಕ್ರಮದ ಬಗ್ಗೆಕೇಂದ್ರ ಚುನಾವಣಾ ಆಯೋಗಕ್ಕೆ ನಾವು ದೂರು ದಾಖಲಿಸುತ್ತೇವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದರ ಬಗ್ಗೆ ತಕ್ಷಣ ತನಿಖೆ ಆಗಬೇಕು’ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಶಾಸಕರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್‌, ಎಚ್.ಎಂ. ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT