ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳಲು ಸ್ಪರ್ಧೆಗೆ ಬಿದ್ದ ಬಿಜೆಪಿ: ಸಿದ್ದರಾಮಯ್ಯ

Last Updated 11 ಸೆಪ್ಟೆಂಬರ್ 2022, 19:06 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮವನ್ನು ಮಾಡಿ, ಸುಳ್ಳೇ ನಮ್ಮ ಸ್ಪಂದನೆ, ಜನರಿಗೆ ಟೋಪಿ ಹೊಲಿಯುವುದೆ ನಮ್ಮ ಸಾಧನೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾವೇಶದ ವೇದಿಕೆಯಲ್ಲಿ ಇದ್ದವರು ಕಾರ್ಯಕ್ರಮದುದ್ದಕ್ಕೂ ಸುಳ್ಳುಗಳನ್ನು ಹೇಳಿದ್ದಾರೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ಕೇಳಿ ಕುರ್ಚಿಗಳನ್ನು ಅರ್ಧಂಬರ್ಧ ಭರ್ತಿ ಮಾಡಿದ್ದ ಜನರು ಬೇಸರದಿಂದ ಎದ್ದು ಹೊರ ನಡೆದದ್ದು ಕಾಣುತ್ತಿತ್ತು. ಸುಳ್ಳು ಹೇಳುವುದಕ್ಕೆ ಸ್ಪರ್ಧೆಗೆ ಬಿದ್ದವರಂತೆ ವರ್ತಿಸಿದ ಬಿಜೆಪಿಯವರು ಮತ್ತು ಮುಖ್ಯಮಂತ್ರಿ ಕೂಡಲೇ ಕ್ಷಮೆ ಕೇಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಐಎಎಸ್‌ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಹಗರಣವೊಂದರ ತನಿಖೆ ಮಾಡುತ್ತಿದ್ದಾಗ, ಯಾರದೋ ಪಿತೂರಿಯಿಂದ ಸಾವಿಗೀಡಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನಾಲ್ಕು ವರ್ಷಗಳಾಗಿವೆ. ತನಿಖೆಯ ಫಲಿತಾಂಶ ಏನೆಂದು ಅವರು ತಿಳಿಸಬೇಕು. ಇಲ್ಲದಿದ್ದರೆ ರಾಜ್ಯದ ಜನರ ಬೇಷರತ್ ಕ್ಷಮೆ ಕೇಳಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಅನ್ನಭಾಗ್ಯ ಯೋಜನೆಯಬಗ್ಗೆ ಹಗುರವಾಗಿ ಮಾತನಾಡಿರುವ ಬೊಮ್ಮಾಯಿ, ಮೋದಿಯವರ ಅಕ್ಕಿಗೆ ಸಿದ್ದರಾಮಯ್ಯನವರ ಚೀಲ ಎಂದು ವ್ಯಂಗ್ಯ ಮಾಡಿದ್ದಾರೆ. ಹಾಗಿದ್ದರೆ, ಆಹಾರ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿ ಅಥವಾ ಆರ್ಥಿಕ ಇಲಾಖೆಯ
ಅಧಿಕಾರಿಗಳನ್ನು ಕೇಳಿ ಅವರು ಸತ್ಯವನ್ನು ಅವರು ಜನರ ಮುಂದಿಡಬೇಕು’ ಎಂದೂ ಸವಾಲು ಹಾಕಿದ್ದಾರೆ.

‘ಮೋದಿಯವರು ಅಕ್ಕಿ ಕೊಟ್ಟಿದ್ದರೆ ನಮ್ಮ ಕಾಂಗ್ರೆಸ್ ಸರ್ಕಾರ ಯಾಕೆ ಇಷ್ಟೊಂದು ಹಣವನ್ನು ಆಹಾರ ಇಲಾಖೆಯ ವತಿಯಿಂದ ಖರ್ಚು ಮಾಡಬೇಕಾಗಿತ್ತು? ಕಾಂಗ್ರೆಸ್ ಸರ್ಕಾರ ಕೊಡುತ್ತಿದ್ದ ತೊಗರಿಬೇಳೆಯನ್ನು ಬಿಜೆಪಿ ಸರ್ಕಾರ 2020ರ ಏಪ್ರಿಲ್‍ನಿಂದಲೇ ನಿಲ್ಲಿಸಿದೆ. ಈ ಎಲ್ಲ ವಿಚಾರಗಳ ಕುರಿತು ಬೊಮ್ಮಾಯಿಯವರು ಚರ್ಚಿಸಲು ಸಿದ್ಧರಿದ್ದರೆ ನಾನು ಸದನದಲ್ಲೇ ಚರ್ಚಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ಯಾವ ಸಾಧನೆ?: ಎಚ್‌.ಸಿ. ಮಹದೇವಪ್ಪ

‘ಜನಸ್ಪಂದನ ಎಂಬ ತಮಾಷೆಯ ಹೆಸರಿನ ಸಮಾವೇಶದಲ್ಲಿ ನೀವು(ಬೊಮ್ಮಾಯಿ) ಅಪ್ರಬುದ್ಧವಾಗಿ ಕಿರುಚಾಡಿ, ಬಿಜೆಪಿ ಸರ್ಕಾರದ ಸಾಧನೆಯನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದಿದ್ದೀರಿ. ಯಾವ ಸಾಧನೆಯನ್ನು? ಶೇ 40 ಭ್ರಷ್ಟಾಚಾರದ ಬಗ್ಗೆಯೇ, ಪಠ್ಯ ಪುಸ್ತಕ ತಿರುಚಿದ ಬಗ್ಗೆಯೇ?’ ಎಂದು ಕಾಂಗ್ರೆಸ್‌ ನಾಯಕ ಎಚ್‌.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ.

‘ಪೆಟ್ರೋಲ್ ಬೆಲೆ ₹ 100 ಗಡಿ ದಾಟಿಸಿದ ಬಗ್ಗೆಯೋ? ಅಡುಗೆ ಸಿಲಿಂಡರ್ ಬೆಲೆ ₹ 1,000 ದಾಟಿಸಿದ ಬಗ್ಗೆಯೋ, ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆಯೋ’ ಎಂದು ಅವರು ಕುಟುಕಿದ್ದಾರೆ.

‘ಸಾಧನೆ ಪಟ್ಟಿ ಕೂಡ ಸುಳ್ಳಿನ ಕಂತೆ’

‘ಬಿಜೆಪಿ ಸರ್ಕಾರದ ಸಾಧನೆಯ ಸಮಾವೇಶ ಉತ್ಸವಕ್ಕಿಂತ, ಕೇವಲ ಮುಖ್ಯಮಂತ್ರಿ ಹಾಗೂ 3–4 ಮಂತ್ರಿಗಳ ಉತ್ಸವವಾಗಿ ಕಂಡಿತು. ಮುಖ್ಯಮಂತ್ರಿಗಳು ಹೇಳಿರುವ ಅಲ್ಪ ಸಾಧನೆ ಪಟ್ಟಿ ಕೂಡ ಸುಳ್ಳಿನ ಕಂತೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಲೆ ಏರಿಕೆಯಿಂದ ಜನ ಸಾಮಾನ್ಯರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರೂ, ಬೆಂಗಳೂರು ಮುಳುಗುತ್ತಿದ್ದರೂ, ನಿರುದ್ಯೋಗಿ ಯುವಕರು ಆಕ್ರೋಶದಲ್ಲಿದ್ದರೂ ಉತ್ಸವ ಮಾಡಲೇಬೇಕೆಂದು ಬಿಜೆಪಿಯವರು ಈ ಕಾರ್ಯಕ್ರಮ ಮಾಡಿದ್ದಾರೆ. ಸರ್ಕಾರದ ಸಾಧನೆ ಹೇಳುವುದಕ್ಕಿಂತ ಕಾಂಗ್ರೆಸ್ ಟೀಕೆ ಮಾಡಿದ್ದೇ ಹೆಚ್ಚು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT