ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ | ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಸಿಗಲಿ ಎಂಬುದು ನಮ್ಮ ಆಶಯ: ಸಿದ್ದರಾಮಯ್ಯ

Last Updated 14 ಮೇ 2021, 9:38 IST
ಅಕ್ಷರ ಗಾತ್ರ

ಬೆಂಗಳೂರು:ʼನಮ್ಮ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ರೂ.1 ಕೋಟಿಯಂತೆ ಒಟ್ಟು ರೂ.100 ಕೋಟಿ ಹಣವನ್ನುಲಸಿಕೆ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಿದ್ದೇವೆ.ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಸಿಗಲಿ ಎಂಬುದು ನಮ್ಮ ಆಶಯʼ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯ ಕೋವಿಡ್‌ ಪರಿಸ್ಥಿತಿಯ ಸಂಬಂಧ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ.

ʼದೇಶದ ಪ್ರತಿಯೊಬ್ಬರಿಗೂ ಕೊರೊನಾಲಸಿಕೆ ನೀಡುವುದೇ ಸೋಂಕು ತಡೆಗಟ್ಟಲು ಇರುವ ಪರಿಣಾಮಕಾರಿ ಮಾರ್ಗವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟರೊಳಗೆ ಕನಿಷ್ಠ ಅರ್ಧದಷ್ಟು ಜನರಿಗೆಲಸಿಕೆ ನೀಡಿದ್ದರೆ ಕೊರೊನಾ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿರುತ್ತಿತ್ತುʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ನಿರ್ವಹಣೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಬೇಜವಾಬ್ದಾರಿಯಿಂದಾಗಿ ಜನ ಲಸಿಕೆಗಾಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಲಸಿಕೆ ನೀಡಿಕೆ ಸಂಬಂಧ ಎರಡೂ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಇಷ್ಟಾದರೂ ಬಿಜೆಪಿ ನಾಯಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲʼ ಎಂದು ವಾಗ್ದಾಳಿ ನಡೆಸಿದ್ದಾರೆ.

ʼರಾಜ್ಯಕ್ಕೆ ಲಸಿಕೆ ಬರಲು ಇನ್ನು ಹಲವು ತಿಂಗಳುಗಳಾಗಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಕೊರೊನಾ 3ನೇ ಅಲೆ ಬರಲಿದ್ದು, ಅದರ ಬಗೆಗಿನ ತಜ್ಞರ ಅಭಿಪ್ರಾಯವನ್ನು ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಆತಂಕವಾಗುತ್ತದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಮಾರ್ಗಸೂಚಿಯನ್ನು ಪದೇಪದೆ‌ ಬದಲಿಸಲಾಗುತ್ತಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ʼಕೊವಿಶೀಲ್ಡ್ ಲಸಿಕೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸರ್ಕಾರ ಪದೇ ಪದೇ ತನ್ನ ಮಾರ್ಗಸೂಚಿಯನ್ನು ಬದಲಾವಣೆ ಮಾಡುತ್ತಿದೆ. ಮೊದಲ ಹಾಗೂ ಎರಡನೇ ಡೋಸ್ ನಡುವಿನ ಅಂತರ 6-8 ವಾರ ಎಂದು ಈ ಹಿಂದೆ ಹೇಳಿತ್ತು, ಈಗ ಅದನ್ನು 12 ರಿಂದ 16 ವಾರಗಳಿಗೆ ಏರಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆʼ ಎಂದಿದ್ದಾರೆ.

ಮುಂದುವರಿದು,ʼಲಸಿಕೆ ನೀಡಿಕೆ ವಿಚಾರದಲ್ಲಿ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ. ಇದೊಂದು ವೈಜ್ಞಾನಿಕ ಪ್ರಕ್ರಿಯೆ, ಲಸಿಕೆ ತಯಾರಿಕಾ ಹಂತದಲ್ಲಿಯೇ ಎರಡು ಡೋಸ್‌ಗಳ ನಡುವಿನ ದಿನಗಳ ಅಂತರವನ್ನೂ ನಿರ್ಧರಿಸಲಾಗಿರುತ್ತದೆ, ಹಾಗಿದ್ದಾಗ ಪದೇ ಪದೇ ಬದಲಾವಣೆ ಹೇಗೆ ಸಾಧ್ಯ?ʼ ಎಂದು ಪ್ರಶ್ನಿಸಿದ್ದಾರೆ.

ʼ18 ರಿಂದ 45ರ ವಯೋಮಿತಿಯ ಜನರ ಲಸಿಕೆಗೆ ರಾಜ್ಯ ಸರ್ಕಾರಗಳೇ ಹಣ ಹಾಕಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ. ಕೇಂದ್ರ ಬಿಜೆಪಿ ಸರ್ಕಾರವೇಇಡೀ ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಅವರನ್ನು ಒತ್ತಾಯಿಸುತ್ತೇನೆʼ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT