ಶನಿವಾರ, ಅಕ್ಟೋಬರ್ 23, 2021
21 °C

ಮೈಸೂರು ಅತ್ಯಾಚಾರ ಪ್ರಕರಣ; ಪೊಲೀಸ್‌ ಇಲಾಖೆ ವೈಫಲ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಭಾಯಿಸುವಲ್ಲಿ ಪೊಲೀಸ್‌ ಇಲಾಖೆಯ ವೈಫಲ್ಯ ಎದ್ದು ಕಾಣುತ್ತದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ವಿಧಾನಸಭೆಯಲ್ಲಿ ಬುಧವಾರ ನಿಯಮ 69 ರಡಿ ವಿಷಯ ಪ್ರಸ್ತಾಪಿಸಿದ ಅವರು, ‘ಘಟನೆ ನಡೆದ ಪ್ರದೇಶವು ರಿಂಗ್‌ ರಸ್ತೆಗೆ ಕೂಗಳತೆಯಲ್ಲೇ ಇದೆ. ಅದು ನಿರ್ಜನ ಪ್ರದೇಶವೇನೂ ಅಲ್ಲ. ಆದರೆ, ಮೈಸೂರು ಪೊಲೀಸ್‌ ಆಯುಕ್ತರು ಆ ಪ್ರದೇಶದಲ್ಲಿ ಅನೇಕ ಬಾರಿ ಇಂತಹ ಕೃತ್ಯಗಳು ನಡೆದಿವೆ ಎಂದು ಹೇಳಿದ್ದಾರೆ. ಹಾಗಿದ್ದರೆ, ಅಲ್ಲಿ  ಪೊಲೀಸರ ಗಸ್ತು ಏಕೆ ಹಾಕಿಲ್ಲ. ಈ ಸ್ಥಳ ಆಲನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದೆ. ಠಾಣೆಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದರೂ ಗಸ್ತು ಹಾಕುವುದಿಲ್ಲ ಎಂದರೆ ಆಶ್ಚರ್ಯವಾಗುತ್ತದೆ’ ಎಂದರು.

ಅಷ್ಟೇ ಅಲ್ಲ ಘಟನೆ ನಡೆದ 14–15 ಗಂಟೆಗಳ ಬಳಿಕವಷ್ಟೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಇಷ್ಟು ತಡ ಮಾಡಿದ್ದು ಏಕೆ? ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶವಿತ್ತೇ? ಜೆ.ಎಸ್‌ ವರ್ಮಾ ಸಮಿತಿ ವರದಿ ಶಿಫಾರಸ್ಸಿನಂತೆ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸದೇ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಏಕೆ? ಆಕೆಯಿಂದ ಹೇಳಿಕೆ ಏಕೆ ಪಡೆಯಲಿಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಗೃಹ ಸಚಿವರೂ ಈ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ನಡೆದುಕೊಂಡಿಲ್ಲ. ಮೈಸೂರಿಗೆ ಹೋದವರು ಬೆಳಿಗ್ಗೆ ಚಾಮುಂಡಿ ದೇವಸ್ಥಾನಕ್ಕೆ ಹೋದರು, ಆ ಬಳಿಕ ಪೊಲೀಸ್‌ ಅಕಾಡೆಮಿಗೆ ಹೋದರು. ಕೊನೆಯಲ್ಲಿ ಘಟನೆ ಸ್ಥಳಕ್ಕೆ ಹೋದರು. ಪ್ರಕರಣವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಘಟನ ಸ್ಥಳಕ್ಕೆ ತಡವಾಗಿ ಹೋಗಿದ್ದು ವೈಫಲ್ಯ ಅಲ್ಲವೆ’ ಎಂದರು. 

‘ತೀರ್ಥಹಳ್ಳಿ ಪ್ರಕರಣ ನಡೆದಾಗ ವಿರೋಧ ಪಕ್ಷದಲ್ಲಿದ್ದ ಕೆ.ಎಸ್‌.ಈಶ್ವರಪ್ಪ, ‘ಸಿದ್ದರಾಮಯ್ಯ ಮಗಳ ಮೇಲೆ ಅತ್ಯಾಚಾರ ನಡೆದಿದ್ದರೆ, ಜಾರ್ಜ್‌ ಮಗಳು ಮರಿಯಮ್ಮ ಮೇಲೆ ಅತ್ಯಾಚಾರ ನಡೆದಿದ್ದರೆ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ್ದರು. ಆದರೆ, ಪ್ರಕರಣದಲ್ಲಿ ಅತ್ಯಾಚಾರ ನಡೆದಿರಲಿಲ್ಲ. ಬಿಜೆಪಿಯವರು ದೊಡ್ಡ ವಿವಾದ ಮಾಡಿದರು’ ಎಂದು ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಹೇಳಿದರು.

ಎಫ್‌ಐಆರ್‌ ವಿಳಂಬ ಜಟಾಪಟಿ: ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ‘ಯುವತಿ ಬೆಳಿಗ್ಗೆ 11 ಗಂಟೆಗೆ ಹೇಳಿಕೆ ನೀಡಿದ್ದಾಳೆ. 12 ಗಂಟೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಮಣಿಪಾಲ ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ಸರ್ಕಾರ ಏನು ಮಾಡಿತ್ತು ಎಂಬುದನ್ನು ಬಿಚ್ಚಿಡಲಾ’ ಎಂದು ಪ್ರಶ್ನಿಸಿದರು.

ಕೆ.ಜೆ.ಜಾರ್ಜ್‌, ‘ಮಣಿಪಾಲ ಅತ್ಯಾಚಾರ ‍ಪ್ರಕರಣದಲ್ಲಿ ಎಸ್ಟೇಟ್‌ ಅಧಿಕಾರಿಯ ಹೇಳಿಕೆಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಅಲ್ಪಸಂಖ್ಯಾತನೊಬ್ಬ ಈ ಕೃತ್ಯ ನಡೆಸಿದ್ದಾನೆ ಎಂದು ಬಿಜೆಪಿಯವರು ಹುಯಿಲೆಬ್ಬಿಸಿದ್ದರಿಂದ ಆರೋಪಿಗಳ ಪತ್ತೆ ಸ್ವಲ್ಪ ವಿಳಂಬವಾಯಿತು. ಆ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗಿದೆ’ ಎಂದು ಸಮರ್ಥಿಸಿಕೊಂಡರು.

ಕೈಕಟ್ಟಿ ಕುಳಿತುಕೊಳ್ಳುವೆ ಎಂದ ರಮೇಶ್ ಕುಮಾರ್
‘ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಯುವತಿ ಹೇಳಿಕೆ ನೀಡುವವರೆಗೆ ಎಫ್‌ಐಆರ್ ದಾಖಲಿಸಲು ಪೊಲೀಸರು ಕಾದಿದ್ದು ಸರಿಯಲ್ಲ. ಸ್ವಯಂಪ್ರೇರಿತರಾಗಿ ಎಫ್‌ಐಆರ್ ದಾಖಲಿಸಬಹುದಿತ್ತು’ ಎಂದು ಕಾಂಗ್ರೆಸ್‌ನ ಕೆ.ಆರ್.ರಮೇಶ್ ಕುಮಾರ್‌ ಸಲಹೆ ನೀಡಿದರು.

‘ಎಲ್ಲ ವಿಷಯಗಳಲ್ಲಿ ದೊಡ್ಡ ದೊಡ್ಡ ಶಬ್ದಗಳನ್ನು ಬಳಸಿ ನಿಮಗೆ ಬೇಕಾದಂತೆ ವಾದ ಮಂಡನೆ ಮಾಡುತ್ತೀರಿ. ಈ ಕಲೆ ನಿಮಗೆ ಕರಗತ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಛೇಡಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನೀವು ಎಲ್ಲ ವಿಷಯಗಳಲ್ಲೂ ಮಧ್ಯಪ್ರವೇಶಿಸಿ ಮಾತನಾಡುತ್ತೀರಿ. ಇದರಿಂದ ನಮಗೆ ಅವಕಾಶ ಸಿಗುತ್ತಿಲ್ಲ ಎಂದು ಹಲವು ಸದಸ್ಯರು ಬೇಸರಗೊಂಡಿದ್ದಾರೆ. ಇದೇ ರೀತಿ ಚರ್ಚೆ ಮುಂದುವರಿಸಿದರೆ ಉಳಿದ ಸದಸ್ಯರಿಗೆ ವಿಷಯ ಮಂಡಿಸಲು ಅವಕಾಶ ನೀಡುವುದಿಲ್ಲ. ಶಾಸನ ರಚನೆ ವಿಷಯಕ್ಕೆ ಹೋಗುತ್ತೇನೆ’ ಎಂದು ರಮೇಶ್‌ ಕುಮಾರ್ ಅವರನ್ನು ಉದ್ದೇಶಿಸಿ ಹೇಳಿದರು.

‘ನಾವು ಇಲ್ಲಿ ಚರ್ಚೆ ಮಾಡಲೆಂದೇ ಬರುತ್ತೇವೆ. ಮಾತನಾಡಬೇಡಿ ಎಂದು ಹೇಳುವಂತಿಲ್ಲ. ನಮ್ಮ ಸದಸ್ಯರು ಯಾರು ಮಾತನಾಡುತ್ತಿಲ್ಲ. ನೀವು ಶಾಸನ ರಚನೆಯ ವಿಚಾರ ಕೈಗೆತ್ತಿಕೊಳ್ಳಿ’ ಎಂದು ರಮೇಶ್‌ ಕುಮಾರ್ ಆಕ್ರೋಶದಿಂದ ನುಡಿದರು. ‘ಇನ್ನು ಯಾವುದೇ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಇಲ್ಲಿ ಕೈಕಟ್ಟಿ ಕುಳಿತುಕೊಳ್ಳುವೆ’ ಎಂದೂ ಹೇಳಿದರು.

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲಿ
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎನ್ನುವ ಅರಿವ ಮೂಡುವ ಮಾದರಿಯಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿಯ ಭಾರತಿಶೆಟ್ಟಿ ಹೇಳಿದರು.

ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವ ಕುರಿತು ಮಾತನಾಡಿದ ಅವರು, ಇಂದು ನೈತಿಕ ಶಿಕ್ಷಣ ನೀಡುವ ಕೆಲಸ ಆಗುತ್ತಿಲ್ಲ ಎಂದರು.

ಮೈಸೂರಿನಲ್ಲಿ ನಡೆದಿರುವ ಘಟನೆಗೆ ಗೃಹ ಸಚಿವರು ಆ ಹೆಣ್ಣು ಮಗಳು ಅಲ್ಲಿ ಏಕೆ ಹೋಗಬೇಕು ಎಂದಿದ್ದೇ ದೊಡ್ಡ ಚರ್ಚೆಗೆ ಕಾರಣವಾಯಿತು. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಇದೇ ಯೋಚನೆ ಮಾಡುತ್ತಾರೆ. ಶಾಲೆ, ಕಾಲೇಜುಗಳಲ್ಲಿ ಅಂಕ ಗಳಿಸುವುದರ ಬಗ್ಗೆಯೇ ಗಮನಹರಿಸುವುದರಿಂದ ನೈತಿಕ ಶಿಕ್ಷಣ ನೀಡುವಿಕೆ ಕೊರತೆ ಎದುರಾಗಿದೆ ಎಂದು ಹೇಳಿದರು.

ಬಿಜೆಪಿಯ ತೇಜಸ್ವಿನಿ ಗೌಡ ಮಾತನಾಡಿ,‘ ಸದ್ಯ ಇರುವ ಕಾನೂನು ಚೆನ್ನಾಗಿದೆ. ಆದರೆ, ಇದು ನ್ಯಾಯಾಲಯದಲ್ಲಿ ಏಕೆ ಬಿದ್ದು ಹೋಗಲಿದೆ ಎನ್ನುವುದನ್ನು ಗಮನಿಸಬೇಕು. ಉತ್ತಮ ವ್ಯಕ್ತಿ, ಸಮಾಜ ರೂಪಿಸುವ ಕಾರ್ಯ ಆಗಬೇಕು’ ಎಂದರು.

***

ಪೊಲೀಸರು ಅಪರಾಧ ನಿಯಂತ್ರಿಸುವುದನ್ನು ಬಿಟ್ಟ ಲಿಕ್ಕರ್‌ ಶಾಪ್‌ ಮುಂದೆ ಮಾಮೂಲಿ ವಸೂಲಿಗೆ ನಿಲ್ಲುತ್ತಾರೆ. ಮೈಸೂರು ನಗರಕ್ಕೆ ಕೆಟ್ಟ ಹೆಸರು ತಂದಿದ್ದಾರೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

ಸಂತ್ರಸ್ತರೊಂದಿಗೆ ಉಡಾಫೆಯಿಂದ ಮಾತನಾಡಿದ, ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕಿತ್ತು. ಗೃಹ ಇಲಾಖೆ ವಿಫಲವಾಗಿದೆ.
-ಜಿ.ಟಿ.ದೇವೇಗೌಡ, ಜೆಡಿಎಸ್‌ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು