ಭಾನುವಾರ, ಮೇ 29, 2022
30 °C

ಬಿಜೆಪಿ ಸರ್ಕಾರದ ಸಾಧನೆ ಭ್ರಷ್ಟಾಚಾರ, ವೈಫಲ್ಯಗಳು ಮಾತ್ರ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವ ಆರು ತಿಂಗಳು ಸೇರಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಎರಡೂವರೆ ವರ್ಷಗಳ ಬಿಜೆಪಿ ಸರ್ಕಾರದ ಸಾಧನೆ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಮಾತ್ರ. ಬಿ.ಎಸ್.ಯಡಿಯೂರಪ್ಪ ಬದಲಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆಯೇ ಹೊರತು ಸರ್ಕಾರ ಬದಲಾಗಿಲ್ಲ, ಭ್ರಷ್ಟಾಚಾರ ನಿಂತಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬೊಮ್ಮಾಯಿ ಅವರದು ಯಡಿಯೂರಪ್ಪ ಅವರ ಸರ್ಕಾರದ ಮುಂದುವರೆದ ಭಾಗವೇ ಹೊರತು ಹೊಸ ಸರ್ಕಾರ ಅಲ್ಲ. 2018ರಲ್ಲಿ ಬಿಜೆಪಿಯವರು ಜನರಿಗೆ ನೀಡಿದ್ದ ಚುನಾವಣಾ ಪ್ರಣಾಳಿಕೆಗೆ ಯಡಿಯೂರಪ್ಪ ಸರ್ಕಾರದಷ್ಟೇ ಬೊಮ್ಮಾಯಿ ಅವರ ಸರ್ಕಾರಕ್ಕೂ ಅನ್ವಯವಾಗುತ್ತದೆ’ ಎಂದರು.

ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಅಂಕಿಅಂಶಗಳ ಸಹಿತ ಬಿಚ್ಚಿಟ್ಟ ಸಿದ್ದರಾಮಯ್ಯ, ‘ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ₹1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.‌ ಅಂದರೆ, ವರ್ಷಕ್ಕೆ ಕನಿಷ್ಠ ₹30 ಸಾವಿರ ಕೋಟಿ ಖರ್ಚು ಮಾಡಬೇಕು. ಆದರೆ, ಈ ವರ್ಷ ಸರ್ಕಾರ ಖರ್ಚು ಮಾಡಿರುವುದು ₹6,300 ಕೋಟಿ ಮಾತ್ರ’ ಎಂದು ದೂರಿದರು.

‘ರಾಜ್ಯ ಸರ್ಕಾರದ ಸಾಧನೆ ಪುಸ್ತಕದಲ್ಲಿ ಭರವಸೆಗಳೇ ಜಾಸ್ತಿ ಇವೆ. ಅಮೃತ ಯೋಜನೆಯಡಿ 25 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ, 750 ಶಾಲೆಗಳಿಗೆ ತಲಾ ₹10 ಲಕ್ಷ ಹಣ ಖರ್ಚು ಮಾಡುತ್ತೇವೆ, ಐದು ಲಕ್ಷ ಮನೆ ನಿರ್ಮಿಸುತ್ತೇವೆ, ಅಮೃತ ಗ್ರಾಮಗಳನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡಲಾಗಿದೆ. ಉದಾಹರಣೆಗೆ, ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಎಚ್.ಕೆ. ಪಾಟೀಲ ಅವರು ಗ್ರಾಮೀಣ ಸೇವಾ ಕೇಂದ್ರಗಳನ್ನು ಆರಂಭಿಸಿದ್ದರು. ಈಗ ಅದನ್ನು ಗ್ರಾಮ ಒನ್ ಎಂದು ಹೆಸರು ಬದಲಿಸಿದ್ದಾರೆ. ಇದು ಸರ್ಕಾರದ ಸಾಧನೆಯೇ’ ಎಂದು ಪ್ರಶ್ನಿಸಿದರು.

‘ಸರ್ಕಾರ ತನ್ನ ಜಾಹಿರಾತಿನಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ₹3 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದೆ. ಈವರೆಗೆ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಿರುವುದು ₹1,200 ಕೋಟಿ ಮಾತ್ರ. ಈ ಆರ್ಥಿಕ ವರ್ಷದಲ್ಲಿ ಉಳಿದಿರುವುದು ಎರಡು ತಿಂಗಳು ಮಾತ್ರ. ಮುಂದೆ ಒಂದು ರೂಪಾಯಿಯೂ ಬಿಡುಗಡೆ ಆಗುವುದಿಲ್ಲ. ಹೈದರಾಬಾದ್ ಕರ್ನಾಟಕ ಎಂದು ಹೆಸರು ಬದಲಿಸಿದೊಂದೆ ಲಾಭ. ಹಣಕಾಸಿನ ಲಾಭ ಏನೂ ಇಲ್ಲ. ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದು, ಹೈದರಾಬಾದ್ –ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಈ ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಪತ್ರ ಬರೆದಿದ್ದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಇತ್ತು, ಉಪ ಪ್ರಧಾನಿಯಾಗಿದ್ದ ಅಡ್ವಾಣಿ ಸಂವಿಧಾನದ 371 ನೇ ವಿಧಿಗೆ ತಿದ್ದುಪಡಿ ತಂದು, ವಿಶೇಷ ಸ್ಥಾನಮಾನ ಕೊಡಲು ಆಗಲ್ಲ ಎಂದು ರಾಜ್ಯ ಸರ್ಕಾರದ ಪತ್ರಕ್ಕೆ ಉತ್ತರ ನೀಡಿದ್ದರು’ ಎಂದು ನೆನಪಿಸಿದರು.

‘ಕೋವಿಡ್‌ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಸರ್ಕಾರ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ಎರಡನೇ ಅಲೆ ಬಂದಾಗ ಆಸ್ಪತ್ರೆಯಲ್ಲಿ ಖಾಲಿ ಹಾಸಿಗೆ ಇರಲಿಲ್ಲ. ವೆಂಟಿಲೇಟರ್, ಆಮ್ಲಜನಕ ಸೌಲಭ್ಯದ ಹಾಸಿಗೆ, ಅಗತ್ಯ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಇರಲಿಲ್ಲ. ಕೇಂದ್ರ ಸರ್ಕಾರ ನೀಡಿರುವ ವೆಂಟಿಲೇಟರ್‌ಗಳು ದೂಳು ಹಿಡಿದಿವೆ. ಜನ ಹಾದಿ ಬೀದಿಯಲ್ಲಿ ಪ್ರಾಣ ಬಿಟ್ಟರು. ಸರ್ಕಾರ 38 ಸಾವಿರ ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಹೇಳಿದೆ. ನನಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕನಿಷ್ಠ 4 ಲಕ್ಷ ಜನ ಸತ್ತಿದ್ದಾರೆ. ಸರ್ಕಾರ ಯಾವ ಯಾವ ಆಸ್ಪತ್ರೆಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬ ಲೆಕ್ಕ ಕೊಡಲಿ. ಆಗ ಸತ್ಯ ಬಯಲಾಗುತ್ತದೆ’ ಎಂದರು.

‘ಕೋವಿಡ್‌ನಿಂದ ಮರಣ ಹೊಂದಿದ 27,074 ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ ₹50 ಸಾವಿರ ಪರಿಹಾರ ನೀಡಿದೆ. ರಾಜ್ಯ ಸರ್ಕಾರ 13,541 ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಿದೆ. ಇನ್ನುಳಿದ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ. ಕೊರೊನಾ ನಿರ್ವಹಣೆ ಯಶಸ್ವಿಯಾಗಿ ಮಾಡಿದ್ದೇವೆ ಎನ್ನುವ ಸರ್ಕಾರ ಸತ್ತವರ ಶವವನ್ನು ಕೂಡ ಸರಿಯಾಗಿ ಅಂತ್ಯಕ್ರಿಯೆ ಮಾಡದೆ, ಸಾಮೂಹಿಕವಾಗಿ ಹೂಳಲಾಯಿತು. ಕೊರೊನಾ ಸಂದರ್ಭದಲ್ಲಿ ಉಂಟಾದ ನಿರುದ್ಯೋಗ ಸಮಸ್ಯೆಯಿಂದಾಗಿ 1.57 ಲಕ್ಷ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ. ಇದಕ್ಕೆ ಯಾರು ಹೊಣೆ’ ಎಂದೂ ಪ್ರಶ್ನಿಸಿದರು.

‘ಕೊರೊನಾ ಸಂದರ್ಭದಲ್ಲಿ ಕಾರ್ಮಿಕರಿಗೆ ₹237 ಕೋಟಿ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ಕಾರ್ಮಿಕರ ಕಲ್ಯಾಣ ನಿಧಿ ಕಾರ್ಮಿಕರೇ ನೀಡಿರುವ ಹಣ, ಸರ್ಕಾರ ಕೈಯಿಂದ ಕೊಟ್ಟಿರುವುದಲ್ಲ. ಇದನ್ನು ತಮ್ಮದೇ ಸಾಧನೆ ಎಂದು ಹೇಳುತ್ತಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ₹6 ಸಾವಿರ ಕೇಂದ್ರ ಸರ್ಕಾರ ನೀಡುತ್ತದೆ. ಇದಕ್ಕೆ ಯಡಿಯೂರಪ್ಪ ಅವರ ಸರ್ಕಾರ ₹4 ಸಾವಿರ ರೂಪಾಯಿ ಸೇರಿಸಿ ಒಟ್ಟು ₹10 ಸಾವಿರ ಹಣ ನೀಡ್ತೇವೆ ಎಂದರು. ಆದರೆ, ಇವತ್ತಿನವರೆಗೆ ರಾಜ್ಯ ಸರ್ಕಾರ ₹2 ಸಾವಿರ ಕೊಟ್ಟಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಜ್ಯದಲ್ಲಿ ಒಟ್ಟು 87 ಲಕ್ಷ ರೈತ ಕುಟುಂಬಗಳಿವೆ, ಆದರೆ ಈ ಯೋಜನೆಯಡಿ ಹಣ ಪಡೆದವರು ಕೇವಲ 50 ಲಕ್ಷ ಕುಟುಂಬಗಳು ಮಾತ್ರ’ ಎಂದರು.

‘ಪ್ರವಾಹದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್‌ ನಿಯಮಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿಡಿದ್ದೆ, ಕೊನೆಗೆ ಎರಡು ಪಟ್ಟು ಮಾಡಿದರು. ಆದರೆ, ಇವತ್ತಿನವರೆಗೆ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ ಎನ್ನುತ್ತಾರೆ, ನಮ್ಮ ಸರ್ಕಾರದ ವಿದ್ಯಾಸಿರಿ, ಅರಿವು ಯೋಜನೆ ನಿಲ್ಲಿಸಿದ್ದಾರೆ. ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನಿಲ್ಲಿಸಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದು ಹೇಳಿ ಎಂಟು ವರ್ಷ ಆಯಿತು. ಇವತ್ತಿನವರೆಗೆ ಆದಾಯ ದುಪ್ಪಟ್ಟಾಗಲೇ ಇಲ್ಲ. ಇದನ್ನು ಮಾಡುವುದು ಬಿಟ್ಟು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದರು. 700ಕ್ಕೂ ಹೆಚ್ಚು ರೈತರು ಸತ್ತ ಮೇಲೆ ವಾಪಾಸು ಪಡೆದಿದ್ದಾರೆ. ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಕೃಷಿಕರಲ್ಲದವರು ಜಮೀನು ಖರೀದಿಸಲು ಅವಕಾಶ ಮಾಡಿಕೊಟ್ಟರು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಖರೀದಿಗೆ ಮುಕ್ತ ಅವಕಾಶ ನೀಡಿದ್ದರಿಂದ ಎಪಿಎಂಸಿಗಳು ನಷ್ಟದ ಹಾದಿ ಹಿಡಿದಿವೆ. ಎಪಿಎಂಸಿ ಗಳಿಂದ 2019-20 ರಲ್ಲಿ ₹600 ಕೋಟಿ ಆದಾಯ ಬಂದಿತ್ತು, ಈಗದು ₹106 ಕೋಟಿಗೆ ಇಳಿದಿದೆ’ ಎಂದರು.

‘ಕನಿಷ್ಠ ಬೆಂಬಲ ಬೆಲೆ ನೀಡಿ ಬೆಳಗಳ ಖರೀದಿ ಮಾಡುತ್ತಿಲ್ಲ. 2020-21 ರಲ್ಲಿ 12 ಲಕ್ಷ ಟನ್ ಭತ್ತ ಖರೀದಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು, ಈ ಬಾರಿ ಕೇವಲ 5 ಲಕ್ಷ ಟನ್ ಖರೀದಿ ಮಾಡಲು ನಿರ್ಧಾರ ಮಾಡಿದ್ದಾರೆ. ರಾಗಿಯನ್ನು 5 ಲಕ್ಷ ಟನ್‌ನಿಂದ 2 ಲಕ್ಷ ಟನ್ ಗೆ ಇಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸಿ, ಎಲ್ಲಾ ಬೆಳೆಗಳನ್ನು ಖರೀದಿ ಮಾಡಿ ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಅದನ್ನು ಸರ್ಕಾರ ಮಾಡುತ್ತಿಲ್ಲ. 2 ಲಕ್ಷ ಟನ್ ತೊಗರಿ ಖರೀದಿ ಮಾಡಬೇಕಿತ್ತು, ಆದರೆ ಕೇವಲ 40 ಸಾವಿರ ಟನ್ ಮಾತ್ರ ಖರೀದಿ ಮಾಡಿದ್ದಾರೆ. ಉಳಿದದ್ದು ಖರೀದಿ ಮಾಡುತ್ತಾರೊ ಇಲ್ಲವೋ ಗೊತ್ತಿಲ್ಲ’ ಎಂದರು.

‘ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ ಎನ್ನುವ ಪ್ರಧಾನಿ, ಈ ವರ್ಷ ₹7.5 ಲಕ್ಷ ಕೋಟಿ ಮೌಲ್ಯದ ಪದಾರ್ಥಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದ್ದಾರೆ. ₹1.5 ಲಕ್ಷ ಕೋಟಿಯ ಉತ್ಪನ್ನಗಳನ್ನು ರಫ್ತು ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಕಾರ್ಪೊರೇಟ್ ಕಂಪನಿಗಳು ₹ 12.5 ಲಕ್ಷ ಕೋಟಿ ಲಾಭ ಗಳಿಸಿವೆ. ಅವರ ಮೇಲೆ ಈ ಹಿಂದೆ ಇದ್ದ ಶೇ 30 ತೆರಿಗೆಯನ್ನು ಶೇ 22.5ಕ್ಕೆ  ಇಳಿಸಲಾಗಿದೆ. ಸಾಮಾನ್ಯ ಜನ ಖರೀದಿ ಮಾಡುವ ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ, ಸಿಮೆಂಟ್, ರಸ ಗೊಬ್ಬರದ ಮೇಲೆ ತೆರಿಗೆ ಹೆಚ್ಚು ಮಾಡಲಾಗಿದೆ. ಗ್ಯಾಸ್‌ಗೆ ನೀಡುತ್ತಿದ್ದ ಸಹಾಯಧನ ನಿಲ್ಲಿಸಲಾಗಿದೆ. ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದು ಶ್ರೀಮಂತರ ಹೊಟ್ಟೆ ತುಂಬಿಸುತ್ತಿದೆ’ ಎಂದು ಆರೋಪಿಸಿದರು.

‘ಮೇಕೆದಾಟು, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದರು. ಮಹದಾಯಿ ಅಧಿಸೂಚನೆ ಆಗಿದೆ. ಗೋವಾ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಯೋಜನೆ ಜಾರಿ ಮಾಡಲು ಏನಾಗಿದೆ? ಗೋವಾದಲ್ಲೂ ಬಿಜೆಪಿ, ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಸಮಸ್ಯೆ ಏನು? ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಯ ಪುನರ್ವಸತಿ ಕಾರ್ಯಗಳು ಏನಾಗಿವೆ? ಮೇಕೆದಾಟು ಯೋಜನೆಗೆ ಪರಿಸರ ಅನುಮತಿ ಪತ್ರ ಮಾತ್ರ ಬೇಕಿದೆ. ಇದೊಂದು ಪಡೆಯಲು ಆಗಲ್ಲವೇ’ ಎಂದೂ ಪ್ರಶ್ನಿಸಿದರು.

‘2017-18ರ ನನ್ನ ಬಜೆಟ್ ₹2.02 ಲಕ್ಷ ಕೋಟಿ ಇತ್ತು, ಈ ವರ್ಷದ ಬಜೆಟ್ ಗಾತ್ರ ₹ 2.47 ಲಕ್ಷ ಕೋಟಿ. ನಮ್ಮ ಸರ್ಕಾರ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ ನೀಡಿದ್ದ ಹಣ ₹ 30,150 ಕೋಟಿ, ಈ ವರ್ಷ ನೀಡಿರುವ ಹಣ ₹ 25,000 ಕೋಟಿ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ಮೀಸಲಿಡಬೇಕಿದ್ದ ಹಣ ಕೂಡ ಹೆಚ್ಚಾಗಬೇಕಿತ್ತು, ಆದರೆ, ಕಡಿಮೆಯಾಗಿದೆ ಏಕೆ? ಇದು ದಲಿತರಿಗೆ ಬಿಜೆಪಿ ಎಸಗಿದ ದ್ರೋಹ’ ಎಂದು ಟೀಕಿಸಿದರು.

‘ಗಂಗಾ ಕಲ್ಯಾಣ ಯೋಜನೆಗೆ ನಮ್ಮ ಸರ್ಕಾರದ ಅವಧಿಯಲ್ಲಿ (2017-18) ₹300 ಕೋಟಿ ಖರ್ಚು ಮಾಡಲಾಗಿತ್ತು, ಯಡಿಯೂರಪ್ಪ ಮುಖ್ಯಮಂತ್ರಿ ಆದಮೇಲೆ 2018-19 ರಲ್ಲಿ ₹ 200 ಕೋಟಿಗೆ ಇಳಿಸಿದರು. ಈ ವರ್ಷ ₹30 ಕೋಟಿ ಮಾತ್ರ ನೀಡಿದ್ದಾರೆ. 300 ಕೋಟಿ ಎಲ್ಲಿ, ₹30 ಕೋಟಿ ಎಲ್ಲಿ. ಪರಿಶಿಷ್ಟ ಜಾತಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಮ್ಮ ಸರ್ಕಾರ ಇದ್ದಾಗ 2017-18 ರಲ್ಲಿ ₹164 ಕೋಟಿ ಹಣ ನೀಡಿದ್ದೆ, ಈ ವರ್ಷ ಅದನ್ನು ₹50 ಕೋಟಿಗೆ ಇಳಿಸಿದ್ದಾರೆ. ಟಿಎಸ್‌ಪಿ ಅಡಿ ನಾವು ₹63 ಕೋಟಿ ನೀಡಿದ್ದೆವು, ಈ ವರ್ಷ ಅದು ₹20 ಕೋಟಿಗೆ ಇಳಿದಿದೆ. ಇದರಿಂದ ನಾಡಿನ ದಲಿತರಿಗೆ ಅನ್ಯಾಯವಾಗಲ್ಲವೇ. ಇದೇನಾ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು’ ಎಂದರು.

‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರ ಶೇ 40 ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ದೂರು ನೀಡಿದ್ದಾರೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಿ ಇದನ್ನು ನೋಡಿಯೂ ಸುಮ್ಮನಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು