ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರದ್ದು ತೌಡು ಕುಟ್ಟುವ ಭಾಷಣ: ಸಿದ್ದರಾಮಯ್ಯ

Last Updated 10 ಫೆಬ್ರವರಿ 2023, 10:41 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಇದು ಬೂಸಾ ಅಥವಾ ತೌಡು ಕುಟ್ಟುವ ಭಾಷಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶುಕ್ರವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ. ಯಾವ ಸಾಧನೆ ಮಾಡದಿರುವುದನ್ನು ಸರ್ಕಾರವೇ ಸ್ವತಃ ಒಪ್ಪಿಕೊಂಡಿದೆ. ಹೀಗಾಗಿ, ಸರ್ಕಾರ ಸಿದ್ಧಪಡಿಸಿದ ಈ ಭಾಷಣವನ್ನು ಬೂಸಾ ಅಥವಾ ತೌಡು ಕುಟ್ಟುವ ಭಾಷಣವೆಂದು ಕರೆಯುತ್ತೇನೆ’ ಎಂದು ಲೇವಡಿ ಮಾಡಿದ್ದಾರೆ.

‘ಒಟ್ಟಾರೆ, ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಭ್ರಷ್ಟಾಚಾರ, ಧರ್ಮ-ಜಾತಿ ಸಂಘರ್ಷವನ್ನು ಬೆಳೆಸಿದ್ದು ಹೊರತುಪಡಿಸಿದರೆ ಬೇರೆ ಸಾಧನೆಗಳನ್ನು ಮಾಡಿಲ್ಲ ಎನ್ನುವುದನ್ನು ರಾಜ್ಯಪಾಲರ ಭಾಷಣದಲ್ಲಿ ಒಪ್ಪಿಕೊಳ್ಳಲಾಗಿದೆ. ತನ್ನ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ರಾಜ್ಯಪಾಲರು ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ರಾಜ್ಯಪಾಲರ ಮೂಲಕ ಸರ್ಕಾರ ಹೇಳಿಸಿರುವ ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಕ್ರಮಗಳಾಗಿವೆ. ರಾಜ್ಯದ ಆದಾಯಕ್ಕೆ ಬೆಂಗಳೂರಿನ ಕೊಡುಗೆ ಶೇ 70ಕ್ಕಿಂತ ಹೆಚ್ಚು. ಆದರೆ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾದ ಯಾವುದೇ ಯೋಜನೆಗಳು ಇಲ್ಲ. ರಾಜ್ಯಪಾಲರು ತಮ್ಮ ಭಾಷಣದ ಪ್ಯಾರಾ ಸಂಖ್ಯೆ 39ರಲ್ಲಿ ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಡಾ.ಶಿವರಾಮ ಕಾರಂತ ಬಡಾವಣೆಗಳ ಪ್ರಸ್ತಾಪಿಸಿದ್ದಾರೆ. ಈ ಎಲ್ಲ ಬಡಾವಣೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭಗೊಂಡಿದ್ದವು’ ಎಂದು ವಿವರಿಸಿದ್ದಾರೆ.

‘ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ರಾಜ್ಯವು ಇಂದು ಅನುಭವಿಸುತ್ತಿರುವ ದೊಡ್ಡ ಸಮಸ್ಯೆ ಭ್ರಷ್ಟಾಚಾರದ್ದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಒಂದೂ ಮಾತು ಪ್ರಸ್ತಾಪಿಸಿಲ್ಲ. ಆದ್ದರಿಂದ, ಸರ್ಕಾರ ಭ್ರಷ್ಟಾಚಾರದ ಪರವಾಗಿರುವುದನ್ನು ರಾಜ್ಯಪಾಲರ ಭಾಷಣವು ದೃಢೀಕರಿಸುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT