ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಚೌಕಟ್ಟಿನಲ್ಲಿ ಸಿದ್ದರಾಮೋತ್ಸವ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್‌ ‘ಬಣ’ ರಾಜಕೀಯದ ಕಿಚ್ಚಿನ ಚರ್ಚೆಗೆ ತೇಪೆ ಹಚ್ಚಿದ ಕೆಪಿಸಿಸಿ
Last Updated 7 ಜುಲೈ 2022, 19:02 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನಾಚರಣೆ ‘ಸಿದ್ದರಾಮೋತ್ಸವ’ ಕಾಂಗ್ರೆಸ್‌ ನಾಯಕರ ಮಧ್ಯೆ ನಾನಾ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೆ, ‘ಪಕ್ಷದ ಚೌಕಟ್ಟಿನಲ್ಲಿಯೇ ಈ ಕಾರ್ಯಕ್ರಮ ನಡೆಯಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದ್ದಾರೆ. ಆ ಮೂಲಕ, ಈ ಕಾರ್ಯಕ್ರಮ ಕಾಂಗ್ರೆಸ್‌ನಲ್ಲಿ ‘ಬಣ’ ರಾಜಕೀಯದ ಕಿಚ್ಚಿಗೆ ಕಾರಣವಾಗಬಹುದೆಂಬ ಚರ್ಚೆಗಳಿಗೆ ಅಂತ್ಯ ಹಾಡಿದ್ದಾರೆ.

ಪಕ್ಷ ಸಂಘಟನೆ,ದೇಶದ 75ನೇ ಸ್ವಾತಂತ್ರ್ಯ ದಿನಾಚಾರಣೆ ಅಂಗವಾಗಿ ಪಕ್ಷ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಪದಾಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಪಕ್ಷದ ವೇದಿಕೆಯಲ್ಲಿಯೇ ಸಿದ್ದರಾಮೋತ್ಸವ ಆಯೋಜಿಸಲು ಸಿದ್ದರಾಮಯ್ಯ ಅವರ ಅಭಿಮಾನಿಗಳು, ಹಿತೈಷಿಗಳುತೀರ್ಮಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ಆಹ್ವಾನ ನೀಡಲಾಗಿದೆ. ಅವರು ಬರಲು ಸಮ್ಮತಿಸಿದ್ದಾರೆ. ನಾವೆಲ್ಲರೂ ಭಾಗವಹಿಸುತ್ತೇವೆ’ ಎಂದರು.

ಸಭೆಯಲ್ಲಿ ಸಿದ್ದರಾಮೋತ್ಸವವನ್ನು ಪ್ರಸ್ತಾಪಿಸಿದ ಶಿವಕುಮಾರ್‌, ‘ಈ ಸಮಾವೇಶದಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 165 ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಉತ್ತಮ ಆಡಳಿತ ಮತ್ತು ಅವರ ಯೋಜನೆಗಳನ್ನು ಈ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತೆಗೆದುಕೊಂಡು ಹೋಗೋಣ’ ಎಂದರು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಅಭಿಮಾನಿಗಳು ಸಮಾವೇಶ ಮಾಡಲು ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿ ವೈಯಕ್ತಿಕವಾಗಿ ಯಾರಿಗೂ ಆಹ್ವಾನ ನೀಡಿಲ್ಲ. ಯಾವ ಪಕ್ಷದವರಿಗೂ ಆಹ್ವಾನ ಕೊಟ್ಟಿಲ್ಲ. ಇದೇ ತಿಂಗಳ 13ರಂದು ಅರಮನೆ ಮೈದಾನದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಲಿದೆ’ ಎಂದರು.

ಪಕ್ಷಾತೀತ ‘ಸ್ವಾತಂತ್ರ್ಯ ನಡಿಗೆ’: ‘ದೇಶದ 75ನೇ ಸ್ವಾತಂತ್ರ್ಯ ದಿನಾಚಾರಣೆ ಅಂಗವಾಗಿ ಆ. 15ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿವರೆಗೂ ರಾಷ್ಟ್ರಧ್ವಜ ಹಿಡಿದು ‘ಸ್ವಾತಂತ್ರ್ಯ ನಡಿಗೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದುಪಕ್ಷಾತೀತವಾಗಿದ್ದು, ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕ್ರೀಡಾಪಟುಗಳು, ಕಲಾವಿದರು ಭಾಗವಹಿಸಬಹುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

‘ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ರಾಜ್ಯದಲ್ಲಿ ಪಾದಯಾತ್ರೆ ಮೂಲಕ ಆಚರಿಸಲು ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಎಷ್ಟು ತಾಲ್ಲೂಕುಗಳಲ್ಲಿ ಪಾದಯಾತ್ರೆ ಮಾಡಬೇಕು ಎಂಬುದನ್ನು ಆಯಾ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಬಿಟ್ಟಿದ್ದೇವೆ. ಆ. 1ರಿಂದ ಆ. 10ರವರೆಗೆ ಅಥವಾ ಅದಕ್ಕಿಂತ ಮೊದಲು ಬೇಕಾದರೂ ಈ ಪಾದಯಾತ್ರೆ ಮಾಡಬಹುದು’ ಎಂದರು.

‘ತಿಂಗಳಲ್ಲಿ 20 ದಿನ ಪಕ್ಷಕ್ಕೆ ಮೀಸಲಿಡಿ’

‘ಮುಂದಿನ 10 ತಿಂಗಳು ತಮಗೆ ವಹಿಸಿರುವ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ತಿಂಗಳಿಗೆ 20 ದಿನ ಕೆಲಸ ಮಾಡಬೇಕು. ಬೂತ್‌ಮಟ್ಟದಿಂದ ಪಂಚಾಯಿತಿವರೆಗೆ ಎಲ್ಲ ವಿಭಾಗಗಳಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಕ್ಷ ಸಂಘಟಿಸಬೇಕು. 50 ವರ್ಷ ಒಳಗಿನವರು ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಆಗಿರುವಂತೆ ನೋಡಿಕೊಳ್ಳಬೇಕು. ಐದು ವರ್ಷ ಅಥವಾ 2–3 ಅವಧಿಗೆ ಅಧ್ಯಕ್ಷರಾಗಿದ್ದವರಿಗೆ ಬಡ್ತಿ ನೀಡಿ, ಆ ಸ್ಥಾನ ಹೊಸಬರಿಗೆ ನೀಡಬೇಕು. ಪ್ರಧಾನ ಕಾರ್ಯದರ್ಶಿಗಳು ಪಂಚಾಯಿತಿ ಮಟ್ಟದಲ್ಲಿ ಪ್ರವಾಸ ಮಾಡಬೇಕೆಂದು ಪದಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT