ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ‘ಮೋದಿ ಪಲಾವ್‌’ ಮಾಡಿ ಪ್ರತಿಭಟಿಸಿದ ಕಾಂಗ್ರೆಸ್‌

Last Updated 5 ಫೆಬ್ರುವರಿ 2021, 13:07 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಕಾರ್ಮಿಕ ವಿಭಾಗವು ಶುಕ್ರವಾರ ಗಾಂಧಿ ಭವನದ ಎದುರು ಸೌದೆ ಒಲೆಯಲ್ಲಿ ‘ಮೋದಿ ಪಲಾವ್‌’ ಮಾಡುವ ಮೂಲಕ ಪ್ರತಿಭಟನೆ ನಡೆಸಿತು.

‘ಮೋದಿ ಹಠಾವೊ, ದೇಶ್‌ ಬಚಾವೊ’, ‘ಡೌನ್‌ ಡೌನ್‌ ಬಿಜೆಪಿ’ ಹೀಗೆ ಹಲವು ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ವ್ಯಂಗ್ಯ ಚಿತ್ರಗಳನ್ನೊಳಗೊಂಡ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

‘ಯು‍‍ಪಿಎ ಸರ್ಕಾರದ ಅವಧಿಯಲ್ಲಿ ₹65ಕ್ಕೆ ಒಂದು ಲೀಟರ್‌ ಪೆಟ್ರೋಲ್‌ ಸಿಗುತ್ತಿತ್ತು. ₹350ಕ್ಕೆ ಗ್ಯಾಸ್‌ ಸಿಲಿಂಡರ್‌ ಲಭ್ಯವಿತ್ತು. ಇದನ್ನು ವಿರೋಧಿಸಿ ಈಗ ಸಚಿವರಾಗಿರುವ ಸ್ಮೃತಿ ಇರಾನಿ, ಪ್ರಕಾಶ್‌ ಜಾವಡೇಕರ್‌ ಹಾಗೂ ಇನ್ನಿತರ ನಾಯಕರು ಮನಮೋಹನ್‌ ಸಿಂಗ್‌ ವಿರುದ್ಧ ಮುಗಿಬಿದ್ದಿದ್ದರು. ಈಗ ಅವರದೇ ಆಡಳಿತದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ದರ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ಕುರಿತು ಬಿಜೆಪಿ ಸರ್ಕಾರದ ಯಾರೊಬ್ಬರೂ ಸೊಲ್ಲೆತ್ತುತ್ತಿಲ್ಲ. ಇದು ಅವರ ದ್ವಿಮುಖ ನೀತಿಗೆ ಹಿಡಿದ ಕೈಗನ್ನಡಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ದೂರಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕೂಡಲೇ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಮುಂದಿನ ಮಂಗಳವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇದಕ್ಕೂ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದೂ ಅವರು ಎಚ್ಚರಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ, ಉಪಾಧ್ಯಕ್ಷೆ ಕೆ.ಸಿ.ಹರಿಣಿಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ದಿನೇಶ್‌, ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷರಾದ ಕೃಷ್ಣಪ‍್ಪ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT