ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Last Updated 9 ಫೆಬ್ರುವರಿ 2021, 10:04 IST
ಅಕ್ಷರ ಗಾತ್ರ

ಬೆಂಗಳೂರು: ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಬ್ಯಾಂಕ್ ವೃತ್ತದ ಬಳಿ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರು. ರಸ್ತೆಯಲ್ಲೇ ಅಡುಗೆ ತಯಾರಿ, ಬೈಕ್ ಅಣಕು ಶವ ಯಾತ್ರೆ, ಕುದುರೆ ಸವಾರಿ, ಎತ್ತಿನ ಗಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ಎಳೆಯುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಶಾಸಕ ದಿನೇಶ್ ಗುಂಡೂರಾವ್, ‘ಪ್ರಧಾನಿ ಮೋದಿ ದಬ್ಬಾಳಿಕೆಯ ಮೂಲಕ‌ ದೇಶ ಆಳುತ್ತಿದ್ದಾರೆ. ಪೆಟ್ರೋಲ್‌ಗೆ ಆಗಿರುವ ಬೆಲೆ ಏರಿಕೆಯಲ್ಲಿ ₹ 33 ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ವಿದೇಶದಲ್ಲಿ ಬೆಲೆ ಕಡಿಮೆ‌ ಆಗಿದ್ದರೂ ಹಣ ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೆರಿಗೆ ಜಾಸ್ತಿ ಮಾಡಿದೆ’ ಎಂದು ದೂರಿದರು.

‘ಪ್ರಧಾನಿ ಹಿಟ್ಲರ್‌ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಈ ನಡವಳಿಕೆಯನ್ನು ಹೆಚ್ಚು ದಿನ ಸಹಿಸಿಕೊಳ್ಳಲು ಆಗುವುದಿಲ್ಲ. ದೇಶ ತಪ್ಪು ದಾರಿಯಲ್ಲಿ ಹೋಗುತ್ತಿದೆ. ದೇಶ ಒಗ್ಗೂಡಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ. ಎಲ್ಲರೂ ಸೇರಿ ಒಟ್ಟಾಗಿ ಜನರಿಗೋಸ್ಕರ ಹೋರಾಟ ಮಾಡಬೇಕು’ ಎಂದು ಪಕ್ಷದ ಕಾರ್ಯರ್ತರಿಗೆ ಮನವಿ ಮಾಡಿದರು.

‘ಕೇಂದ್ರ ಸರ್ಕಾರ ಲಜ್ಜೆಗೆಟ್ಟ ಸರ್ಕಾರ. ಇಡೀ ದೇಶದ ಜನರು ಬೇಸತ್ತು ಹೋಗಿದ್ದಾರೆ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ಫ್ಯಾಶನ್ ಶೋ ಮಾಡುತ್ತಿದ್ದಾರೆ. ದಿನಕ್ಕೊಂದು ಹೊಸ ಬಟ್ಟೆ ಹಾಕುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಹೀಗಾಗಿ ರವೀಂದ್ರನಾಥ ಟ್ಯಾಗೋರ್ ತರ ಕಾಣಬೇಕೆಂದು ಈಗ ಗಡ್ಡ ಬಿಟ್ಟಿದ್ದಾರೆ’ ಎಂದು ಶಾಸಕ ರಿಜ್ವಾನ್ ಅರ್ಷದ್ ವ್ಯಂಗ್ಯವಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾ ರೆಡ್ಡಿ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT