ಶನಿವಾರ, ಆಗಸ್ಟ್ 20, 2022
21 °C
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ‘ಪಾಠ’ l

ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ‘ಕೈ’ ತಯಾರಿ: ವೈಫಲ್ಯಗಳೇ ಅಸ್ತ್ರ –ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇದೇ 21ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟು, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ‘ಕೈ’ ಪಾಳಯ ಸಿದ್ಧತೆ ನಡೆಸಿದೆ.

ಕೊರೊನಾ ನಿರ್ವಹಣೆ, ಡಿ.ಜೆ. ಹಳ್ಳಿ ಗಲಭೆ, ಡ್ರಗ್ಸ್ ಜಾಲ, ಕಾನೂನು ಸುವ್ಯವಸ್ಥೆ, ಪ್ರವಾಹ, ಸುಗ್ರೀವಾಜ್ಞೆ ಮೂಲಕ ವಿವಿಧ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ಮತ್ತಿತರ ವಿಷಯಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲು ವಿರೋಧ ಪಕ್ಷ ನಿರ್ಧರಿಸಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸುಮಾರು ಆರು ತಾಸು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೇವಲ ಎಂಟು ದಿನಗಳ ಅವಧಿಗೆ ಅಧಿವೇಶನ ಕರೆಯಲಾಗಿದೆ. ಹೀಗಾಗಿ, ಕಲಾಪದ ಅವಧಿಯಲ್ಲಿ ಸಮಯ ವ್ಯರ್ಥ ಮಾಡಬಾರದು. ಸಿಗುವ ಸಮಯವನ್ನು ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವ ನಿರ್ಣಯಕ್ಕೆ ಬರಲಾಗಿದೆ.

ಸದನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳು ಮತ್ತು ಅನುಸರಿಸಬೇಕಾದ ನಿಲುವುಗಳಬಮಗ್ಗೆ ಸದಸ್ಯರಿಗೆ ಸಿದ್ದರಾಮಯ್ಯ ವಿವರಿಸಿದರು.

‘ಡ್ರಗ್ಸ್ ಹಗರಣದ ಚರ್ಚೆಯನ್ನು ಸರ್ಕಾರ ಮುನ್ನೆಲೆಗೆ ತಂದು ಬೇರೆ ವಿಚಾರಗಳನ್ನು ಬದಿಗೆ ತರಿಸುವ ಪ್ರಯತ್ನ ಮಾಡಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು. ಸರ್ಕಾರದ ವೈಫಲ್ಯಗಳು ಜನರಿಗೆ ಮನದಟ್ಟು ಆಗುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕಾರ್ಯತಂತ್ರ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು ಸರ್ಕಾರ ದಿವಾಳಿಯಾಗಿದೆ. ಪಿಂಚಣಿ ನೀಡಲೂ ಪರದಾಡುವ ಸ್ಥಿತಿಗೆ ತಲುಪಿದೆ. ಲಾಕ್‍ಡೌನ್ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ ಘೋಷಿಸಿದ ಪರಿಹಾರವೂ ಸಿಕ್ಕಿಲ್ಲ. ಇವೆಲ್ಲವನ್ನೂ ಸದನದಲ್ಲಿ ಚರ್ಚಿಸಬೇಕಿದೆ’ ಎಂದು ಹೇಳಿದರು.

ಸದನದಲ್ಲಿ ಮಂಡಿಸಬೇಕಾದ ನಿಲುವಳಿ ಸೂಚನೆ, ಗಮನ ಸೆಳೆಯುವ ಸೂಚನೆಗಳ ಬಗ್ಗೆಯೂ ಅವರು ಸದಸ್ಯರಿಗೆ ವಿವರಿಸಿದರು.

‌ಆರೋಗ್ಯ ಕಾಳಜಿ ಇರಲಿ: ‘ಕಲಾಪದಲ್ಲಿ ಎಲ್ಲ ಶಾಸಕರು ಸಕ್ರಿಯವಾಗಿ ಭಾಗವಹಿಸುವ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಸಿದ್ದರಾಮಯ್ಯ  ಮನವಿ ಮಾಡಿದರು.

‘ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. ಅಧಿವೇಶನಕ್ಕೆ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದೂ ಸಲಹೆ ನೀಡಿದರು.

ಶಾಸಕರಿಗೆ ‘ಪ್ರಶ್ನೆಗಳ ಬ್ಯಾಂಕ್’

‘ಇದೇ ಮೊದಲ ಬಾರಿಗೆ ಪ್ರಶ್ನೆಗಳ ಬ್ಯಾಂಕ್ ಸಿದ್ಧಪಡಿಸಲಾಗಿದೆ. ಅದನ್ನು ಎಲ್ಲ ಶಾಸಕರು ಬಳಸಿಕೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ಸಾಮಾಜಿಕ ಜಾಲತಾಣವನ್ನು ಎಲ್ಲ ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದೂ ಅವರು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು