ಶುಕ್ರವಾರ, ಅಕ್ಟೋಬರ್ 7, 2022
23 °C

ಸರ್ಕಾರವೇ ಮುಂದೆ ನಿಂತು ಪಿಎಸ್ಐ ನೇಮಕಾತಿ ಅಕ್ರಮ ನಡೆಸಿದೆಯೇ: ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವರಾಜ ದಢೇಸಗೂರು ಹಾಗೂ ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌, ಕುಷ್ಟಗಿ ತಾಲ್ಲೂಕಿನ ಪರಸಪ್ಪ ದೂರವಾಣಿ ಮೂಲಕ ನಡೆಸಿರುವ ಸಂಭಾಷಣೆಯ ಆಡಿಯೊ ತುಣಕನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ.

ಟ್ವಿಟರ್‌ನಲ್ಲಿ ಆಡಿಯೊ ಹಂಚಿಕೊಂಡಿರುವ ಕಾಂಗ್ರೆಸ್‌, 'ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ' ಎಂದಿದ್ದ ಬಸವರಾಜ ಬೊಮ್ಮಾಯಿ ಅವರೇ ಹಾಗೂ ಆರಗ ಜ್ಞಾನೇಂದ್ರ ಅವರೇ, ಪಿಎಸ್‌ಐ ಅಭ್ಯರ್ಥಿಯಿಂದ ನಿಮ್ಮದೇ ಪಕ್ಷದ ಶಾಸಕ ಹಣ ಪಡೆದಿದ್ದು ಬೆಳಕಿಗೆ ಬಂದರೂ 'ಮೌನವ್ರತ' ಮಾಡ್ತಿರೋದೇಕೆ? ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದಿದ್ದಾರೆ ಶಾಸಕರು. ಸರ್ಕಾರವೆಂದರೆ ಯಾರು? ಇಡೀ ಸರ್ಕಾರವೇ ಮುಂದೆ ನಿಂತು ಅಕ್ರಮವನ್ನ ನಡೆಸಿದೆಯೇ? ಎಂದು ಪ್ರಶ್ನಿಸಿದೆ.

ಇದನ್ನು ಓದಿ: 

ಮತ್ತೊಂದು ಟ್ವೀಟ್‌ನಲ್ಲಿ, 'ಪಿಎಸ್‌ಐ ಹಗರಣದಲ್ಲಿ ಸರ್ಕಾರಕ್ಕೆ ಮದ್ಯವರ್ತಿಯಾಗಿದ್ದೇನೆ' ಎಂದು ಶಾಸಕ ಬಸವರಾಜ್ ದಢೇಸಗೂರು ಹೇಳಿದ್ದಾರೆ. ಸರ್ಕಾರ ಎಂದರೆ ಯಾರು? ಮುಖ್ಯಮಂತ್ರಿಗಳೇ? ಗೃಹ ಸಚಿವರೇ? ಅಥವಾ ಇತರ ಸಚಿವರೇ? ಶಾಸಕರು ಹೇಳಿದಂತೆ ಸರ್ಕಾರದ ಪರವಾಗಿ ಹಣ ಸ್ವೀಕರಿಸಿದವರು ಯಾರು? ನಾಡಿನ ಜನತೆಗೆ ಸಿಎಂ ಉತ್ತರಿಸಬೇಕಾದ ಸಮಯವಿದು. ಆದರೆ, ಬಸವರಾಜ ಬೊಮ್ಮಾಯಿ ಅವರು ಮೌನವಹಿಸಿದ್ದೇಕೆ? ಎಂದೂ ಕೇಳಿದೆ.

'ಪಿಎಸ್ಐ‌ ನೌಕರಿ ಕೊಡಿಸುವುದಾಗಿ ಹೇಳಿ ನಿವೃತ್ತ ಕಾನ್‌ಸ್ಟೆಬಲ್‌ ಒಬ್ಬರಿಂದ ₹ 15 ಲಕ್ಷ ಪಡೆದಿದ್ದಾರೆ’ ಎಂದು ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಶಾಸಕ ದಢೇಸಗೂರು ವಿರುದ್ಧ ಆರೋಪ ಕೇಳಿಬಂದಿದೆ. ಕಾನ್‌ಸ್ಟೆಬಲ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಕುಷ್ಟಗಿ ತಾಲ್ಲೂಕಿನ ಬೇಗೂರು ಗ್ರಾಮದ ಪರಸಪ್ಪ ಮತ್ತು ದಢೇಸಗೂರು ನಡುವಿನ ಸಂಭಾಷಣೆಯು ಸೋಮವಾರ ವೈರಲ್‌ ಆಗಿತ್ತು.

ಇದನ್ನು ಓದಿ: 

'ವೈರಲ್ ಆದ ಆಡಿಯೊದಲ್ಲಿ ಇರುವ ಧ್ವನಿ ನನ್ನದೇ. ಆದರೆ, ನಾನು ಹಣ ಪಡೆದಿಲ್ಲ. ಬೇರೆ ಇಬ್ಬರ ‌ನಡುವೆ ಜಗಳವಾಗಿತ್ತು. ಅದನ್ನು ಪರಿಹರಿಸಲು ಕೋರಿ ನನ್ನ ಬಳಿ‌ ಅವರು ಬಂದಿದ್ದರು. ಅವರಿಬ್ಬರನ್ನೂ ಒಟ್ಟುಗೂಡಿಸಿ‌ ರಾಜಿ ಪಂಚಾಯಿತಿ ನಡೆಸಿದ್ದೆ. ಅದೇ ಸಂಭಾಷಣೆ ಈಗ ವೈರಲ್ ಮಾಡಿದ್ದಾರೆ' ಎಂದು ಬಸವರಾಜ ದಢೇಸಗೂರು ಸ್ಪಷ್ಟನೆ ನೀಡಿದ್ದರು.

ಆಡಿಯೊ ವೈರಲ್‌ ಆಗುತ್ತಿದ್ದಂತೆ ಪರಸಪ್ಪ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಆದರೆ, ಇಂದು (ಮಂಗಳವಾರ) ಪ್ರತಿಕ್ರಿಯೆ ನೀಡಿರುವ ಪರಸಪ್ಪ, ‘ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಆಡಿಯೊ ಬಿಡುಗಡೆಯಾಗಿತ್ತು. ಕಾರಟಗಿ ಪುರಸಭೆ ಸದಸ್ಯ ಆನಂದ ಎಂ. ಅವರೊಂದಿಗೆ ನಮ್ಮದು ಹಣದ ವ್ಯವಹಾರವಿತ್ತು. ತಂಟೆ ತಕರಾರು ಕೂಡ ಇತ್ತು. ಈ ಸಮಸ್ಯೆ ಪರಿಹರಿಸಿಕೊಡಿ ಎಂದು ಶಾಸಕ ದಢೇಸಗೂರು ಬಳಿ ಹೋಗಿದ್ದೆವು. ಪರಿಹರಿಸಿಕೊಡುವುದಾಗಿ ಭರವಸೆ ನೀಡಿ ಸಾಕಷ್ಟು ವಿಳಂಬ ಮಾಡಿದ್ದರು. ದಢೇಸಗೂರು ಸಾಹೇಬ್ರು ಮತ್ತು ನನ್ನ ನಡುವೆ ಯಾವುದೇ ದುಡ್ಡಿನ ವ್ಯವಹಾರವಾಗಿಲ್ಲ’ ಎಂದು ಹೇಳಿದ್ದಾರೆ.

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು