ಮಂಗಳವಾರ, ಸೆಪ್ಟೆಂಬರ್ 21, 2021
28 °C

ಕೆ.ಎಸ್.ಈಶ್ವರಪ್ಪ ಅವರಿಗೆ ಸಿ.ಎಂ ಸ್ಥಾನ ನೀಡಿ: ಹಿಂದುಳಿದ ವರ್ಗಗಳ ಮುಖಂಡರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದು ವರೆಯಬೇಕು. ಅವರನ್ನು ಬದಲಾವಣೆ ಮಾಡಿದರೆ, ಕುರುಬ ಸಮುದಾಯದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು’ ಎಂದು ಹಿಂದುಳಿದ ವರ್ಗಗಳ ಮುಖಂಡರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅಹಿಂದ ಮುಖಂಡ ಕೆ.ಮುಕುಡಪ್ಪ ಅವರು, ‘ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಕ್ಕಲಿಗ ಸಮುದಾಯದ ಡಿ.ವಿ.ಸದಾನಂದಗೌಡ ಹಾಗೂ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಗಾಗಿ, ಕುರುಬ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದರು.

ಕೋಲಿ ಸಮಾಜದ ಮುಖಂಡ ತಿಪ್ಪಾರೆಡ್ಡಿ, ಸವಿತಾ ಸಮಾಜದ ಶಿವಪ್ಪ, ಮಾಲಿ ಸಮಾಜದ ಬಸವರಾಜ ಬಾಳೇಕಾಯಿ, ಯಾದವ ಸಮಾಜದ ಪ್ರಸನ್ನ ಕುಮಾರ್, ವಿಶ್ವಕರ್ಮ ಸಮು ದಾಯದ ವಿಶ್ವನಾಥ್ ವಿಶ್ವಕರ್ಮ, ಈಡಿಗ ಸಮಾಜದ ಬಸವರಾಜ ಓಟೂರು ಸೇರಿದಂತೆ ಹಿಂದುಳಿದ ವರ್ಗಗಳ ಮುಖಂಡರು ಕೆ.ಎಸ್.ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು. 

ಹಿಂದುಳಿದ ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ: ಪ್ರೊ.ನರಸಿಂಹಪ್ಪ ಆಗ್ರಹ

‘ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರಾದ ಸಚಿವ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಶಾಸಕ ಸುನೀಲ್ ಕುಮಾರ್ ಈ ನಾಲ್ವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಹಿಂದುಳಿದ ವರ್ಗದ ಮುಖಂಡ ಹಾಗೂ ಹಿರಿಯ ಹೋರಾಟಗಾರ ಪ್ರೊ.ನರಸಿಂಹಪ್ಪ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಈಗ ಸಾಮಾನ್ಯ ವರ್ಗದ ಜನರೂ ಕೇಂದ್ರದ ಮಂತ್ರಿಗಳಾಗಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆಗಳು. ರಾಜ್ಯದ ಮಂತ್ರಿಮಂಡಲ ಕೆಲವೇ ವರ್ಗಗಳಿಗೆ ಸೀಮಿತಗೊಂಡಿದ್ದು, ಎಲ್ಲ ವರ್ಗಗಳಿಗೆ ಅವಕಾಶ ಸಿಗಬೇಕು. ಹಿಂದುಳಿದ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

ರಾಜು ಕ್ಷತ್ರಿಯ ಸಮಾಜದ ಮುಖಂಡ ಲಕ್ಷೀಕಾಂತ ರಾಜು, ‘ಸ್ವಾಮೀಜಿ ಗಳಿಗೆ ಮಠಗಳಲ್ಲಿ ಮಾಡಲು ಬಹಳಷ್ಟು ಕೆಲಸ ಇದೆ. ಅದನ್ನು ಬಿಟ್ಟು ಮಂತ್ರಿ ಗಳಂತೆ ಕೆಲಸ ಮಾಡುವುದು ಸರಿಯಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು