ಬುಧವಾರ, ಮೇ 18, 2022
23 °C

ಬೆಲೆ ಏರಿಕೆ ಬಿಸಿ: ಕಾದ ಕಬ್ಬಿಣ- ಸುಡುವ ಸಿಮೆಂಟ್

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಂತಕ್ಕೊಂದು ಬೆಚ್ಚನೆಯ ಗೂಡಿರಬೇಕು ಎಂಬುದು ಎಲ್ಲರ ಕನಸು. ಸ್ವಂತ ಸೂರಿನ ಕನಸು ನನಸಾಗಿಸಲು ಹೊರಟವರ ಕೈಗಳಿಗೆ ಬೆಲೆ ಏರಿಕೆಯ ಬಿಸಿಯಲ್ಲಿ ಕಾದಿರುವ ಕಬ್ಬಿಣ ಬರೆ ಹಾಕುತ್ತಿದ್ದರೆ, ಸುಡುತ್ತಿರುವ ಸಿಮೆಂಟ್ ಅವರ ಕನಸಿಗೇ ಕೊಳ್ಳಿ ಇಟ್ಟಿದೆ.

‘ಸಾಲ ಮಾಡಿ ಮನೆ ಕಟ್ಟು, ಮನೆ ಮಾರಿ ಸಾಲ ತೀರಿಸು’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಮನೆ ನಿರ್ಮಾಣಕ್ಕೆ ಮುಂದಾದವರು ಏಕಾಏಕಿ ಕಟ್ಟಡ ಸಾಮಗ್ರಿಗಳ ಬೆಲೆ ಏರಿದ್ದರಿಂದಾಗಿ ಸಾಲ ಮಾಡಿಯೂ ಮನೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. 

ಜಿಎಸ್‌ಟಿ ಮತ್ತು ಇಂಧನ ದರ ಏರಿಕೆಯಿಂದ ನಿರ್ಮಾಣ ವಲಯಕ್ಕೆ ಬೇಕಿರುವ ಕಚ್ಚಾ ವಸ್ತುಗಳ ಬೆಲೆಯೂ ಗಗನ ಮುಟ್ಟಿದೆ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ ಸೇರಿ ಎಲ್ಲಾ ವಸ್ತುಗಳ ಬೆಲೆಯೂ ಬಹುತೇಕ ದುಪ್ಪಟ್ಟಾಗಿದೆ. ಅದರಲ್ಲೂ ಕಳೆದ ಒಂದು ವರ್ಷದ ಅವಧಿಯಲ್ಲೇ ಶೇ 40ರಿಂದ ಶೇ 50ರಷ್ಟು ದರ ಹೆಚ್ಚಳವಾಗಿದೆ. ಸಾಧಾರಣ ದರ್ಜೆಯ 10 ಚದರ (ಒಂದು ಸಾವಿರ ಚದರ ಅಡಿ) ಮನೆ ನಿರ್ಮಾಣಕ್ಕೆ ₹10 ಲಕ್ಷ ಇದ್ದ ನಿರ್ಮಾಣ ವೆಚ್ಚ ಈಗ ₹20 ಲಕ್ಷ ದಾಟಿದೆ. ಒಳಾಂಗಣಕ್ಕೆ ಬಳಸುವ ವಸ್ತುಗಳ (ಮರ, ಟೈಲ್ಸ್, ಸ್ಯಾನಿಟರಿ ಸಲಕರಣೆ ಇತ್ಯಾದಿ) ಗುಣಮಟ್ಟಕ್ಕೆ ತಕ್ಕಂತೆ ನಿರ್ಮಾಣ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ.

ಕೂಡಿಟ್ಟಿರುವ ಹಣ, ಬ್ಯಾಂಕ್ ಸಾಲ ಎಲ್ಲವನ್ನೂ ಲೆಕ್ಕಾಚಾರ ಮಾಡಿಕೊಂಡು ಮನೆ ನಿರ್ಮಾಣಕ್ಕೆ ಒಂದು ವರ್ಷ
ಗಳ ಹಿಂದೆ ಯೋಜನೆ ಸಿದ್ಧಪಡಿಸಿ ಕೆಲಸ ಆರಂಭಿಸಿದವರು ಈಗ ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮನೆ ನಿರ್ಮಾಣ ಆರಂಭಿಸಿದಾಗ ಇದ್ದ ಖುಷಿ ಅವರ ಮುಖದಲ್ಲೀಗ ಮಾಯವಾಗಿದೆ. ಅರ್ಧಕ್ಕೆ ನಿಂತಿರುವ ಕಾಮಗಾರಿ ಬಗ್ಗೆ ಕೇಳಿದರೆ ಕಣ್ಣಾಲಿಗಳನ್ನು ತುಂಬಿಕೊಂಡು ನಿಲ್ಲುತ್ತಾರೆ.

‘ಬ್ಯಾಂಕ್‌ ಸಾಲ ದೊರೆತು ಕೆಲಸ ಆರಂಭಿಸುವಷ್ಟರಲ್ಲಿ ಒಂದು ವರ್ಷ ಕಳೆದು ಹೋಯಿತು. ಕೆಲಸ ಆರಂಭಿಸುವಷ್ಟರಲ್ಲಿ ಕಬ್ಬಿಣ, ಸಿಮೆಂಟ್, ಇಟ್ಟಿಗೆ ದರಗಳು ಹೆಚ್ಚಾಗಿವೆ. ಎರಡು ಮಹಡಿ ಮನೆಗೆಂದು ಹೊಂದಿಸಿದ್ದ ಹಣ ಒಂದೇ ಅಂತಸ್ತಿಗೆ ಮುಗಿದು ಹೋಗಿದೆ. ಮನೆ ಪೂರ್ಣಗೊಳಿಸುವುದು ಹೇಗೆ ಎಂಬ ದಿಕ್ಕೇ ತೋಚದಾಗಿದೆ’ ಎಂದು ಚನ್ನರಾಯಪಟ್ಟಣ ದಲ್ಲಿ ಮನೆ ನಿರ್ಮಿಸುತ್ತಿರುವ ಸಂತೋಷ್ ಹೇಳುತ್ತಾರೆ.

‘ಕೂಡಿಟ್ಟಿದ್ದ ಹಣದ ಜೊತೆಗೆ ಬ್ಯಾಂಕ್ ಸಾಲದಲ್ಲಿ ಕೆಲಸ ಮುಗಿಯಲಿದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಅರ್ಧಕ್ಕೆ ನಿಂತಿರುವ ಮನೆ ಪೂರ್ಣಗೊಳಿಸಲು ಕಂಡ ಕಂಡವರ ಬಳಿ ಕೈ ಚಾಚುತ್ತಿದ್ದೇನೆ. ಕೋವಿಡ್‌ ಕಾರಣ ಯಾರ ಸ್ಥಿತಿಯೂ ಉತ್ತಮವಾಗಿಲ್ಲ. ಮನೆ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕಿ ನೆಮ್ಮದಿಯನ್ನೇ ಕಳೆದುಕೊಂಡಿದ್ದೇನೆ’ ಎನ್ನುತ್ತಾ ಅವರು ಗದ್ಗದಿತರಾದರು.

ಒಂದೂವರೆ ಪಟ್ಟು ಹೆಚ್ಚಳ: ‘₹80 ಲಕ್ಷದಲ್ಲಿ ಮನೆ ಕಟ್ಟಲು 2020ರ ಡಿಸೆಂಬರ್‌ನಲ್ಲಿ ಯೋಜನೆ ಸಿದ್ಧಪಡಿಸಿ ಮನೆ ನಿರ್ಮಾಣದ ಲೆಕ್ಕಾಚಾರ ಹಾಕಿದ್ದೆವು. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಅರ್ಧದಷ್ಟು ಕಾಮಗಾರಿಗೇ ಹಣ ಖರ್ಚಾಗಿ ಹೋಗಿದೆ’ ಎಂದು ಕಗ್ಗದಾಸನಪುರದ ಮಾರುತಿನಗರದಲ್ಲಿ ಮನೆ ನಿರ್ಮಿಸುತ್ತಿರುವ ಮಂಜುನಾಥ್ ಭಟ್ ಹೇಳುತ್ತಾರೆ.

‘ಯೋಜನೆ ರೂಪಿಸಿದ್ದಾಗ ಕಬ್ಬಿಣದ ಬೆಲೆ ಕೆ.ಜಿಗೆ ₹48, ಸಿಮೆಂಟ್‌ ದರ ಚೀಲಕ್ಕೆ ₹300 ಇತ್ತು. ಈಗ ಕಬ್ಬಿಣದ ದರ ₹78ಕ್ಕೆ, ಸಿಮೆಂಟ್‌ ದರ ₹550 ಆಗಿದೆ. ಬಾಕಿ ಕೆಲಸ ಪೂರ್ಣಗೊಳಿಸಲು ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಜಿಎಸ್‌ಟಿಯೂ ಹೊರೆ: ಕಚ್ಚಾ ವಸ್ತುಗಳ ಬೆಲೆ ಏರಿಕೆ ಆದಂತೆ ಜಿಎಸ್‌ಟಿ ಹೊರೆಯೂ ಹೆಚ್ಚಾಗುತ್ತಿದ್ದು, ನಿರ್ಮಾಣ ವಲಯ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಒಂದು ವರ್ಷದ ಅವಧಿಯಲ್ಲೇ ಕಬ್ಬಿಣದ ಬೆಲೆ ಶೇ 58ರಷ್ಟು, ಸಿಮೆಂಟ್‌ ದರ ಶೇ 35, ಪಿವಿಸಿ ಪೈಪ್ ದರ ಶೇ 40ರಷ್ಟು, ಎಲೆಕ್ಟ್ರಿಕಲ್ ಕೇಬಲ್‌ಗಳ ದರ ಶೇ 45, ಸ್ಯಾನಿಟರಿ ಸಲಕರಣೆಗಳ ದರ ಶೇ 15ರಷ್ಟು ಹೆಚ್ಚಾಗಿದೆ. ಹೆಚ್ಚಾದ ದರಕ್ಕೇ ಜಿಎಸ್‌ಟಿ ದರ ಕೂಡ ಸೇರಿಕೊಂಡು ಗ್ರಾಹಕರಿಗೆ ಹೊರೆಯಾಗುತ್ತಾ ಹೋಗುತ್ತದೆ. ‌ಉದಾಹರಣೆಗೆ ಒಂದು ಟನ್‌ ಕಬ್ಬಿಣಕ್ಕೆ ₹44 ಸಾವಿರ ಇದ್ದಾಗ ಶೇ 18ರಷ್ಟು ಅಂದರೆ ₹7,920 ಜಿಎಸ್‌ಟಿ ಸೇರ್ಪಡೆಯಾಗುತ್ತಿತ್ತು. ಸದ್ಯ ಅಷ್ಟೇ ಕಬ್ಬಿಣಕ್ಕೆ ₹78 ಸಾವಿರ ಇದ್ದು, ಅದಕ್ಕೆ ₹14,040 ಜಿಎಸ್‌ಟಿ ಸೇರಿಕೊಳ್ಳುತ್ತಿದೆ.

‘ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿದ್ದಾಗ ಇದ್ದ ದರ ಈಗ ದುಪ್ಪಟ್ಟಾಗಿದೆ. ಇದರ ಹೊರೆಯನ್ನು ಅನಿವಾರ್ಯವಾಗಿ ನಾವು ಗ್ರಾಹಕರ ಮೇಲೆಯೇ ಹಾಕಬೇಕಾಗುತ್ತದೆ. ಜಿಎಸ್‌ಟಿ ಹೊರೆಯನ್ನಾದರೂ ಸರ್ಕಾರ ಕಡಿಮೆ ಮಾಡಬೇಕು’ ಎಂದು ಕ್ರೆಡಾಯ್‌ ಬೆಂಗಳೂರು ಘಟಕದ ಭಾಸ್ಕರ್‌ ಟಿ.ನಾಗೇಂದ್ರಪ್ಪ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು