ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಕಲುಷಿತಗೊಂಡಿದೆ, ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್‌ ಕುಮಾರ್‌

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ರಮೇಶ್‌ಕುಮಾರ್‌ ಹೇಳಿಕೆ
Last Updated 7 ಡಿಸೆಂಬರ್ 2020, 15:47 IST
ಅಕ್ಷರ ಗಾತ್ರ

ಕೋಲಾರ: ‘ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತನಾಗುತ್ತೇನೆ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಇಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ರಾಜಕಾರಣದಲ್ಲಿ ಮೌಲ್ಯಗಳು ಉಳಿದಿಲ್ಲ’ ಕಳವಳ ವ್ಯಕ್ತಪಡಿಸಿದರು.

‘ರಾಜಕೀಯ ಜೀವನದಲ್ಲಿ ಇಷ್ಟು ವರ್ಷ ನ್ಯಾಯಯುತವಾಗಿ ಬದುಕಿದ್ದೇನೆ. ಹಣ ತೆಗೆದುಕೊಂಡು ರಾಜಕೀಯ ಮಾಡಿಲ್ಲ. ಪಕ್ಷದ ಕೆಲವರು ಹಣಕ್ಕೆ ತಲೆ ಮಾರಿಕೊಂಡು ಬಿಜೆಪಿಗೆ ಹೋದರು. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದರು. ಅಧಿಕಾರದಾಸೆಗೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕುಂಠಿತಗೊಂಡಿದೆ. ವಯೋವೃದ್ಧರಿಗೆ ಪಿಂಚಣಿ ಬರುತ್ತಿಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರಮಾಣ ಕಡಿತಗೊಳಿಸಲಾಗಿದೆ. ಹೊಸದಾಗಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ವಿವಿಧ ವಸತಿ ಯೋಜನೆಗಳಡಿ ಈಗಾಗಲೇ ಮನೆ ಕಟ್ಟಿದವರಿಗೆ ಬಿಲ್‌ ಪಾವತಿಸಿಲ್ಲ. ಎತ್ತಿನಹೊಳೆ ಯೋಜನೆ ಕಾಮಗಾರಿ ಒಂದಿಂಚೂ ಮುಂದೆ ಹೋಗಿಲ್ಲ’ ಎಂದು ಗುಡುಗಿದರು.

‘ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ದ್ರೋಹಕ್ಕೆ ಮಾಡಬೇಡಿ. ಕಾರ್ಯಕರ್ತರಲ್ಲಿ ಸಣ್ಣ ವ್ಯತ್ಯಾಸವಾದರೂ ಪಕ್ಷದ ಜತೆ ನಾವೂ ಸರ್ವ ನಾಶವಾಗುತ್ತೇವೆ. ಹಣ, ಅಧಿಕಾರದಾಸೆಗೆ ಚುನಾವಣೆಯಲ್ಲಿ ವಿಪಕ್ಷದವರ ಜತೆ ಕೈಜೋಡಿಸದೆ ಪಕ್ಷದ ಪರ ಕೆಲಸ ಮಾಡಿ. ಸಣ್ಣಪುಟ್ಟ ವಿಚಾರ ದೊಡ್ಡದು ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.

ಋಣ ತೀರಿಸಬೇಕು: ‘ಜೀವಮಾನದಲ್ಲಿ ನಾನು ಗ್ರಾ.ಪಂ ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ. ಆದರೆ, ಈಗ ರಾಜಕೀಯ ಪರಿಸ್ಥಿತಿ ಹಿಂದಿನಂತಿಲ್ಲ. ಗ್ರಾ.ಪಂಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಪಕ್ಷದ ಋಣ ತೀರಿಸಬೇಕು. ಈ ಕಾರಣಕ್ಕೆ ನಾನೇ ಕಾಳಜಿ ವಹಿಸಿ ಗ್ರಾ.ಪಂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿದ್ದೇನೆ’ ಎಂದರು.

‘ನಾನು ನೇರವಾಗಿ ಮಾತನಾಡುತ್ತೇನೆ. ಯಾರಿಂದಲೂ ದುಡ್ಡು ತೆಗೆದುಕೊಳ್ಳುವುದಿಲ್ಲ. ನನ್ನ ಈ ನಡೆ ವಿರೋಧಿಗಳ ಕೋಪಕ್ಕೆ ಕಾರಣ. ವಿರೋಧಿಗಳು ವಿರೋಧ ಮಾಡಲಿ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರಿಂದ ಆಯ್ಕೆಯಾಗಿರುವ ನಾನು ಜನರಿಗಷ್ಟೇ ತಲೆ ಬಾಗುತ್ತೇನೆ’ ಎಂದು ಹೇಳಿದರು.

ಒತ್ತಡ ಹಾಕಬೇಕು: ‘ಈ ವೇಳೆಗಾಗಲೇ ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆಯ ಬಹುಪಾಲು ಕೆರೆಗಳು ತುಂಬಬೇಕಿತ್ತು. ಆದರೆ, ಯೋಜನೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ನೀರಿನ ಹರಿವು ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಇದಕ್ಕೆ ಮನಸ್ಸು ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಚಿಮುಲ್‌ ಮಾಜಿ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT