ಭಾನುವಾರ, ಆಗಸ್ಟ್ 14, 2022
19 °C
ಅಖಂಡ ಬಳ್ಳಾರಿ ಹೋರಾಟ ಸಮಿತಿ ನೇತೃತ್ವ

ವಿಭಜನೆ ವಿರೋಧಿ ಸರಣಿ ಧರಣಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಅನುಮತಿ ನಿರಾಕರಣೆಯ ನಡುವೆಯೇ ಅಖಂಡ ಬಳ್ಳಾರಿ ಹೋರಾಟ ಸಮಿತಿಯ ಪ್ರಮುಖರು ನಗರದಲ್ಲಿ ಸೋಮವಾರವಾದಿಂದ ಅನಿರ್ದಿಷ್ಟ ಅವಧಿಯ ಧರಣಿಯನ್ನು ಅಖಂಡ ಬಳ್ಳಾರಿ’ ಸಲುವಾಗಿ ಆರಂಭಿಸಿದರು.

ನಗರದ ರಾಜಕುಮಾರ್‌ ಉದ್ಯಾನದ ಗೇಟ್‌ ಮುಂಭಾಗದಲ್ಲಿ ಧರಣಿ ನಡೆಸಲು ಅನುಮತಿ ನೀಡಬೇಕು ಎಂದು ಕೋರಿ ಸಮಿತಿಯ ಕೆ.ಬಸಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಡಿ.12ರಂದು ಸಲ್ಲಿಸಿದ್ದರು. ಆದರೆ ಧರಣಿ ನಡೆಸಲು ಆಯುಕ್ತರು ಅನುಮತಿ ನೀಡಿರಲಿಲ್ಲ.

ಸೋಮವಾರ ಬೆಳಿಗ್ಗೆ ನಿಗದಿತ ಸ್ಥಳದಲ್ಲಿ ಧರಣಿ ನಡೆಸಲು ಮುಂದಾದ ಮುಖಂಡರನ್ನು ಬ್ರೂಸ್‌ಪೇಟೆ ಠಾಣೆಯ ಅಧಿಕಾರಿಗಳು ತಡೆದರು. ‘ಧರಣಿ ನಡೆಸಲು ನಮಗೆ ಹಕ್ಕಿದೆ’ ಎಂದು ಮುಖಂಡರು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮುಖಂಡರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ನಂತರ ಪೊಲೀಸರು ಧರಣಿ ನಡೆಸಲು ಹಾಸಲಾಗಿದ್ದ ಪೆಂಡಾಲ್‌ ಅನ್ನು ವಶಕ್ಕೆ ಪಡೆದು ಠಾಣೆಗೆ ತೆರಳಿದರು. ಧರಣಿ ನಡೆಸಿದರೆ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.

ಎಚ್ಚರಿಕೆಗೆ ಮಣಿಯದ ಮುಖಂಡರು ಠಾಣೆಗೂ ತೆರಳಿ ಅಲ್ಲಿ ಧರಣಿ ನಡೆಸಿದ ಬಳಿಕ ಪೊಲೀಸರು ಸಾಮಗ್ರಿಯನ್ನು ವಾಪಸ್‌ ನೀಡಿದರು.
ಮೊದಲ ದಿನ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೊಂದಿಗೆ ಸಮಿತಿಯ ಇತರೆ ಪ್ರಮುಖರು ಧರಣಿ ನಡೆಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್‌ ಶೇಖರ್‌ ತಮ್ಮ ಕಾರ್ಯಕರ್ತರೊಂದಿಗೆ ಇಡೀ ದಿನ ಧರಣಿಯಲ್ಲಿ ಪಾಲ್ಗೊಂಡರು.

‘ವಿಭಜನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಹೋರಾಟ ಸಮಿತಿಯ ಅಭಿಪ್ರಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವವರೆಗೂ ಧರಣಿಯನ್ನು ನಿಲ್ಲಿಸುವುದಿಲ್ಲ. ವಿವಿಧ ಸಂಘಟನೆಗಳ ನೂರಾರು ಮಂದಿ ದಿನವೂ ಸರದಿ ಪ್ರಕಾರ ಧರಣಿಯನ್ನು ನಡೆಸಲಿದ್ದಾರೆ.  ವಿಭಜನೆಯ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಜನಾಭಿಪ್ರಾಯವನ್ನೇ ಸಂಗ್ರಹಿಸಿದೆ ಏಕಪಕ್ಷೀಯವಾಗಿ ವರ್ತಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡಿದೆ’ ಎಂದು ಧರಣಿ ನಿರತರು ಆರೋಪಿಸಿದರು. ರಾಜ್ಯ ಸರ್ಕಾರ, ಉಸ್ತುವಾರಿ ಸಚಿವ ಆನಂದ್‌ಸಿಂಗ್ ವಿರುದ್ಧ ಧಿಕ್ಕಾರ ಕೂಗಿದರು. 

ಚಾಗನೂರು ಸಿರಿವಾರ ಭೂಸಂರಕ್ಷಣಾ ಹೋರಾಟ ಸಮಿತಿಯ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಎಸ್‌.ಪನ್ನರಾಜ್‌, ಟಿ.ಜಿ.ವಿಠಲ್, ಕರ್ನಾಟಕ ಜನಸೈನ್ಯ ಸಂಘಟನೆಯ ಕೆ.ಎರ್ರಿಸ್ವಾಮಿ, ಕುಡುತಿನಿ ಶ್ರೀನಿವಾಸ್‌, ಬಿ.ಎಂ.ಪಾಟೀಲ್, ತುಂಗಭದ್ರಾ ರೈತಸ ಸಂಘದ ದರೂರು ಪುರುಷೋತ್ತಮಗೌಡ, ಎ.ಮಾನಯ್ಯ, ಪರ್ವೀನ್‌ ಬಾನು, ಸಿದ್ಮಲ್‌ ಮಂಜುನಾಥ್ ನೇತೃತ್ವ ವಹಿಸಿದ್ದರು. ಪರ್ವಿನ್‌ ಬಾನು ಮತ್ತು ಅವರ ತಂಡದ ಸದಸ್ಯರು ಮಂಗಳವಾರ ಧರಣಿ ನಡೆಸಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು