ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಸತತ ಹಿಮಪಾತ: 3 ದಿನಗಳಿಂದ ಹೋಟೆಲ್‌ನಲ್ಲಿ ಸಿಲುಕಿದ ರಾಜ್ಯದ 10 ಜನ

Last Updated 12 ಮಾರ್ಚ್ 2021, 16:47 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಸತತ ಹಿಮಪಾತ ಆಗುತ್ತಿರುವುದರಿಂದ ನಗರದ ಇಬ್ಬರು, ಹುಬ್ಬಳ್ಳಿಯ ಎಂಟು ಜನ ಜಮ್ಮು ಮತ್ತು ಕಾಶ್ಮೀರದ ಸೋನ್‌ಮರ್ಗ್‌ನ ಖಾಸಗಿ ಹೋಟೆಲ್‌ನಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿದ್ದಾರೆ.

ಸತತ ಹಿಮಪಾತಕ್ಕೆ ಹತ್ತು ಅಡಿಗಿಂತ ಅಧಿಕ ಹಿಮ ಸಂಗ್ರಹವಾಗಿದೆ. ಹೋಟೆಲ್‌ನಿಂದ ಹೊರಬರಲು ಆಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಗುರುವಾರದಿಂದ (ಮಾ.11) ವಿದ್ಯುತ್‌ ಸಂಪರ್ಕ ಕೂಡ ಕಡಿತಗೊಂಡಿದೆ. ಹೋಟೆಲ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಡೀಸೆಲ್‌ ಕೂಡ ಖಾಲಿ ಆಗಿರುವುದರಿಂದ ಅನ್ಯ ವ್ಯವಸ್ಥೆ ಇಲ್ಲವಾಗಿದೆ. ಆದರೆ, ಊಟಕ್ಕೆ ಯಾವುದೇ ತೊಂದರೆ ಆಗಿಲ್ಲ.

ನಗರದ ಪ್ರಕಾಶ್‌ ಮೆಹರವಾಡೆ, ಅವರ ಪತ್ನಿ ಸುಧಾ ಮೆಹರವಾಡೆ ಹಾಗೂ ಹುಬ್ಬಳ್ಳಿಯ ಇವರ ಎಂಟು ಜನ ಸಂಬಂಧಿಕರು ಒಟ್ಟಿಗೆ ಮಾ. 5ರಂದು ಬೆಂಗಳೂರು, ನವದೆಹಲಿ ಮೂಲಕ ಶ್ರೀನಗರ ತಲುಪಿದ್ದಾರೆ. ತಲಾ ಎರಡು ದಿನ ಗುಲ್ಮರ್ಗ್‌, ಪೆಹಲ್ಗಾಂನಲ್ಲಿ ಸುತ್ತಾಡಿದ್ದಾರೆ. ಮಾ. 9ರಂದು ಸೋನ್‌ಮರ್ಗ್‌ಕ್ಕೆ ತೆರಳಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಸತತ ಹಿಮಪಾತ ಆಗುತ್ತಿರುವುದರಿಂದ ಮೂರು ದಿನಗಳಿಂದ ಅಲ್ಲಿಂದ ಹೊರಬರಲು ಸಾಧ್ಯವಾಗಿಲ್ಲ.

‘ನಮ್ಮ ಹೋಟೆಲ್‌ ಸುತ್ತಮುತ್ತ ಹತ್ತು ಅಡಿಗಿಂತ ಅಧಿಕ ಎತ್ತರ ಹಿಮ ಸಂಗ್ರಹವಾಗಿದೆ. ವಾಹನ, ರಸ್ತೆಗಳೆಲ್ಲ ಕಾಣದಾಗಿದೆ. ಮೂರು ದಿನಗಳಿಂದ ಹೋಟೆಲ್‌ನಲ್ಲೇ ಬಂಧಿಯಾಗಿದ್ದೇವೆ. ಊಟಕ್ಕೇನೂ ಸಮಸ್ಯೆಯಾಗಿಲ್ಲ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ವಿಪರೀತ ಚಳಿ ಆಗುತ್ತಿದೆ. ಹೋಟೆಲ್‌ನವರು ಧೈರ್ಯ ತುಂಬುತ್ತಿದ್ದಾರೆ. ವಿಷಯ ಗೊತ್ತಾಗಿ ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಕರೆ ಮಾಡಿ ಧೈರ್ಯ ಹೇಳಿದ್ದಾರೆ. ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡುವ ಭರವಸೆ ಕೊಟ್ಟಿದ್ದಾರೆ’ ಎಂದು ಪ್ರಕಾಶ್‌ ಮೆಹರವಾಡೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT