ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್ ಪಾಟೀಲ ಆತ್ಮಹತ್ಯೆ: ಸಚಿವ ಈಶ್ವರಪ್ಪ ರಾಜೀನಾಮೆಗೆ ವಿ‍ಪಕ್ಷಗಳ ಪಟ್ಟು

ಲಂಚದ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ
Last Updated 12 ಏಪ್ರಿಲ್ 2022, 20:37 IST
ಅಕ್ಷರ ಗಾತ್ರ

ಬೆಂಗಳೂರು/ಉಡುಪಿ: ಕಾಮಗಾರಿಗಳ ಬಾಕಿ ಬಿಲ್‌ ಮೊತ್ತ ಬಿಡುಗಡೆಗೆ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಬೆಳಗಾವಿಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಸಂತೋಷ್‌ ಪಾಟೀಲ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ಉಡುಪಿಗೆ ಬಂದು ಲಾಡ್ಜ್‌ ಒಂದರಲ್ಲಿ ತಂಗಿದ್ದ ಸಂತೋಷ್‌, ‘ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ...’ ಎಂದು ಪರಿಚಿತರಿಗೆ ವಾಟ್ಸ್‌ ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ವಿಷ ಸೇವಿಸಿ, ಸಾವನ್ನ
ಪ್ಪಿದ್ದಾರೆ. ಮಂಗಳವಾರ ಬೆಳಿಗ್ಗೆ ಪ್ರಕರಣ ಬಹಿರಂಗವಾಗಿದ್ದು, ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿವೆ. ಬಿಜೆಪಿ ನಾಯಕರು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಆತ್ಮಹತ್ಯೆಯ ಸುದ್ದಿ ಬಿತ್ತರವಾಗುತ್ತಿದ್ದಂತೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳೂರಿನ ಓಷಿಯನ್‌ ಪರ್ಲ್‌ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಬಿಜೆಪಿ ವಿಭಾಗೀಯ ಮಟ್ಟದ ಸಭೆಗೂ ನುಗ್ಗಲು ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದರು. ಮೈಸೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದ ಹೋಟೆಲ್‌ಗಳ ಎದುರಿನಲ್ಲೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸಿದರು.

ಬೆಂಗಳೂರಿನ ಕುಮಾರ ಪಾರ್ಕ್‌ ಬಳಿ ಇರುವ ಈಶ್ವರಪ್ಪ ಅವರ ಅಧಿಕೃತ ನಿವಾಸದ ಎದುರಿನಲ್ಲೂ ಯುವ ಮತ್ತು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಚಿವರ ರಾಜೀನಾಮೆಗೆ ಆಗ್ರಹಿಸಿ ನಿವಾಸದ ಆವರಣಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ನಿವಾಸದ ಪ್ರವೇಶ ದ್ವಾರಗಳನ್ನು ಮುಚ್ಚಿ, ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಸಚಿವರ ತವರು ಕ್ಷೇತ್ರ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಂಗಳವಾರ ಪ್ರತಿಭಟನೆಗಳು ನಡೆ
ದಿವೆ. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿಬುಧವಾರ ಕೂಡ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಸಿದ್ಧತೆನಡೆಸಿದೆ. ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರೂ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯಪಾಲರಿಗೆ ದೂರು: ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ರಾಜ್ಯಪಾಲರನ್ನು ಭೇಟಿಮಾಡಿ ಒತ್ತಾಯ ಮಾಡಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಬುಧವಾರ ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರ ಭೇಟಿ ನಿಗದಿಯಾಗಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಪ್ರಮುಖ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿಮಾಡಲಿದ್ದು, ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಮನವಿ ಸಲ್ಲಿಸಲಿದೆ.

ತಿಂಗಳಿಂದ ಸಂಘರ್ಷ: ‘ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 4 ಕೋಟಿ ವೆಚ್ಚದ ಕಾಮಗಾರಿಗಳನ್ನು ಮಾಡಿದ್ದು, ಬಿಲ್‌ ಪಾವತಿಗೆ ಸಚಿವ ಈಶ್ವರಪ್ಪ ಶೇ 40ರಷ್ಟು ಲಂಚ ಕೇಳುತ್ತಿದ್ದಾರೆ’ ಎಂದು ಆರೋಪಿಸಿ ಸಂತೋಷ್‌ ಪಾಟೀಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಮಾರ್ಚ್‌ ಮೊದಲ ವಾರ ದೂರು ನೀಡಿದ್ದರು.

ಆರೋಪವನ್ನು ಅಲ್ಲಗಳೆದಿದ್ದ ಈಶ್ವರಪ್ಪ, ‘ಸಂತೋಷ್‌ ಪಾಟೀಲ ಯಾರು ಎಂಬುದೇ ಗೊತ್ತಿಲ್ಲ’ ಎಂದಿದ್ದರು. ದೂರು ನೀಡಿದ್ದ ಗುತ್ತಿಗೆದಾರನ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಹಲವು ದಿನಗಳಿಂದಲೂ ಸಚಿವರು ಮತ್ತು ಸಂತೋಷ್‌ ನಡುವೆ ಆರೋಪ– ಪ್ರತ್ಯಾರೋಪ ನಡೆಯುತ್ತಲೇ ಇತ್ತು. ಸಚಿವರ ಜತೆ ಇರುವ ಫೋಟೊಗಳು ಹಾಗೂ ಸಚಿವರ ಜತೆಗಿನ ಸಂಪರ್ಕದ ಕುರಿತ ವಿಡಿಯೊ ಹೇಳಿಕೆಗಳನ್ನು ಪಾಟೀಲ ಕೆಲವು ದಿನಗಳ ಹಿಂದೆ ಮಾಧ್ಯಮಗಳಿಗೆ ಕಳುಹಿಸಿದ್ದರು.

ಸೋಮವಾರ ಇಬ್ಬರು ಸ್ನೇಹಿತರ ಜತೆ ಬೆಳಗಾವಿಯಿಂದ ಉಡುಪಿಗೆ ಹೋಗಿದ್ದ ಗುತ್ತಿಗೆದಾರ, ಲಾಡ್ಜ್‌ ಒಂದರಲ್ಲಿ ಕೊಠಡಿ ಪಡೆದು ತಂಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅಲ್ಲಿಂದಲೇ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ಕಳುಹಿಸಿದ್ದರು. ಮೊಬೈಲ್‌ ಲೊಕೇಷನ್‌ ಆಧರಿಸಿ ಪೊಲೀಸರು ಉಡುಪಿಯ ವಿವಿಧೆಡೆ ಶೋಧ ನಡೆಸಿದ್ದರು. ಆದರೆ, ಪತ್ತೆಯಾಗಿರಲಿಲ್ಲ. ಪಕ್ಕದ ಕೊಠಡಿಯಲ್ಲಿ ಉಳಿದಿದ್ದ ಸ್ನೇಹಿತರು ಬೆಳಿಗ್ಗೆ ಕೊಠಡಿ ಬಾಗಿಲು ಬಡಿದರೂ ತೆರೆಯಲಿಲ್ಲ. ಲಾಡ್ಜ್‌ ಸಿಬ್ಬಂದಿ ನೆರವಿನಲ್ಲಿ ಬಾಗಿಲು ತೆರೆದು ನೋಡಿದಾಗ ಸಂತೋಷ್‌ ಮೃತಪಟ್ಟಿರುವುದು ಗೊತ್ತಾಯಿತು.

‘ಸಚಿವರಿಗೆ ಶಿಕ್ಷೆಯಾಗಬೇಕು’

ಬೆಳಗಾವಿ: ‘ಅನ್ಯಾಯ ಆಗಿದ್ದರಿಂದಲೇ ಪತಿ ಸಂತೋಷ್ ಪಾಟೀಲ ತೀರಿಕೊಂಡಿದ್ದಾರೆ. ಇದು ಕೊಲೆಯಲ್ಲದೆ ಮತ್ತೇನೂ ಅಲ್ಲ’ ಎಂದು ಮೃತರ ಪತ್ನಿ ಜಯಶ್ರೀ ಪಾಟೀಲ ಹೇಳಿದರು.

ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ‘ಕಾಮಗಾರಿ ಮಾಡಿಸಲು ಈಶ್ವರಪ್ಪ ಅವರೇ ಹೇಳಿದ್ದಾರೆ ಎಂದು ಪತಿ ತಿಳಿಸಿದ್ದರು. ಅವರು ಶೇ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದೂ ಹೇಳಿದ್ದರು. ಹೀಗಾದರೆ ಸಾಲ ತೀರಿಸುವುದು ಹೇಗೆ ಎಂದು ಕೊರಗುತ್ತಿದ್ದರು. ನನ್ನ ಬಂಗಾರವನ್ನೂ ಒತ್ತೆ ಇಟ್ಟು ಕಾಮಗಾರಿ ಮಾಡಿಸಿದ್ದರು. ಹಣ ಬಾರದಿದ್ದರೆ ಏನು ಮಾಡುವುದೆಂದು ಬಹಳ ನೊಂದಿದ್ದರು’ ಎಂದು ತಿಳಿಸಿದರು.

‘ಈಶ್ವರಪ್ಪ ಅವರು ಹಣ ಬಿಡುಗಡೆ ಮಾಡದೆ ಮೋಸ ಎಸಗಿದ್ದಾರೆ. ನಾನ್ಯಾರು ಎನ್ನುವುದು ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಪತಿ ತಿಳಿಸಿದ್ದರು. ಪ್ರಕರಣದ ತನಿಖೆಯಷ್ಟೆ ಅಲ್ಲ, ಸಚಿವರಿಗೆ ಶಿಕ್ಷೆಯೂ ಆಗಬೇಕು’ ಎಂದು ಒತ್ತಾಯಿಸುತ್ತಾ ಕಣ್ಣೀರಿಟ್ಟರು.

108 ಕಾಮಗಾರಿಗಳ ಬಿಲ್‌ಗೆ ತಡೆ?

ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್‌ ಪಾಟೀಲ ಅವರು ಹಿಂದೂ ವಾಹಿನಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡಿದ್ದರು. ಬೆಳಗಾವಿಯ ಹಿಂಡಲಗಾ ಗ್ರಾಮದಲ್ಲಿ ಗ್ರಾಮೀಣಾ
ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಟ್ಟು ₹ 4 ಕೋಟಿ ವೆಚ್ಚದ 108 ಕಾಮಗಾರಿಗಳನ್ನು ನಡೆಸಿದ್ದರು.

‘ಸಚಿವರ ಭರವಸೆಯನ್ನು ನಂಬಿ ಕಾರ್ಯಾದೇಶ ಇಲ್ಲದೇ ಕಾಮಗಾರಿ ಕೈಗೊಂಡಿದ್ದೆ. ಹಿಂಡಲಗಾ ದೇವಸ್ಥಾನದ ಜಾತ್ರೆ ಇದ್ದ ಕಾರಣದಿಂದ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ನಂತರದಲ್ಲಿ ಬಿಲ್‌ ಮಂಜೂರು ಮಾಡದೇ ಸತಾಯಿಸಿದರು. ಶೇ 40ರಷ್ಟು ಲಂಚ ನೀಡಿದರೆ ಬಿಲ್‌ ಪಾವತಿಗೆ ಒಪ್ಪಿಗೆ ನೀಡುವುದಾಗಿ ಸಚಿವ ಈಶ್ವರಪ್ಪ ತಮ್ಮ ಸಹವರ್ತಿಗಳ ಮೂಲಕ ಬೇಡಿಕೆ ಇಟ್ಟಿದ್ದರು’ ಎಂದು ಸಂತೋಷ್‌ ದೂರಿನಲ್ಲಿ ಆರೋಪಿಸಿದ್ದರು. ‘ಸಂತೋಷ್‌ ಕಾರ್ಯಾದೇಶ ಇಲ್ಲದೇ ರಸ್ತೆ ಕಾಮಗಾರಿಗಳನ್ನು ನಡೆಸಿದ್ದಾರೆ’ ಎಂದು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದರು.

ಕಾನೂನು ತಜ್ಞರ ಅಭಿಮತ–ಬಂಧನಕ್ಕೆ ಅವಕಾಶವಿದೆ

ವಾಟ್ಸ್‌ ಆ್ಯಪ್‌ ಸಂದೇಶ: ಸಾಕ್ಷ್ಯ ಮಾನ್ಯ

ಬೆಂಗಳೂರು: ‘ಯಾವುದೇ ಎಸ್‌ಎಂಎಸ್‌, ಇ–ಮೇಲ್‌, ವಾಟ್ಸ್‌ ಆ್ಯಪ್‌ ಸಂದೇಶ, ಲಿಖಿತ ‍ಪತ್ರ ಅಥವಾ ಓದಬಹುದಾದ ಮಾಧ್ಯಮದ ಮೂಲಕ ದಾಖಲಿಸಲಾದ ಮರಣ ಹೇಳಿಕೆಯನ್ನು (ಡೈಯಿಂಗ್‌ ಡಿಕ್ಲರೇಷನ್) ಸಾಕ್ಷ್ಯ’ ಎಂದು ಪರಿಗಣಿಸಬಹುದು ಎಂಬುದು ಕಾನೂನು ತಜ್ಞರ ಅಭಿಮತ.

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು, ‘ಭಾರತೀಯ ಸಾಕ್ಷ್ಯ ಅಧಿನಿಯಮ–1872ರ ಕಲಂ 32ರ ಅನುಸಾರ, ‘ಇಂತಹ ದಾಖಲೆಯ ಆಧಾರದಲ್ಲಿ ಅಪರಾಧ ದಾಖಲಿಸಿ ಆರೋಪಿಯನ್ನು ಬಂಧಿಸಬಹುದು’ ಎಂದು ವಿವರಿಸಿದರು.

ಮತ್ತೊಬ್ಬ ಖ್ಯಾತ ಕ್ರಿಮಿನಲ್ ವಕೀಲ ಸಿ.ಎಚ್‌.ಹನುಮಂತರಾಯ, ‘ಇಂತಹ ದಾಖಲೆಯ ಆಧಾರದಲ್ಲಿಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬಹುದು. ಇದನ್ನು ಐಪಿಸಿ ಕಲಂ 316ರ ಪ್ರಕಾರ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಎಂದು ಪರಿಗಣಿಸಬೇಕಾಗುತ್ತದೆ’ ಎಂದರು.

‘ಇಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ಯಾವುದೇ ದೂರುದಾರನೇ ಬೇಕಿಲ್ಲ. ಎಫ್‌ಐಆರ್ ದಾಖಲಿಸಿ ಕೋರ್ಟ್‌ಗೆ ಕಳುಹಿಸಿದ ನಂತರ ಆರೋಪಿಯನ್ನು ಬಂಧಿಸಬಹುದು. ಆದರೆ, ಬಂಧನಕ್ಕೂ ಮುನ್ನ ತನಿಖಾಧಿಕಾರಿ ವಿಚಾರಣೆ ನಡೆಸಬೇಕು. ತನಗೆ ದೊರೆತ ಮರಣ ಹೇಳಿಕೆಯನ್ನು ಪರಿಶೀಲಿಸಿ ಯಾರು, ಎಲ್ಲಿಂದ, ಯಾವಾಗ, ಹೇಗೆ ಕೊಟ್ಟರು ಎಂಬಿತ್ಯಾದಿ ಅಂಶಗಳನ್ನು ಪರಾಂಬರಿಸಿ ಆರೋಪ ಮೇಲ್ನೋಟಕ್ಕೆ ದೃಢಪಟ್ಟ ನಂತರ ಮುಂದುವರಿಯಬೇಕಾಗುತ್ತದೆ’ ಎಂದರು.

‘ಯಾರೇ ಸಚಿವರು ಆರೋಪಿ ಎಂದು ಕಂಡುಬಂದಲ್ಲಿ ಆಗ ಬಂಧನಕ್ಕೆ ಸರ್ಕಾರದ ಅನುಮತಿ ಕೋರಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಅನುಮತಿ ನೀಡದಿದ್ದರೆ ಅದನ್ನು ನೇರವಾಗಿ ಹೈಕೋರ್ಟ್‌ನಲ್ಲಿ ರಿಟ್‌ ವ್ಯಾಪ್ತಿಯಲ್ಲಿ ಪ್ರಶ್ನಿಸಬೇಕಾಗುತ್ತದೆ’ ಎಂದು ಹನುಮಂತರಾಯ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT