ಭಾನುವಾರ, ಜನವರಿ 17, 2021
16 °C

ಕೋವಿಡ್: ಎರಡನೇ ಹಂತದ ಸೆರೋ ಸಮೀಕ್ಷೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪರೀಕ್ಷೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಅನುಸಾರ ಈ ತಿಂಗಳ ಅಂತ್ಯದೊಳಗೆ ಸೆರೋ ಸಮೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.

ಅನ್ಯ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಮತ್ತೆ ಏರುಗತಿ ಪಡೆದ ಕಾರಣ, ರಾಜ್ಯದಲ್ಲಿಯೂ ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಸಮಿತಿ ಎಚ್ಚರಿಸಿತ್ತು. ಇದಕ್ಕೆ ಪೂರಕವಾಗಿ ತಜ್ಞರು ಅಧ್ಯಯನ ನಡೆಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರು. ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಸೆರೋ ಸಮೀಕ್ಷೆಯನ್ನು ಜನವರಿಯಲ್ಲಿ ನಡೆಸಬೇಕು ಎಂದು ಸಮಿತಿಯ ತಜ್ಞರು ಸರ್ಕಾರಕ್ಕೆ ಸೂಚಿಸಿದ್ದರು.

ಮೊದಲ ಹಂತದ ಸೆರೋ ಸಮೀಕ್ಷೆಯು 2020 ರ ಸೆಪ್ಟೆಂಬರ್‌ 3 ರಿಂದ 16 ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆದಿತ್ತು. 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಶೇ 16 ರಷ್ಟು ಜನರಲ್ಲಿ ಕೋವಿಡ್‌ ಪ್ರತಿಕಾಯ ಇರುವುದು ತಿಳಿದುಬಂದಿತ್ತು.

1,500 ಮಾದರಿಗಳ ಸಂಗ್ರಹ: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎರಡನೇ ಹಂತದ ಸಮೀಕ್ಷೆ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಸುಮಾರು 1,500 ಮಾದರಿಗಳನ್ನು ಸಂಗ್ರಹಿಸಲಾಗುವುದು. ಮೊದಲ ಸಮೀಕ್ಷೆಯಲ್ಲಿ ಪ್ರತಿ ಜಿಲ್ಲೆಯಿಂದ 400 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ತರಕಾರಿ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಸಾರಿಗೆ ನೌಕರರು ಹಾಗೂ ಚಾಲಕರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಆದ್ಯತೆ ಮೇಲೆ ಗುರುತಿಸಿ, ಅವರ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಎನ್ನುವುದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

‘ಎಷ್ಟು ಮಂದಿಯಲ್ಲಿ ಪ್ರತಿಕಾಯ ಅಭಿವೃದ್ಧಿಯಾಗಿದೆ ಎಂದು ತಿಳಿಯಲು ಸೆರೋ ಸಮೀಕ್ಷೆ ಸಹಕಾರಿಯಾಗಲಿದೆ. ಈ ಬಾರಿ ಮಧ್ಯಮ ಹಾಗೂ ಅಪಾಯದ ವರ್ಗದಲ್ಲಿರುವ 35 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸುವ ಪ್ರಸ್ತಾವವಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು