ಶನಿವಾರ, ಏಪ್ರಿಲ್ 1, 2023
23 °C
‘ಸಿ’ ವರದಿ ತಿರಸ್ಕರಿಸಿದ ನ್ಯಾಯಾಲಯ

ಡಿನೋಟಿಫಿಕೇಷನ್‌ ಪ್ರಕರಣ: ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮರು ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐ.ಟಿ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ–ನೋಟಿಫೈ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಸಿ’ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ದೂರುದಾರ ವಾಸುದೇವ ರೆಡ್ಡಿ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ ಶನಿವಾರ ಆದೇಶ ಹೊರಡಿಸಿರುವ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಪೊಲೀಸರು ಜನವರಿ 18ರಂದು ಸಲ್ಲಿಸಿದ್ದ 10,000 ಪುಟಗಳ ವರದಿಯನ್ನು ತಿರಸ್ಕರಿಸಿರುವುದಾಗಿ ಪ್ರಕಟಿಸಿದೆ. ಆರೋಪಗಳ ಕುರಿತು ಮರು ತನಿಖೆ ನಡೆಸಿ ವರದಿ ಸಲ್ಲಿಸುವಂತೆಯೂ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.

2008ರಿಂದ 2011ರ ಅವಧಿಯಲ್ಲಿ ನಡೆದಿದ್ದ 8 ಎಕರೆ 10 ಗುಂಟೆ ಜಮೀನುಗಳ ಡಿ–ನೋಟಿಫೈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಗರದ  ವಾಸುದೇವ ರೆಡ್ಡಿ ಎಂಬುವವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 2013ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ 2015ರ ಫೆಬ್ರುವರಿ 21ರಂದು ಎಫ್‌ಐಆರ್‌ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ತನಿಖೆ ನಡೆಸುತ್ತಿದ್ದರು.

ಈ ಪ್ರಕರಣ ರದ್ಧು ಮಾಡುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌, ವಿಶೇಷ ನ್ಯಾಯಾಲಯದಲ್ಲಿ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸುವಂತೆ 2020ರ ಡಿಸೆಂಬರ್‌ 22ರಂದು ಆದೇಶಿಸಿತ್ತು. ಜ.18ರಂದು 10,000 ಪುಟಗಳಷ್ಟು ದಾಖಲೆಗಳೊಂದಿಗೆ ‘ಸಿ’ ವರದಿ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರು, ಪ್ರಕರಣದ ವಿಚಾರಣೆ ಕೈಬಿಡುವಂತೆ ಶಿಫಾರಸು ಮಾಡಿದ್ದರು.

ಲೋಕಾಯುಕ್ತ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದ ದೂರುದಾರರ ಪರ ವಕೀಲ ಕೆ.ವಿ. ಧನಂಜಯ್‌, ‘ಸಿ ವರದಿಯನ್ನು ತಿರಸ್ಕರಿಸಿ ವಿಚಾರಣೆ ಆರಂಭಿಸಬೇಕು’ ಎಂದು ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಶನಿವಾರ ತನ್ನ ತೀರ್ಮಾನ ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು