ಸೋಮವಾರ, ಮೇ 17, 2021
21 °C
ಇದೇ 18, 19ರಂದು ಮಹತ್ವದ ಸಭೆ ಕರೆದ ಮುಖ್ಯಮಂತ್ರಿ

ಕೋವಿಡ್‌: ಕಠಿಣ ತೀರ್ಮಾನಕ್ಕೆ ವಾರಾಂತ್ಯ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಬಸವಕಲ್ಯಾಣ: ನಿರೀಕ್ಷಿತ ಪ್ರಮಾಣದಲ್ಲಿ ಒಂದು ವಾರದೊಳಗೆ ಕೋವಿಡ್‌ ಹರಡುವಿಕೆ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಇನ್ನಷ್ಟು ನಗರ ಪ್ರದೇಶಗಳಲ್ಲಿ ಕರ್ಫ್ಯೂ ವಿಸ್ತರಣೆ, ವಾರಾಂತ್ಯದ ಲಾಕ್‌ಡೌನ್ ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯ ಮತದಾನ ಇದೇ 17ರಂದು ನಡೆಯಲಿದೆ. ಆ ಬಳಿಕ ಕಠಿಣ ಕ್ರಮಗಳನ್ನು ಕೈಗೊಂಡು ಕೋವಿಡ್‌ ನಿಗ್ರಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.

ಕೋವಿಡ್ ನಿಯಂತ್ರಣಕ್ಕೆ ನಾಗರಿಕರು ಸ್ಪಂದಿಸುತ್ತಿಲ್ಲ. ಗುಂಪುಗೂಡುವುದು, ಸಮಾರಂಭ, ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದಕ್ಕೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿಲ್ಲ. ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ. ಲಾಕ್‌ಡೌನ್‌ನಂತಹ ಕಠಿಣ ಕ್ರಮ ಅನಿವಾರ್ಯವಾಗಬಹುದು ಎಂದು ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಈಗಾಗಲೇ ಪ್ರತಿಪಾದಿಸಿದೆ.

ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಮಂಗಳವಾರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೋವಿಡ್‌ ಹತೋಟಿಗಾಗಿ ಕಠಿಣ ಕ್ರಮಗಳಿಂದ ಕೂಡಿದ ಮುಂದಿನ ಹೆಜ್ಜೆ ಇಡಲೇಬೇಕಾಗುತ್ತದೆ ಎಂದು ಹೇಳುವ ಮೂಲಕ ಬರಲಿರುವ ದಿನಗಳು ಇನ್ನಷ್ಟು ನಿಷ್ಠುರ, ಕಷ್ಟಕರವಾಗಿರಲಿವೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ.

‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿದ್ದರೆ ಇನ್ನುಳಿದ ಜಿಲ್ಲೆಗಳಿಗೂ ರಾತ್ರಿ ಕರ್ಫ್ಯೂ ವಿಸ್ತರಿಸಲಾಗುವುದು. ಇನ್ನೊಂದು ವಾರ ಕಾಯ್ದು ನೋಡುತ್ತೇವೆ. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

‘ಬಿಗಿ ಕ್ರಮ ಕೈಗೊಳ್ಳುವ ಕುರಿತಂತೆ ಚರ್ಚಿಸಲು ಇದೇ 18 ಹಾಗೂ 19 ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಲಾಗುವುದು’ ಎಂದು ತಿಳಿಸಿದರು.

‘ಸರ್ವ ಪಕ್ಷ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು. ಎಲ್ಲ ನಾಯಕರ ಅಭಿಪ್ರಾಯ ಪಡೆದ ನಂತರವೇ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬರಲಿರುವ ಕಷ್ಟಕರ ದಿನಗಳ ಬಗ್ಗೆ ಮುನ್ಸೂಚನೆಯನ್ನೂ ನೀಡಿದರು.

‘ರಾಜ್ಯದಲ್ಲಿ ಒಂದು ವಾರದಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರುವ ವಿಶ್ವಾಸ ಇದೆ. ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ವಿರೋಧ ಪಕ್ಷಗಳಿಂದ ಟೀಕೆಗಳು ಬರುವುದು ಸಹಜ. ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

‘ಕೋವಿಡ್‌ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ‘ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಮುಂದಿನ ಎರಡು ತಿಂಗಳ ಕೊರೊನಾ ಸ್ಥಿತಿಗತಿಯನ್ನು ಅಂದಾಜಿಸಿ, ಸರ್ಕಾರವು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ. ಕಳೆದ ಒಂದು ವರ್ಷದ ಅನುಭವದಲ್ಲಿ ಕೋವಿಡ್‌ ಸ್ವರೂಪದ ಬಗ್ಗೆ ಗೊತ್ತಾಗಿದೆ. ಈ ಕಾಯಿಲೆ ಕಾಣಿಸಿಕೊಂಡ ಬಳಿಕ ಆರ್ಥಿಕ ನಷ್ಟ ಉಂಟಾಗಿದ್ದು, ಜನರು ಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಲಾಕ್‌ಡೌನ್‌ನಂತಹ ಕಠಿಣ ಕ್ರಮಕ್ಕೆ ಮುಂದಾಗುವುದು ಕಷ್ಟ’ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆ ಮೀಸಲು: ಮುಂದಿನ ಒಂದು ವಾರದೊಳಗೆ  ಶೇ 50 ರಷ್ಟು ಹಾಸಿಗೆಗಳನ್ನು ಕೋವಿಡ್ ಪೀಡಿತರಿಗೆ ಮೀಸಲಿಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವು ಸೂಚಿಸಿದ್ದು, ಇದಕ್ಕೆ ಆಸ್ಪತ್ರೆಗಳ ಮುಖ್ಯಸ್ಥರು ಸಮ್ಮತಿಸಿದ್ದಾರೆ.

ರಾಜ್ಯದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಜತೆಗೆ ಸೋಮವಾರ ಸಭೆ ನಡೆಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಕೋವಿಡ್ ಬಾಧಿತರಿಗೆ ಚಿಕಿತ್ಸೆ ಕೊಡಲು ಹಾಸಿಗೆಗಳನ್ನು ಸಜ್ಜುಗೊಳಿಸಿಕೊಳ್ಳಿ ಎಂದು ನಿರ್ದೇಶನ ನೀಡಿದರು.

ಕೋವಿಡೇತರ ರೋಗಿಗಳನ್ನು ಒಳರೋಗಿಗಳಾಗಿ ದಾಖಲು ಮಾಡಿಕೊಳ್ಳುವ ಅಗತ್ಯ ಇಲ್ಲದೇ ಇದ್ದರೆ, ಅಂತಹವರನ್ನು ಮನೆಗೆ ಕಳುಹಿಸಿ ಆರೈಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದಾರೆ.

ಬಳಿಕ ಮಾತನಾಡಿದ ಸುಧಾಕರ್‌, ರೋಗಲಕ್ಷಣ ಹಾಗೂ ಲಕ್ಷಣರಹಿತ ರೋಗಿಗಳಿಗೆ ಹೋಟೆಲ್‌ಗಳಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ ಎಂದೂ ಹೇಳಿದರು.

ಅತಿ ಹೆಚ್ಚು ಪ್ರಕರಣ: 2ನೇ ಸ್ಥಾನಕ್ಕೆ ಭಾರತ:

ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ತಾಸು ಅವಧಿಯಲ್ಲಿ ದೇಶದಲ್ಲಿ 1,68,912 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಅದುವರೆಗೆ ಸೋಂಕಿಗೆ ಒಳಗಾದ ವ್ಯಕ್ತಿಗಳ ಸಂಖ್ಯೆ 1.35 ಕೋಟಿಗೆ ಏರಿದೆ. ಇದು ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಸಂಖ್ಯೆ. 

ಅಮೆರಿಕದಲ್ಲಿ ಅತಿ ಹೆಚ್ಚು ಅಂದರೆ 3.12 ಕೋಟಿ ಪ್ರಕರಣಗಳು ವರದಿಯಾಗಿವೆ. 1,34,82,023 ಪ್ರಕರಣಗಳು ದೃಢಪಟ್ಟ ಬ್ರೆಜಿಲ್‌ ಈವರೆಗೆ ಎರಡನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನಕ್ಕೆ ಭಾರತ ಬಂದಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು