ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹೊತ್ತಲ್ಲಿ ಬಿಜೆಪಿಯ ನೀಚತನ ಅನಾವರಣ: ಕಾಂಗ್ರೆಸ್

Last Updated 14 ಮೇ 2021, 5:38 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಬಿಜೆಪಿಯ ನೀಚತನ ಅನಾವರಣಗೊಳ್ಳುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆರೋಪಿಸಿದೆ.

ಕೋವಿಡ್‌ನ ದುರಿತ ಕಾಲದಲ್ಲಿ ಆಳುವವರ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ಎದುರಿಸುತ್ತಿರುವ ಸಂಕಟಗಳಿಗೆ ಧ್ವನಿಯಾಗಿ ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಾಂಗದ ನಡೆಯನ್ನು ವಿಮರ್ಶೆಗೆ ಒಡ್ಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಶಾಸಕರೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ.

ರಾಜ್ಯ ಸರ್ಕಾರದ ವಿರುದ್ಧವೀಗ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 'ಕುಣಿಲಾರದವನು ನೆಲನೇ ಡೊಂಕು' ಎಂದಂತೆ ಜನಪರ ಚಿಂತನೆ ಇಲ್ಲದ ಅಸಮರ್ಥ ಬಿಜೆಪಿ ಸರ್ಕಾರಕ್ಕೆ ಪ್ರತಿಯೊಂದು ವಿಷಯದಲ್ಲೂ ಹೈಕೋರ್ಟ್ ಮಾನಿಟರ್ ಮಾಡಬೇಕಾದ ಸ್ಥಿತಿ ಬಂದಿದ್ದು ದುರ್ದೈವ. ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದೆ, ರಾಜ್ಯದಲ್ಲಿ ಹೈಕೋರ್ಟ್ ಚಾಟಿ ಬೀಸುತ್ತಿದೆ. ಕೊರೊನಾ ಹೊತ್ತಲ್ಲಿ ಬಿಜೆಪಿಯ ನೀಚತನ ಅನಾವರಣಗೊಳ್ಳುತ್ತಿದೆ ಎಂದು ಹೇಳಿದೆ.

ಮಗದೊಂದು ಟ್ವೀಟ್‌ನಲ್ಲಿ ಡಿ.ವಿ. ಸದಾನಂದಗೌಡ ಹಾಗೂ ಸಿ.ಟಿ. ರವಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ. ತಮ್ಮ ಅಯೋಗ್ಯತನ ಮರೆಮಾಚಲು ಎಷ್ಟೆಲ್ಲ ಹರಸಾಹಸಪಡುತ್ತಿದ್ದಾರೆ ಬಿಜೆಪಿಗರು. ಜನರ ಪರವಾಗಿ ಮಾತನಾಡುತ್ತಿದ್ದ ವಿರೋಧಪಕ್ಷದ ನಾಯಕರ ಬಗ್ಗೆ ಮುಗಿಬಿಳುತ್ತಿದ್ದವರು ಈಗ ನ್ಯಾಯಾಧೀಶರ ವಿರುದ್ಧವೇ ಮಾತಾಡುತ್ತಿದ್ದಾರೆ. 'ವಿನಾಶ ಕಾಲೇ ವಿಪರೀತ ಬುದ್ದಿ'! ಎಂದು ತಿರುಗೇಟು ನೀಡಿದೆ.

ಏತನ್ಮಧೆ ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ವಿಪಕ್ಷಗಳು ವಿರೋಧಿಸುವುದನ್ನೇ ತಮ್ಮ ಕಾಯಕ ಎಂದುಕೊಂಡು ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಧಿ ಮೂಲಕ ರಾಜ್ಯಕ್ಕೆ 303.69 ಕೋಟಿ ನೆರವು ನೀಡಿದೆ. ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ರಾಜ್ಯದ ಇತಿಹಾಸದಲ್ಲೇ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಕ್ಕೆ ಅತೀ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT