ಬೆಳಗಾವಿ: ‘ಕೋವಿಡ್‌ನಿಂದಾಗಿ ಸಾರಿಗೆ ಇಲಾಖೆಗೆ ಈವರೆಗೆ ₹ 4ಸಾವಿರ ಕೋಟಿ ನಷ್ಟ ಉಂಟಾಗಿದೆ’ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ಇಲಾಖೆಯ ಜವಾಬ್ದಾರಿ ತಗೆದುಕೊಂಡ ಬಳಿಕ 20 ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ನೆರೆ ಉಂಟಾಯಿತು. ಇದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಹೋದ ವರ್ಷದ ಮಾರ್ಚ್‌ನಿಂದ ಕೊರೊನಾ ಬಂತು. ಬಳಿಕ ಇಲಾಖೆ ಸಿಬ್ಬಂದಿ ಮುಷ್ಕರ ನಡೆಸಿದರು. ಅದು ಮುಗಿಯುತ್ತಿದ್ದಂತೆಯೇ ಕೋವಿಡ್ 2ನೇ ಅಲೆ ಬಂದಿತು. ಬಹಳ ತಾಪತ್ರಯ ಅನುಭವಿಸಿದ ಇಲಾಖೆ ಇದ್ದರೆ ಅದು ನಮ್ಮದೆ’ ಎಂದು ಹೇಳಿದರು.
‘ಆದರೂ ಸಾರಿಗೆ ನೌಕರರಿಗೆ ಸಂಪೂರ್ಣ ಸಂಬಳ ಕೊಡುತ್ತಿದ್ದೇವೆ. ಸರ್ಕಾರದಿಂದ ₹ 2,600 ಕೋಟಿ ಪಡೆದು ಸಂಬಳಕ್ಕೆ ಬಳಸಿದ್ದೇವೆ. ಸದ್ಯ ಬಸ್‌ಗಳಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಈಗ ಬರುತ್ತಿರುವ ಆದಾಯದಿಂದ ಸಂಬಳ ಹಾಗೂ ಇಂಧನಕ್ಕೂ ಕೊರತೆ ಆಗುತ್ತಿದೆ’ ಎಂದರು.
ಜುಲೈ 5ರ ಬಳಿಕ ಸಾರಿಗೆ ನೌಕರರ ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿಭಟನೆ ನಡೆಸುವುದಿಲ್ಲ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ತಪ್ಪು ಮಾಹಿತಿ ಕೊಟ್ಟು ಅನೇಕರು ಹುನ್ನಾರ ಮಾಡಿದ್ದರಿಂದ ಹಿಂದೆ ಮುಷ್ಕರ ನಡೆಸಿದ್ದೆವು. ಈಗ, ನಿಮ್ಮೊಂದಿಗೆ ಇರುತ್ತೇವೆ ಎಂದಿದ್ದಾರೆ’ ಎಂದರು.
‘ಸರ್ಕಾರದ ಏಳಿಗೆ ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಮುಷ್ಕರಕ್ಕೆ ಪ್ರಚೋದನೆ ನೀಡಿದ್ದವು. ಸಾರ್ವಜನಿಕರಿಗೆ ತೊಂದರೆ ನೀಡಬೇಕು ಮತ್ತು ಇಲಾಖೆಗೆ ನಷ್ಟ ಉಂಟು ಮಾಡಬೇಕೆಂಬ ಹುನ್ನಾರ ನಡೆಸಿ ಪ್ರತಿಭಟನೆ ಮಾಡಿದ್ದರು. ಅದಕ್ಕೆ ಕಾರಣವಾದವರಾರು ಎನ್ನುವುದು ಕೆಲವೇ ದಿನಗಳಲ್ಲಿ ಬಹಿರಂಗ ಆಗುತ್ತದೆ’ ಎಂದು ಹೇಳಿದರು.
ಡೆಲ್ಟಾ ಪ್ಲಸ್ ವೈರಸ್ ಭೀತಿ ನಡುವಯೇ ಅಂತರರಾಜ್ಯ ಬಸ್‌ಗಳ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಗಡಿ ಭಾಗದಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇದ್ದರೆ ಮಾತ್ರ ಪ್ರಯಾಣಿಕರ ಪ್ರವೇಶಕ್ಕೆ ಚಿಂತನೆ ನಡೆಸಲಾಗುತ್ತಿದೆ’ ಎಂದರು.
‘ಕೋವಿಡ್ 1ನೇ ಹಾಗೂ 2ನೇ ಅಲೆ ಸಾಕಷ್ಟು ಅನುಭವ ನೀಡಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಹೊಸ ರೂಪ ಪಡೆದಿದೆ. ಹೀಗಾಗಿ, ಗಡಿ ಭಾಗದಲ್ಲಿ ತಪಾಸಣೆ ಮಾಡಬೇಕೆಂಬ ಚಿಂತನೆ ಇದೆ. ಮಹಾರಾಷ್ಟ್ರದಿಂದ ಬೆಳಗಾವಿ, ವಿಜಯಪುರ, ಕಲಬುರ್ಗಿ ಮತ್ತು ಬೀದರ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಜನರ ಸಂಪರ್ಕವಿದೆ. ಹೀಗಾಗಿ, ಗಡಿಯಲ್ಲಿ ನಾಕಾಬಂದಿ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.