ಸೋಮವಾರ, ಜುಲೈ 26, 2021
22 °C

ಮಕ್ಕಳ ಆಸರೆ ಕಸಿದ ಕೊರೊನಾ | ‘ಬೇಗ ಬರ್ತೀನಿ ಅಂದವ್ರು ಬರಲೇ ಇಲ್ಲ’

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾನು ಚೆನ್ನಾಗಿದ್ದೀನಿ. ಇನ್ನೆರಡು ದಿನಗಳಲ್ಲಿ ಹುಷಾರಾಗಿ ಮನೆಗೆ ಬಂದು ಬಿಡ್ತೀನಿ. ನೀವೇನು ಹೆದರಬೇಡಿ’.. ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಪ್ಪ, ತುರ್ತು ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಗೊಳ್ಳುವ ಮುನ್ನ ಆಡಿದ್ದ ಮಾತುಗಳಿವು.

ಅವರ ಆ ನುಡಿಗಳು ನಮ್ಮಲ್ಲಿ ಆಶಾಭಾವನೆ ಮೂಡಿಸಿದ್ದವು. ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದೆವು. ಆದರೆ, ವಿಧಿಯಾಟ ಬೇರೆಯದ್ದೇ ಆಗಿತ್ತು. ಐಸಿಯುಗೆ ದಾಖಲಾಗಿ ಮೂರೇ ದಿನಗಳಲ್ಲಿ ಅವರು ಬಾರದ ಲೋಕಕ್ಕೆ ಹೋಗಿಬಿಟ್ಟರು. ಅಮ್ಮ ಕೂಡ ದೂರವಾದರು...

ಹೀಗೆ ಹೇಳುವಾಗ ಶ್ರೀದುರ್ಗಾ ಭವಾನಿ ಅವರ ಧ್ವನಿ ಕ್ಷೀಣಿಸಿತು. ಕಣ್ಣುಗಳು ಹನಿಗೂಡಿದವು. ದುರ್ಗಾ ಭವಾನಿ ಅವರದ್ದುಕೂಡು ಕುಟುಂಬ. ಅವರ ಅಪ್ಪ ಜೆ.ಶ್ರೀನಿವಾಸ್‌ (49 ವರ್ಷ) ಹಾಗೂ ದೊಡ್ಡಪ್ಪ ಶೇಖರ್‌ ಒಂದೇ ಮನೆಯಲ್ಲಿ ವಾಸವಿದ್ದರು. ಮೊದಲು ಅವರ ತಾಯಿ ಸಂಧ್ಯಾಗೆ (43) ಜ್ವರ ಬಾಧಿಸಿತ್ತು. ಕ್ಲಿನಿಕ್‌ಗೆ ಹೋಗಿ ತೋರಿಸಿಕೊಂಡಾಗ ಏನೂ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು. ಅವರು ಸೂಚಿಸಿದ್ದ ಔಷಧವನ್ನು ನಿತ್ಯವೂ ಸೇವಿಸುತ್ತಿದ್ದರು. ಒಂದು ವಾರದ ಬಳಿಕ ದೇಹದ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಏಪ್ರಿಲ್‌ 20ಕ್ಕೆ ಮನೆಯವರೆಲ್ಲಾ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿ
ದ್ದರು. ಆಗ ಕುಟುಂಬದ ಎಂಟು ಮಂದಿಗೆ ಸೋಂಕು ತಗುಲಿರುವುದು ಖಾತರಿಯಾಗಿತ್ತು. 

‘ಅಪ್ಪ ಹಾಗೂ ಅಮ್ಮನನ್ನು ಕ್ರಮವಾಗಿ ಈಸ್ಟ್‌ ಪಾಯಿಂಟ್‌ ಹಾಗೂ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದೆವು. ಅಪ್ಪನ ಸಾವಿಗೆ ಆಸ್ಪತ್ರೆ ಯವರ ನಿರ್ಲಕ್ಷವೇ ಕಾರಣ. ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಕೊಡುತ್ತಿರುವುದಾಗಿ ಹೇಳಿ ಅವರನ್ನು ಒಂಬತ್ತು ದಿನಗಳವರೆಗೆ ಸಾಮಾನ್ಯ ವಾರ್ಡ್‌ನಲ್ಲಿ ಇಡಲಾಗಿತ್ತು. ಅಲ್ಲಿ ಸರಿಯಾಗಿ ಚಿಕಿತ್ಸೆಯನ್ನೇ ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಪ್ಪ ಆಸ್ಪತ್ರೆಯಲ್ಲಿರುವ ವಿಷಯ ಅಮ್ಮನಿಗೆ ಗೊತ್ತಿರಲಿಲ್ಲ. ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದನ್ನು ಅಪ್ಪನಿಗೆ ಹೇಳಿರಲಿಲ್ಲ. ಅಮ್ಮನಿಗೆ ನಾನೇ ನಿತ್ಯ ಊಟ ಮಾಡಿಸುತ್ತಿದ್ದೆ. ಆಗ ಚೆನ್ನಾಗಿ ಮಾತನಾಡುತ್ತಿದ್ದರು. ತಂಗಿ (ದಿವ್ಯಶ್ರೀ), ಅಪ್ಪ ಹಾಗೂ ಮನೆಯವರೆಲ್ಲಾ ಹೇಗಿದ್ದಾರೆ ಎಂದು ವಿಚಾರಿಸುತ್ತಿದ್ದರು. ಮೇ 9ರಂದು ಅಮ್ಮ ಅಸುನೀಗಿದರು. ಈ ವಿಚಾರವನ್ನು ಅಪ್ಪನಿಗೆ ತಿಳಿಸಿರಲಿಲ್ಲ. ಮನೆಗೆ ಮರಳಿದ ನಂತರ ಹೇಳೋಣ ಎಂದು ಸುಮ್ಮನಿದ್ದೆವು. ಆದರೆ, ಮೇ 14 ರಂದು ಅಪ್ಪ ಕೂಡ ಹೋಗಿಬಿಟ್ಟರು. ಅಮ್ಮನ ಸಾವಿನ ವಿಚಾರವನ್ನು ಕೊನೆಗೂ ಅವರಿಗೆ ತಿಳಿಸಲು ಆಗಲಿಲ್ಲ’ ಎನ್ನುತ್ತಾ ಕಣ್ಣೀರಿಟ್ಟರು.

‘ತುಂಬಾ ನೋವಾಗುತ್ತಿದೆ. ವಿಪರೀತ ಹೊಟ್ಟೆ ಹಸಿವು. ಇಲ್ಲಿ ಕೊಡುತ್ತಿರುವ ಆಹಾರ ಸಾಕಾಗುತ್ತಿಲ್ಲ ಎಂದು ಅಪ್ಪ ಹೇಳುತ್ತಿದ್ದರು. ನೀನು ಬರಬೇಕಾದರೆ ಏನಾದರೂ ತೆಗೆದುಕೊಂಡು ಬಾ ಎನ್ನುತ್ತಿದ್ದರು. ಹೀಗಾಗಿ ಹಣ್ಣು ಕೊಟ್ಟು ಬರುತ್ತಿದ್ದೆ. ಅಪ್ಪನ ಚಿಕಿತ್ಸೆಗೆ ₹1.57 ಲಕ್ಷ ವೆಚ್ಚವಾಗಿತ್ತು. ಅದನ್ನು ಕಟ್ಟಲು ಆಗಲಿಲ್ಲ. ಹೀಗಾಗಿ ಆಸ್ಪತ್ರೆಯವರು ಶವ ಹಸ್ತಾಂತರಿಸಲು ಸತಾಯಿಸಿದರು. ಇಂತಹ ಪರಿಸ್ಥಿತಿ ಯಾರಿಗೂ ಬರದಿರಲಿ’ ಎಂದು ಗದ್ಗದಿತರಾದರು.

‘ನಮ್ಮ ಜೊತೆ ಮಾತನಾಡಲೂ ಹಿಂಜರಿಯುತ್ತಾರೆ’

‘ಕೋವಿಡ್‌ ಇದೆ ಎಂಬುದು ಗೊತ್ತಾದ ಬಳಿಕ ನೆರೆಹೊರೆಯವರು ನಮ್ಮ ನೆರವಿಗೆ ಬರಲಿಲ್ಲ. ಕರೆ ಮಾಡಿ ಆರೋಗ್ಯ ವಿಚಾರಿಸುವ ಸೌಜನ್ಯವನ್ನೂ ತೋರಲಿಲ್ಲ. ಇಂತಹ ಕಹಿ ಅನುಭವವಾಗಿದ್ದು ಇದೇ ಮೊದಲು. ನಾವೆಲ್ಲಾ ಈಗ ಚೇತರಿಸಿಕೊಂಡಿದ್ದೇವೆ. ಹೀಗಿದ್ದರೂ  ಯಾರೂ ಮಾತನಾಡಿಸುತ್ತಿಲ್ಲ. ನಮ್ಮನ್ನು ಕಂಡರೆ ಸಾಕು ದೂರ ಹೋಗುತ್ತಾರೆ. ಹೀಗಾಗಿ ಮನೆ ಬಿಟ್ಟು ಆಚೆ ಹೋಗುತ್ತಿಲ್ಲ’ ಎಂದು ದುರ್ಗಾ ಭವಾನಿ ಅವರ ದೊಡ್ಡಮ್ಮ ಭಾರ್ಗವಿ ಬೇಸರ ತೋಡಿಕೊಂಡರು.

‘ದುರ್ಗಾ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ಶಿಕ್ಷಣ ವೆಚ್ಚ ಭರಿಸುವುದು ನಮ್ಮಿಂದ ಸಾಧ್ಯವಿಲ್ಲ. ಯಾರಾದರೂ ಸಹಾಯ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು. 

ಭಾರ್ಗವಿ ಅವರ ಸಂಪರ್ಕಕ್ಕೆ: 8971845849.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು