ಗುರುವಾರ , ಆಗಸ್ಟ್ 5, 2021
21 °C
ಶೇ 54ರಷ್ಟು ಕೋವಿಡ್‌ ಸೋಂಕಿತರು 20 – 40ರ ಹರೆಯದವರು

ಕೋವಿಡ್ ಎರಡನೇ ಅಲೆ: ಯುವಜನ ಹೈರಾಣ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಎರಡನೇ ಅಲೆಯು ಅಧಿಕ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಯುವಜನರು ಮತ್ತು ಮಧ್ಯಮ ವಯಸ್ಕರನ್ನೇ ಹೆಚ್ಚಾಗಿ ಕಾಡಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ 20ರಿಂದ 40 ವರ್ಷ ವಯೋಮಾನದೊಳಗಿನ 9.85 ಲಕ್ಷಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದಾರೆ.

ಕಳೆದ ವರ್ಷ ಕಾಣಿಸಿಕೊಂಡ ಕೋವಿಡ್ ಮೊದಲನೇ ಅಲೆಯಲ್ಲಿ ಹಿರಿಯ ನಾಗರಿಕರು ಸೋಂಕಿನ ತೀವ್ರತೆಗೆ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದರು. ಈ ವರ್ಷದ ಮಾರ್ಚ್‌ ಬಳಿಕ ಕಾಣಿಸಿಕೊಂಡ ಎರಡನೇ ಅಲೆಯಲ್ಲಿ ವೈರಾಣುವು  ಅತಿವೇಗವಾಗಿ ವ್ಯಾಪಿಸಿಕೊಂಡಿತು. ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚಾಗಿ ಓಡಾಟ, ಕ್ಷೇತ್ರಕಾರ್ಯ, ತಡವಾಗಿ ಪರೀಕ್ಷೆ, ಮನೆ ಆರೈಕೆಗೆ ಒಳಗಾಗಿದ್ದುದೇ ಯುವಜನರು ಮತ್ತು ಮಧ್ಯ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಲು ಪ್ರಮುಖ ಕಾರಣ ಎಂದು ವೈದ್ಯಕೀಯ ತಜ್ಞರು ವಿಶ್ಲೇಷಿಸಿದ್ದಾರೆ. 

ರಾಜ್ಯದಲ್ಲಿ ಈವರೆಗೆ ಕೋವಿಡ್ ಪೀಡಿತರಾದವರ ಸಂಖ್ಯೆ 28 ಲಕ್ಷ ದಾಟಿದೆ. ಇದರಲ್ಲಿ ಎರಡನೇ ಅಲೆಯ ಮೂರು ತಿಂಗಳ ಅವಧಿಯಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಅವರಲ್ಲಿ ಅರ್ಧಕ್ಕೂ ಅಧಿಕ ಮಂದಿ (ಶೇ 54ರಷ್ಟು) 20ರಿಂದ 40 ವರ್ಷದೊಳಗಿನವರಾಗಿದ್ದಾರೆ. ಮೊದಲ ಅಲೆಯಲ್ಲಿ 9.73 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ ಈ ವಯೋಮಾನದವರ ಸಂಖ್ಯೆ 4.10 ಲಕ್ಷದಷ್ಟಿತ್ತು.

ಹರಡುವಿಕೆ ಓಡಾಟ ಕಾರಣ: ಮೊದಲ ಅಲೆಯ ಒಂದು ವರ್ಷದ ಅವಧಿಯಲ್ಲಿ 20ರಿಂದ 30 ವರ್ಷದೊಳಗಿನವರಲ್ಲಿ 1.99 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದರು. ಅದೇ ರೀತಿ, 30ರಿಂದ 40 ವರ್ಷದೊಳಗಿನವರಲ್ಲಿ 2.10 ಲಕ್ಷ ಮಂದಿ ಸೋಂಕಿತರಾಗಿದ್ದರು. ಎರಡನೇ ಅಲೆಯ ಮೂರು ತಿಂಗಳಲ್ಲಿ ಕ್ರಮವಾಗಿ 5.99 ಲಕ್ಷ ಹಾಗೂ 6.48 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದಾರೆ.

ಕೋವಿಡ್ ಬಗ್ಗೆ ಈ ವಯೋಮಾನದವರ ನಿರ್ಲಕ್ಷ್ಯದಿಂದಲೇ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಮನೆಯಲ್ಲಿಯೇ ಇದ್ದ ಮಕ್ಕಳು ಹಾಗೂ ವೃದ್ಧರಿಗೆ ಕೂಡ ಸೋಂಕು ತಗುಲುತ್ತಿದೆ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ಮೊದಲ ಅಲೆಯಲ್ಲಿ ಸೋಂಕಿತರಾದವರಿಗೆ ಲಕ್ಷಣಗಳು ಗೋಚರಿಸುತಿತ್ತು. ಎರಡನೇ ಅಲೆಯಲ್ಲಿ ಸೋಂಕಿತರಾದ ಬಹುತೇಕ ಯುವಜನತೆ ಹಾಗೂ ಮಧ್ಯಮ ವಯಸ್ಕರಿಗೆ ಲಕ್ಷಣಗಳೇ ಕಾಣಿಸಿಕೊಂಡಿಲ್ಲ. ಮನೆ ಆರೈಕೆಯಲ್ಲಿರುವ ಕೆಲವರಿಗೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಅರಿವಿಗೆ ಬಾರದೆಯೇ ಶೇ 80ರಿಂದ ಶೇ 70ಕ್ಕೆ ದಿಢೀರ್ ಇಳಿಕೆಯಾಗುತ್ತಿತ್ತು. ಆಗ ಆಸ್ಪತ್ರೆಗೆ ತೆರಳಿದ ಪರಿಣಾಮ ಹಾಗೂ ಐಸಿಯು ಹಾಸಿಗೆ ಸಮಸ್ಯೆಯಿಂದ ಈ ವಯೋಮಾನದವರು ಎರಡನೇ ಅಲೆಯಲ್ಲಿ ಗಂಭೀರ ಸಮಸ್ಯೆ ಎದುರಿಸಿದ್ದಾರೆ’ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ. 

‘ಎರಡನೇ ಅಲೆಯ ಅವಧಿಯಲ್ಲಿ ಸಾರ್ವಜನಿಕ ಪ್ರದೇಶಗಳು ಸೇರಿದಂತೆ ವಿವಿಧೆಡೆ ಯುವಜನರು ಹಾಗೂ ಮಧ್ಯಮ ವಯಸ್ಕರ ಓಡಾಟ ಹೆಚ್ಚಾಗಿತ್ತು. ಹೆಚ್ಚಿನ ರೋಗನಿರೋಧಕ ಶಕ್ತಿ ಇರುವ ಕಾರಣ ಸೋಂಕು ತಗಲುವುದಿಲ್ಲ ಎಂಬ ತಪ್ಪು ಕಲ್ಪನೆ ಬಹುತೇಕರಲ್ಲಿತ್ತು. ಕೆಲವರು ಲಕ್ಷಣಗಳು ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿಕೊಳ್ಳದ ಪರಿಣಾಮ ಅವರಿಂದ ಮತ್ತಷ್ಟು ಮಂದಿಗೆ ಸೋಂಕು ಹರಡಿತು’ ಎಂದು  ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

5 ಸಾವಿರಕ್ಕೂ ಅಧಿಕ ಮಂದಿ ಸಾವು

ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿನ ತೀವ್ರತೆಗೆ ಯುವಜನರು ಹಾಗೂ ಮಧ್ಯಮ ವಯಸ್ಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ (ಮಾರ್ಚ್‌ ಮೂರನೇ ವಾರ) 12 ಸಾವಿರಕ್ಕೂ ಅಧಿಕ ಮರಣ ಪ್ರಕರಣ ವರದಿಯಾಗಿತ್ತು. ಎರಡನೇ ಅಲೆಯಲ್ಲಿ 21 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಶೇ 23.85ರಷ್ಟು ಮಂದಿ 20ರಿಂದ 50 ವರ್ಷದೊಳಗಿನವರೇ ಆಗಿದ್ದಾರೆ.

ಮೊದಲ ಅಲೆಯಲ್ಲಿ 20ರಿಂದ 30 ವರ್ಷದೊಳಗಿನವರು 217 ಮಂದಿ, 30ರಿಂದ 40 ವರ್ಷದೊಳಗಿನವರು 560 ಮಂದಿ ಹಾಗೂ 40ರಿಂದ 50 ವರ್ಷದೊಳಗಿನವರು 1,390 ಮಂದಿ ಸಾವಿಗೀಡಾಗಿದ್ದರು. ಎರಡನೇ ಅಲೆಯಲ್ಲಿ 20ರಿಂದ 30 ವರ್ಷದೊಳಗಿನವರು 490 ಮಂದಿ ಮೃತಪಟ್ಟಿದ್ದಾರೆ. 30ರಿಂದ 40 ವರ್ಷದವರು 1,493 ಹಾಗೂ 40ರಿಂದ 50 ವರ್ಷದೊಳಗಿನವರು 3,134 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು