ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ ಹೆಸರಲ್ಲಿ ಹಗಲು ದರೋಡೆ: ನಿನಿಷಾ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ: ಸದನದ ಗಮನ ಸೆಳೆದ ವಿನಿಷಾ
Last Updated 15 ಸೆಪ್ಟೆಂಬರ್ 2021, 20:59 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪರೀಕ್ಷೆ ಹೆಸರಿನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಶಾಸಕಿ ವಿನಿಷಾ ನಿರೋ ವಿಧಾನಸಭೆಯಲ್ಲಿ ದೂರಿದರು.

ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಅವರ ಗಮನಸೆಳೆಯುವ ಸೂಚನೆಯಡಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿನಿಷಾ, ಅಲ್ಲಿನ ಸಿಬ್ಬಂದಿ ಬಾಯಿ ಬಿಟ್ಟು ಲಂಚ ಕೇಳುತ್ತಾರೆ ಎಂದರು.

ಆರ್‌ಟಿ–ಪಿಸಿಆರ್‌ ಕೋವಿಡ್‌ ಪರೀಕ್ಷೆಗೆ ₹1,500 ಕೇಳುತ್ತಾರೆ. ಹೆಚ್ಚುವರಿಯಾಗಿ ₹1,500 ಕೊಟ್ಟರೆ ಮೂರು ನಿಮಿಷಗಳಲ್ಲೇ ವರದಿ ನೀಡುತ್ತಾರೆ. ನಾವು ಬೌರಿಂಗ್‌ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಹೋದ ವರದಿಯನ್ನು ಒಪ್ಪುವುದಿಲ್ಲ. ಶಾಸಕರಾದ ನಮಗೇ ಮೋಸ ಮಾಡುತ್ತಾರೆ, ಸಾಮಾನ್ಯ ಜನರ ಪಾಡೇನು ಎಂದು ವಿನಿಷಾ ಪ್ರಶ್ನಿಸಿದರು.

ವಿದೇಶಗಳಿಗೆ ಹೋಗುವವರು ಅಲ್ಲಿ ಅಸಹಾಯಕರಾಗಿ ಕೇಳಿದಷ್ಟು ಹಣ ಕೊಟ್ಟು ಕೋವಿಡ್‌ ಪರೀಕ್ಷೆ ನಡೆಸಬೇಕಾಗಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದರು.

ಹ್ಯಾರಿಸ್‌ ಮಾತನಾಡಿ, ರ್‍ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ಮತ್ತು ಆರ್‌ಟಿ–ಪಿಸಿಆರ್‌ ಪರೀಕ್ಷೆಗಳಿಗೆ ದರ ಏಕರೂಪಗೊಳಿಸಬೇಕು. ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ₹3,200 ಶುಲ್ಕ ವಿಧಿಸುವ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ವಿಮಾನ ನಿಲ್ದಾಣದಲ್ಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದನ್ನು ಕಡ್ಡಾಯ ಮಾಡಿಲ್ಲ. ಅಲ್ಲಿ ನಡೆಸುವ ಆರ್‌ಟಿ– ಪಿಸಿಆರ್‌ ಪರೀಕ್ಷೆಯಲ್ಲಿ ಕಾರ್ಟಿಜ್‌ ಬಳಸಲಾಗುತ್ತದೆ. ಅದರಲ್ಲಿ ಎರಡು ಮೂರು ಬಗೆಯ ಪರೀಕ್ಷೆ ನಡೆಸುವುದರಿಂದ, ಅದರ ಬೆಲೆ ಜಾಸ್ತಿ. ಈ ಬಗ್ಗೆ ಸಂದೇಹ ಇರುವ ಸದಸ್ಯರಿಗೆ ಅಧಿಕಾರಿಗಳ ಜತೆ ಕೂರಿಸಿ ಮಾಹಿತಿ ಕೊಡಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT