ಶನಿವಾರ, ಜನವರಿ 16, 2021
17 °C

28 ದಿನಗಳ ಬಳಿಕ 2 ನೇ ಡೋಸ್‌: ಪ್ರಧಾನಿ ವಿಡಿಯೊ ಸಂವಾದದ ಬಳಿಕ ಯಡಿಯೂರಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಲಸಿಕೆ ಮೊದಲ ಡೋಸ್‌ ನೀಡಿದ 28 ದಿನಗಳ ಬಳಿಕ ಎರಡನೇಡೋಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಹೇಳಿದರು.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೊ ಸಂವಾದದಲ್ಲಿ ಭಾಗಿಯಾಗಿದ್ದ ಅವರು ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 235 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ನಡೆದಿದೆ. ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌  ಎರಡು ಬಗೆಯ ಲಸಿಕೆಗಳು ವಿತರಣೆಗೆ ಸಿದ್ಧವಾಗಿವೆ. ಕೆಲವರಿಗೆ ಕೋವ್ಯಾಕ್ಸಿನ್‌ ಹಾಗೂ ಮತ್ತೆ ಕೆಲವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ ಎಂದರು.

ಆರೋಗ್ಯ  ಸಚಿವ ಡಾ.ಕೆ.ಸುಧಾಕರ್‌ ಅವರು ಮಾತನಾಡಿ, ಎರಡು ಡೋಸ್‌ ಪಡೆದ 45 ದಿನಗಳ ಬಳಿಕ ಲಸಿಕೆ ‍ಪಡೆದ ವ್ಯಕ್ತಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗುತ್ತದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ಇರಬೇಕು. ಲಸಿಕೆಗೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಸುಮಾರು 16 ಲಕ್ಷ ಕೊರೊನಾ ಯೋಧರು, ಕೋವಿಡ್‌ ವಿರುದ್ಧದ ಸಮರದಲ್ಲಿ ಭಾಗಿಯಾಗಿದ್ದ ವಿವಿಧ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಇದೇ 16 ರಿಂದ ಯಾವುದೇ
ಸಮಸ್ಯೆ ಇಲ್ಲದೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ಸಿಗಲಿದೆ ಎಂದು ಹೇಳಿದರು.

ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮೊದಲ ಪ್ರಾಶಸ್ತ್ಯದ ಮೇಲೆ ಲಸಿಕೆ ನೀಡಲಾಗುತ್ತದೆ. 50 ವರ್ಷದ ಒಳಗಿನವರಲ್ಲಿ ಯಾವುದೇ ರೋಗ ಲಕ್ಷಣಗಳು ಇದ್ದರೆ ಅವರಿಗೂ ಲಸಿಕೆ ನೀಡಲಾಗುತ್ತದೆ ಎಂದು ಸುಧಾಕರ್‌ ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು