ಸೋಮವಾರ, ಜೂನ್ 14, 2021
23 °C
ಚಿತ್ರದುರ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯಿಂದ ಎಡವಟ್ಟು

ಕೋವಿಡ್‌ ಸಾವು: ಶವ ಅದಲು–ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ತುರುವನೂರು ರಸ್ತೆ ಮಾರ್ಗದ ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರು ಗುರುವಾರ ಮೃತಪಟ್ಟಿದ್ದಾರೆ. ಆದರೆ, ಮೃತರ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ವೇಳೆ ಅದಲು–ಬದಲಾಗಿದೆ.

ಚಿತ್ರದುರ್ಗ ನಗರದ 60 ವರ್ಷದ ವೃದ್ಧ ಹಾಗೂ ಹಿರಿಯೂರಿನ ಜ್ಯುವೆಲರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಯುವಕ ಕೋವಿಡ್‌ ದೃಢಪಟ್ಟು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಯುವಕನ ಮೃತ ದೇಹದ ಬದಲು ವೃದ್ಧನ ಮೃತ ದೇಹ ಕುಟುಂಬದವರಿಗೆ ನೀಡಲಾಗಿತ್ತು.

ಆಸ್ಪತ್ರೆಯ ಸಿಬ್ಬಂದಿ ಮಾಡಿದ್ದ ಈ ಎಡವಟ್ಟಿನಿಂದಾಗಿ ವೃದ್ಧನ ಶವವನ್ನೇ ಹಿರಿಯೂರಿಗೆ ಕರೆದೊಯ್ಯಲಾಗಿತ್ತು. ಅಂತ್ಯಸಂಸ್ಕಾರದ ಕೊನೆ ಕ್ಷಣದಲ್ಲಿ ಮುಖ ನೋಡಲು ಮುಂದಾದ ವೇಳೆ ಅದಲು–ಬದಲಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕುಟುಂಬದವರು ಆಸ್ಪತ್ರೆಗೆ ಬಂದಿದ್ದಾರೆ.

ಆಸ್ಪತ್ರೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ವಾತಾವರಣ ತಿಳಿಗೊಳಿಸಿದರು. ಮರಳಿ ಶವವನ್ನು ಕುಟುಂಬಸ್ಥರಿಗೆ ಆಂಬುಲೆನ್ಸ್‌ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಇಬ್ಬರ ಶವ ಅಕ್ಕಪಕ್ಕದಲ್ಲಿ ಇದ್ದಿದ್ದರಿಂದಾಗಿ ಈ ರೀತಿಯಾಗಿದೆ ಎಂದು ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

ವೆಂಟಿಲೇಟರ್‌ ಸಿಗದೇ ಮಹಿಳೆ ಸಾವು: ವೆಂಟಿಲೇಟರ್‌ ಸಮಯಕ್ಕೆ ಸರಿಯಾಗಿ ಸಿಗದೇ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ‘ಆಸ್ಪತ್ರೆಯಲ್ಲಿ ಇರುವುದು ಎರಡೇ ವೆಂಟಿಲೇಟರ್. ಇದರಿಂದಾಗಿ ಸಮಸ್ಯೆ ಉಂಟಾಗಿದೆ. ಸೂಕ್ತ ಸಮಯಕ್ಕೆ ವೆಂಟಿಲೇಟರ್‌ ನೀಡಿದ್ದರೆ ಸಾವು ಸಂಭವಿಸುತ್ತಿರಲಿಲ್ಲ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು