ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ದಿನಗಳಲ್ಲಿ ಮಕ್ಕಳ ಕಲಿಕೆ ಸ್ವರೂಪ: ಪಾಠ ವೀಕ್ಷಣೆ ಶೇ 70- ದುಡಿಮೆ ಶೇ 30

ಡಿಎಸ್‌ಇಆರ್‌ಟಿ ಸಮೀಕ್ಷೆ
Last Updated 8 ಆಗಸ್ಟ್ 2021, 5:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ರಜಾ ಅವಧಿಯಲ್ಲಿ ಶೇ 70ರಷ್ಟು ಮಕ್ಕಳು ಟಿವಿ, ಮೊಬೈಲ್‌ ಬಳಸಿ ಪಾಠ ವೀಕ್ಷಿಸಿದ್ದರೆ, ಶೇ 30ರಷ್ಟು ಮಕ್ಕಳು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ಪಾಠ ವೀಕ್ಷಿಸಿರುವ ಮಕ್ಕಳ ಪೈಕಿ, ಅರ್ಧದಷ್ಟು ಮಂದಿ ಪಾಠದ ಜೊತೆಗೆ ಮೊಬೈಲ್‌ನಲ್ಲಿ ಆಟವನ್ನೂ ಆಡಿದ್ದಾರೆ, ಇತರ ಕಾರ್ಯಕ್ರಮಗಳನ್ನೂ ವೀಕ್ಷಿಸಿದ್ದಾರೆ!

ಶಾಲೆಗಳು ಮುಚ್ಚಿದ್ದರಿಂದ ನೇರ ತರಗತಿ ಬೋಧನೆ ನಡೆಯದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಯ ಸ್ವರೂಪ, ಗಳಿಸಿಕೊಂಡ ಕೌಶಲ ಅರಿಯಲು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾದ ಅಂಶವಿದು.

ಆನ್‌ಲೈನ್‌ ಕಲಿಕಾ ವ್ಯವಸ್ಥೆಯಲ್ಲಿ ಶೇ 70ರಷ್ಟು ವಿದ್ಯಾರ್ಥಿಗಳು ಒಂದಲ್ಲೊಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಆದರೆ, ಈ ಮಕ್ಕಳ ಕಲಿಕೆಯ ಪ್ರಮಾಣ ಎಷ್ಟು ಮತ್ತು ಅವರು ಏನು ಕಲಿಯಬೇಕೆಂದು ನಿರೀಕ್ಷಿಸಲಾಗಿತ್ತು ಎಂಬ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿ ಇಲ್ಲ.

ಮೊಬೈಲ್‌ನಲ್ಲಿ ಪಾಠ ವೀಕ್ಷಿಸಿದ ಎಲ್ಲರೂ ಎಲ್ಲ ಸಮಯದಲ್ಲಿ ಆಟ ಆಡದೇ ಇರಬಹುದು. ಪಾಠ ಅವಧಿ ಮುಗಿದ ಬಳಿಕ ಒಂದಷ್ಟು ಹೊತ್ತು ಆಟಗಳಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆಯೇ ಹೆಚ್ಚು. ಎಲ್ಲರೂ ದಿನವಿಡೀ ಮೊಬೈಲ್‌ ಬಳಸಿದ್ದರೇ ಎಂಬ ದತ್ತಾಂಶವೂ ಲಭ್ಯವಿಲ್ಲ. ಆದರೆ, ಮೊಬೈಲ್‌ ಹೊಂದಿರುವ ಒಂದಷ್ಟು ಪ್ರಮಾಣದ ಮಕ್ಕಳು ಅದರ ಚಟ ಬೆಳೆಸಿಕೊಳ್ಳುವ ಸಾಧ್ಯತೆ ಇದ್ದು, ಪೋಷಕರ ಜೊತೆ ಈ ಬಗ್ಗೆ ಮಾತನಾಡಿದರೆ ಗೊತ್ತಾಗಬಹುದು ಎಂದೂ ವರದಿ ಹೇಳಿದೆ.

ದುಡಿಮೆಯಲ್ಲಿ ತೊಡಗಿಸಿಕೊಂಡ ಮಕ್ಕಳ ಪ್ರಮಾಣ ಶೇ 30ಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯೂ ಇದೆ. ಈ ರೀತಿ ತೊಡಗಿಸಿಕೊಂಡ ಮಕ್ಕಳ ಹಿನ್ನೆಲೆ ಏನು? ‘ಬಿಡುವಿನ ವೇಳೆಯಲ್ಲಿ ಸಂಪಾದನೆ ಮಾಡಿಕೊಳ್ಳುತ್ತಿದ್ದೇವೆ. ಉಳಿದಂತೆ ತರಗತಿಗಳಲ್ಲಿ ಹಾಜರಾಗಿದ್ದೇವೆ’ ಎನ್ನುವ ಮಕ್ಕಳಲ್ಲಿ ಉದ್ಯೋಗದ ಆಯಾಸವು ಕಲಿಕೆಯನ್ನು ಯಾವ ರೀತಿ ಪ್ರಭಾವಿಸುತ್ತದೆ ಎಂಬ ಬಗ್ಗೆ ಹೆಚ್ಚಿನ ಅಧ್ಯಯನದಿಂದ ತಿಳಿಯಬೇಕಾಗಿದೆ ಎಂದೂ ಸಮೀಕ್ಷೆಯಲ್ಲಿದೆ.

ಮೊಬೈಲ್‌, ಟಿವಿ ವೀಕ್ಷಣೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಪ್ರಮಾಣ ಜಾಸ್ತಿ ಇರುವುದು ಗೊತ್ತಾಗಿದೆ. ಪೋಷಕರು ತಮ್ಮ ಮೊಬೈಲ್‌ ಅನ್ನು ಮಕ್ಕಳಿಗೆ ನೀಡಿದರೂ, ಪಾಠ ಇಲ್ಲದೇ ಇದ್ದಾಗ ಅದನ್ನು ವಾಪಸು ಪಡೆದಿರುವ ಸಾಧ್ಯತೆಗಳೇ ಹೆಚ್ಚು. ಖಾಸಗಿ ಶಾಲೆಗಳ ಮಕ್ಕಳು ಮನೆಯಲ್ಲಿಯೇ ಖಾಸಗಿ ಟ್ಯೂಷನ್‌ ಪಡೆಯುತ್ತಿದ್ದರು. ಸಾಮಾನ್ಯವಾಗಿ ಈ ಮಕ್ಕಳ ಪೋಷಕರು ಔಪಚಾರಿಕ ಕಲಿಕೆಯ ಯಶಸ್ಸಿನ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದಾರೆ. ಈ ನೆಲೆಯಲ್ಲಿ ಯೋಚಿಸಿದಾಗ ಲಾಕ್‌ಡೌನ್‌ ಅವಧಿಯಲ್ಲಿಯೂ ಮಕ್ಕಳನ್ನು ಪಠ್ಯ ಕಲಿಕೆಯಲ್ಲಿ ಒತ್ತಾಯ ಪೂರ್ವಕವಾಗಿಯಾದರೂ ತೊಡಗಿಸಿಕೊಂಡಿರುವ ಅನುಮಾನ ಮೂಡುತ್ತದೆ ಎಂದೂ ವರದಿಯಲ್ಲಿದೆ.

ಮಕ್ಕಳ ಶಿಕ್ಷಣ ಕುರಿತಂತೆ ಪೋಷಕರು ಪೂರ್ವ ಕಲ್ಪನೆಗಳಿಗೆ ಅನುಗುಣವಾಗಿ ಅವರು ಯೋಚಿಸಿರುವುದು ಮತ್ತು ಅದೇ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲು ಯತ್ನಿಸುತ್ತಿರುವುದರ ಬಗ್ಗೆ ಹಾಗೂ ಪೋಷಕರ ಗ್ರಹಿಕೆಗಳು ಮಕ್ಕಳ ಮೇಲೆ ಯಾವ ರೀತಿ ಪ್ರಭಾವಿಸಬಲ್ಲುದು, ಮಕ್ಕಳ ಸ್ವಾತಂತ್ರ್ಯವನ್ನು ಯಾವ ರೀತಿ ಮೊಟಕುಗೊಳಿಸಬಹುದು ಎಂಬ ಬಗ್ಗೆಯೂ ಅಧ್ಯಯನ ನಡೆಸುವುದು ಸೂಕ್ತ ಎಂದೂ ವರದಿ ಹೇಳಿದೆ.

ಕೋವಿಡ್‌ ರಜಾ ದಿನಗಳಲ್ಲಿ ಕಲಿಕೆ, ಕೌಶಲ ಗಳಿಕೆ, ಆಟೋಟ, ಸುತ್ತಾಟ, ಮಾತುಕತೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಅತ್ಯಂತ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಸ್ವ ಕಲಿಕೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದರೆ, ಖಾಸಗಿ ಶಾಲೆಗಳ ಮಕ್ಕಳು ಮೊಬೈಲ್ ಅಥವಾ ಇತರ ಮಾರ್ಗಗಳ ಮೂಲಕ ಶಿಕ್ಷಕರು ಮತ್ತು ಹಿರಿಯರನ್ನು ಆಶ್ರಯಿಸಿರುವುದನ್ನು ಈ ಅಧ್ಯಯನ ಗುರುತಿಸಿದೆ. ನಗರದ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಔಪಚಾರಿಕ ಕಲಿಕೆಗೆ ಹಿರಿಯರ ಮಾರ್ಗದರ್ಶನ ಲಭಿಸಿದೆ ಎಂದೂ ವರದಿಯಲ್ಲಿದೆ.

ಅವರಾಗಿಯೇ ಬಿಟ್ಟರೆ: ಮಕ್ಕಳನ್ನು ಅವರಾಗಿಯೇ ಇರಲು ಬಿಟ್ಟರೆ, ಅವರು ನಡೆಸುವ ಎಲ್ಲ ಚಟುವಟಿಕೆಯಲ್ಲೂ ಒಂದಷ್ಟು ಕಲಿಕೆ ಕಟ್ಟಿಕೊಳ್ಳುತ್ತಾರೆ. ಕೋವಿಡ್ ರಜೆಯ ಸಂದರ್ಭದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳ ಸದಾ ಟಿವಿ ಮುಂದೆ ಬಿದ್ದಿರುತ್ತಾರೆ ಅಥವಾ ಮೊಬೈಲ್‌ನಲ್ಲಿ ಆಟವಾಡುತ್ತಲೇ ಇರುತ್ತಾರೆ ಎಂಬ ಹಲವು ಗ್ರಹಿಕೆಗಳಿಗೆ ಯಾವುದೇ ಗಟ್ಟಿಯಾದ ತಳಹದಿಗಳಿಲ್ಲ. ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಶಾಲೆಗಳಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಮಾರ್ಗದರ್ಶನದ ಅಗತ್ಯವನ್ನು ಈ ಸಮೀಕ್ಷೆ ಒತ್ತಿ ಹೇಳಿದೆ.

ಕಲಿಕಾ ನಿರಂತರತೆಗೆ ‘ಪರ್ಯಾಯ ಶಿಕ್ಷಣ’
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ ಶಾಲೆಗಳು ಆರಂಭಗೊಳ್ಳುವುದು ವಿಳಂಬ ಆಗುತ್ತಿರುವುದರಿಂದ ಮಕ್ಕಳ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ತರಗತಿವಾರು, ವಿಷಯವಾರು ಮತ್ತು ಮಾಧ್ಯಮವಾರು ‘ಪರ್ಯಾಯ ಶೈಕ್ಷಣಿಕ ಯೋಜನೆ’ ರೂಪಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವೆಬ್‌ಸೈಟ್‌ನಲ್ಲಿ ಈ ಯೋಜನೆಯನ್ನು ಅಪ್‌ಲೋಡ್‌ ಮಾಡಲಾಗಿದೆ. ಸ್ಥಳೀಯ ಸನ್ನಿವೇಶ ಮತ್ತು ಕಲಿಕೆಯ ರೀತಿಗೆ ಅನುಗುಣವಾಗಿ ಚಟುವಟಿಕೆಯನ್ನು ರೂಪಿಸಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.
-ವಿ. ಅನ್ಬುಕುಮಾರ್‌,ಆಯುಕ್ತ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

***

ಎಲ್ಲ ವೃತ್ತಿಪರ ಕೋರ್ಸ್‌ಗಳ ಆನ್‌ಲೈನ್ ಬೋಧನೆ ಕಷ್ಟ. ಅನುಭವದ ಕಲಿಕೆಯೂ ಅಗತ್ಯ. ಆನ್‌ಲೈನ್‌ ಶಿಕ್ಷಣ ಉಪ್ಪಿನಕಾಯಿಯಂತಿರಬೇಕು. ಸಾಂಪ್ರದಾಯಿಕ ಶಿಕ್ಷಣವೂ ಸುಧಾರಣೆಯಾಗಬೇಕು. ತರಗತಿಯೊಳಗೆ ತಂತ್ರಜ್ಞಾನ ಬರಬೇಕು.
-ಪ್ರೊ. ಕರಿಸಿದ್ಧಪ್ಪ, ವಿಟಿಯು ಕುಲಪತಿ

***

ವೈದ್ಯಕೀಯ ಶಿಕ್ಷಣದಲ್ಲಿ ಪ್ರಾಯೋಗಿಕ ಕಲಿಕೆ ಮುಖ್ಯ, ಈಗಿನ ವ್ಯವಸ್ಥೆಯಲ್ಲಿ ಬೋಧನೆ ಮತ್ತು ಕಲಿಕಾ ಗುಣಮಟ್ಟ ನಿರೀಕ್ಷಿಸುವುದೂ ಸೂಕ್ತವಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಗೆ ಒತ್ತು ನೀಡಬೇಕಿದೆ.
-ಡಾ.ಪಿ.ಜಿ. ಗಿರೀಶ್‌, ನಿರ್ದೇಶಕರು,ವೈದ್ಯಕೀಯ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT