ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ರಸ್ತೆಗೆ ಟೊಮೆಟೊ ಸುರಿದು ರೈತರ ಆಕ್ರೋಶ

ಮಾರುಕಟ್ಟೆಯಲ್ಲಿ ಸಂಗ್ರಹಿಸಲು ವ್ಯವಸ್ಥೆಯೂ ಇಲ್ಲ
Last Updated 14 ಮೇ 2021, 19:31 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಟೊಮೆಟೊ ಬೆಳೆಗಾರರ ಪಾಲಿಗೆ ಶುಕ್ರವಾರ ಅಕ್ಷರಶಃ ಕರಾಳ ದಿನ. ಲಾಕ್‌ಡೌನ್‌ ಪರಿಣಾಮ ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ಟನ್‌ಗಟ್ಟಲೇ ಟೊಮೆಟೊವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ಎನ್. ವಡ್ಡಹಳ್ಳಿಯ ಎಪಿಎಂಸಿ ಉಪ ಮಾರುಕಟ್ಟೆಗೆ ಕಳೆದ ಎರಡು ದಿನಗಳಿಂದಲೂ ಟೊಮೆಟೊ ಆವಕ ಹೆಚ್ಚಿದೆ. ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಕ್ರೇಟ್ ಟೊಮೆಟೊ ಹರಾಜಿಗೆ ಬರುತ್ತಿದೆ. ಇಲ್ಲಿಂದ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಪೂರೈಕೆಯಾಗುತ್ತದೆ. ಅಲ್ಲಿಯೂ ಬೇಡಿಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿದೆ.

ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಸಂಗ್ರಹಿಸಿಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೇಸತ್ತ ರೈತರು ಟ್ರ್ಯಾಕ್ಟರ್‌ಗಳಲ್ಲಿ ಟೊಮೆಟೊ ತುಂಬಿಕೊಂಡು ಎನ್.ವಡ್ಡಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಹಾಗೂ ಅಲಂಗೂರು ರಸ್ತೆ ಬದಿಗಳಲ್ಲಿ ಸುರಿಯುತ್ತಿದ್ದಾರೆ.

ತಾಲ್ಲೂಕಿನ 6 ಸಾವಿರ ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದೆ. ಒಂದು ಎಕರೆಯಲ್ಲಿ ಬೆಳೆಯುಲು ₹ 1.50 ಲಕ್ಷ ವೆಚ್ಚವಾಗುತ್ತದೆ. ಉತ್ತಮ ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬಂದಿದೆ. ಆದರೆ, ಖರೀದಿಸುವವರೇ ಇಲ್ಲ.

‘ಕಳೆದ ಮೂರು ತಿಂಗಳಿಂದಲೂ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿಲ್ಲ. ಮಾಡಿರುವ ಖರ್ಚು ಕೂಡ ಕೈಸೇರಿಲ್ಲ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಲಾಕ್‌ಡೌನ್‌ ಪರಿಣಾಮ ಟೊಮೆಟೊ ಖರೀದಿಸುವವರು ಮಾರುಕಟ್ಟೆಯತ್ತ ಬರುತ್ತಿಲ್ಲ.

‘ಲಕ್ಷಾಂತರ ರೂಪಾಯಿ ವ್ಯಯಿಸಿ ಟೊಮೆಟೊ ಬೆಳೆದಿದ್ದೇವೆ. ಕೋವಿಡ್‌ ಸಂಕಷ್ಟದಲ್ಲಿ ಕುಟುಂಬದ ನಿರ್ವಹಣೆಯೂ ಕಷ್ಟಕರವಾಗಿದೆ. ಜನಪ್ರತಿನಿಧಿಗಳು ರೈತರ ಸಮಸ್ಯೆ ಆಲಿಸಲು ಮುಂದಾಗುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸುತ್ತಾರೆ ಟೊಮೆಟೊ ಬೆಳೆಗಾರ ಪ್ರಭಾಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT