ಬುಧವಾರ, ಸೆಪ್ಟೆಂಬರ್ 23, 2020
26 °C

ಸೋಂಕಿತಳಾಗಿದ್ದ ನನ್ನ ಎದೆ ಹಾಲುಂಡ ಮಗುವಿಗೆ ಕೋವಿಡ್‌ ಬಾರದಿದ್ದದ್ದು ಆಶ್ಚರ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ‘ನನಗೆ ಕೋವಿಡ್ ಪಾಸಿಟಿವ್ ಎಂದು ಗೊತ್ತಾದಾಗ, ಎದೆ ಹಾಲು ಕುಡಿಯುವ ಎರಡು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಆಸ್ಪತ್ರೆಯಲ್ಲಿ ಇರಬೇಕಾಗಿದ್ದಕ್ಕೆ ದುಃಖ ಉಮ್ಮಳಿಸಿ ಬಂದಿತ್ತು. ಅದನ್ನು ಹೊರತಾಗಿ  ಜ್ವರ, ಕೆಮ್ಮು, ನೆಗಡಿ ಮುಂತಾದ ಯಾವ ಅನಾರೋಗ್ಯ ಸಮಸ್ಯೆಯೂ ನನ್ನನ್ನು ಕಾಡಲಿಲ್ಲ...’

ಮುಂಬೈ ನಿವಾಸಿ, ಮೂಲತಃ ಕುಮಟಾದ ಸುರೇಖಾ ಕುರ್ಡೇಕರ್ ‘ಪ್ರಜಾವಾಣಿ’ ಜೊತೆ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡರು.

‘ನನ್ನ ಪತಿ ರವಿ ಕುರ್ಡೇಕರ್, ಲಾಕ್‌ಡೌನ್ ಅವಧಿಯಲ್ಲಿ ಅನಿವಾರ್ಯವಾಗಿ ವ್ಯಾಪಾರದ ನಿಮಿತ್ತ ನಿತ್ಯವೂ ಹೊರಗೆ ಹೋಗುತ್ತಿದ್ದರು. ನಾವು ಹೆಂಗಸರು, ಮೂವರು ಹೆಣ್ಣು ಮಕ್ಕಳು ಮನೆಯೊಳಗೆ ಇರುತ್ತಿದ್ದೆವು. ಮೂರು ತಿಂಗಳು ಮನೆಯೊಳಗೆ ಇರಲಾರದೆ ಮಕ್ಕಳಿಗೆ ಕಿರಿಕಿರಿಯಾಯಿತು. ಹಾಗಾಗಿ ಜುಲೈ 26ಕ್ಕೆ ಕುಮಟಾಕ್ಕೆ ಬಂದೆವು. ರೈಲು ನಿಲ್ದಾಣದಿಂದ ನೇರ ಆಸ್ಪತ್ರೆಗೆ ತೆರಳಿ ಗಂಟಲು ದ್ರವವನ್ನು ಪರೀಕ್ಷೆಗೆ ಕೊಟ್ಟು ಹೊಟೇಲ್‌ನಲ್ಲಿ ಉಳಿದೆವು..’

‘ಮೂರು ದಿವಸದ ನಂತರ ನನಗೆ ಹಾಗೂ ದೊಡ್ಡ ಮಗಳಿಗೆ ಕೋವಿಡ್ ಪಾಸಿಟಿವ್ ಬಂದಿತು. ಇನ್ನಿಬ್ಬರು ಮಕ್ಕಳು ಯಜಮಾನರಿಗೆ ನೆಗೆಟಿವ್ ಬಂದಿತು. ಪಾಸಿಟಿವ್ ಬಂದ ಮೇಲೂ ಐವರೂ ಒಂದೇ ಕೋಣೆಯಲ್ಲಿ ಮತ್ತೆ ಎರಡು ದಿನ ಇದ್ದೆವು. ಮೂರನೇ ದಿನಕ್ಕೆ ಆಸ್ಪತ್ರೆಯವರು ಬಂದು ಕರೆದುಕೊಂಡು ಹೋದರು..’

‘ಜುಲೈ 6ಕ್ಕೆ ಮತ್ತೆ ಎಲ್ಲರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ನನ್ನ ಹಾಗೂ ಮಗಳ ವರದಿ ನೆಗೆಟಿವ್ ಬರಲಿಲ್ಲ. ಜುಲೈ 13ಕ್ಕೆ ನನ್ನ ಮಗಳು, 17ಕ್ಕೆ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದೆವು. ಪಟ್ಟಣದ ಹೊಸಹೆರವಟ್ಟಾದ ನಮ್ಮ ಯಜಮಾನರ ಮಾವನವರ ಪ್ರತ್ಯೇಕ ಮನೆಗೆ ಬಂದಾಗ ಅಕ್ಕಪಕ್ಕದವರು ವಿರೋಧಿಸಿದರು. ಪೊಲೀಸರು ಹಾಗೂ ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಅವರು 14 ದಿವಸ ಮನೆಯಿಂದ ಹೊರಗೆ ಬರಲ್ಲ. ಅವರಿಂದ ಯಾವುದೇ ತೊಂದರೆ ಆಗಲ್ಲ ಎಂದು ಅವರನ್ನು ಸಮಾಧಾನಪಡಿಸಿದರು..’

‘ಹೋಟೆಲ್ ಕೋಣೆಯಲ್ಲಿ ಮೂರು ದಿನ ನಮ್ಮ ಜೊತೆ ಇದ್ದ ಯಜಮಾನರು, ಇನ್ನೊಬ್ಬ ಮಗಳಿಗೆ, ನನ್ನ ಎದೆ ಹಾಲು ಕುಡಿದ ನನ್ನ ಎರಡು ವರ್ಷದ ಮಗುವಿಗೆ ಕೋವಿಡ್ ಸೋಂಕು ತಗುಲದಿರುವುದು ವಿಚಿತ್ರ ಎನಿಸಿತು. ಆದರೆ, ನಾವೆಲ್ಲರೂ ಸೋಂಕು ತಡೆಯುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೆವು. ಆಸ್ಪತ್ರೆಯಲ್ಲಿ ಬಿಸಿ ನೀರು ಜೊತೆ ಎರಡು ರೀತಿಯ ಮಾತ್ರೆ ಕೊಟ್ಟಿದ್ದರು ಅಷ್ಟೇ. ಕೋವಿಡ್ ಆಸ್ಪತ್ರೆಯ ವಾರ್ಡ್‌ನಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡಲು ಸಿದ್ಧ ಎನ್ನುವಷ್ಟರ ಮಟ್ಟಿಗೆ ನಮ್ಮ ಯಜಮಾನರು ವಿಶ್ವಾಸ ಹೊಂದಿದ್ದಾರೆ..’

ನಿರೂಪಣೆ: ಎಂ.ಜಿ.ನಾಯ್ಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು