ಗುರುವಾರ , ಸೆಪ್ಟೆಂಬರ್ 23, 2021
21 °C

ಕೋವಿಡ್‌ ಗುಣಮುಖರಿಗೆ ಟಿಬಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಕ್ಷಯರೋಗ (ಟಿಬಿ) ಕಾಣಿಸಿಕೊಳ್ಳುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಈ ಕುರಿತು ಅಧ್ಯಯನ ಕೈಗೊಳ್ಳಲು ಆರೋಗ್ಯ ಇಲಾಖೆಯು ಇದೇ 16 ರಿಂದ 31ರವರೆಗೆ ಕೋವಿಡ್‌ನಿಂದ ಗುಣಮುಖರಾದವರಿಗೆ ಟಿಬಿ ಪರೀಕ್ಷೆ ಮಾಡುವ ಶಿಬಿರವನ್ನು ಹಮ್ಮಿಕೊಂಡಿದೆ.

ರಾಜ್ಯದಾದ್ಯಂತ ಸುಮಾರು ಹದಿನೈದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವರ್ಷಾರಂಭದಿಂದ ಜುಲೈ 31ರ ಅವಧಿಯಲ್ಲಿ ಕೋವಿಡ್‌ಗೆ ಒಳಗಾಗಿ ಗುಣಮುಖರಾಗಿರುವವರ ಆರೋಗ್ಯ ತಪಾಸಣೆ ನಡೆಸಲಾಗುವುದು. ಅವರಲ್ಲಿ ಸೋಂಕು ಲಕ್ಷಣಗಳು ಕಂಡು ಬಂದವರನ್ನು ಟಿಬಿ ಪರೀಕ್ಷೆಗೆ ಒಳಪಡಿಸಲಾಗುವುದು.

ಇದಕ್ಕಾಗಿ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಕೋವಿಡ್‌ ಗುಣಮುಖರ ಆರೋಗ್ಯದ ಮಾಹಿತಿ ಸಂಗ್ರಹಿಸಿ, ರೋಗ ಲಕ್ಷಣ ಆಧರಿಸಿ ಕಫದ ಮಾದರಿ ಸಂಗ್ರಹಿಸಲಿದ್ದಾರೆ. ಅಗತ್ಯವಿದ್ದವರನ್ನು ಆಸ್ಪತ್ರೆಗೆ ಕರೆತಂದು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ (ಟಿಬಿ ವಿಭಾಗ) ಜಂಟಿ ನಿದೇರ್ಶಕ ಡಾ. ರಮೇಶ್ ರೆಡ್ಡಿ ತಿಳಿಸಿದ್ದಾರೆ.

‘ಮೂರು ವಾರಗಳಿಂದ ನಿರಂತರ ಕೆಮ್ಮು, ಎರಡು ವಾರಗಳಿಂದ ನಿರಂತರ ಜ್ವರ, ಕೆಮ್ಮಿದಾಗ ರಕ್ತ ಬರುತ್ತಿದ್ದರೆ ಹಾಗೂ ತೂಕ ಕಡಿಮೆ ಆಗಿದ್ದರೆ ಅವರ ಕಫದ ಮಾದರಿ ಸಂಗ್ರಹಿಸಲಾಗುವುದು. ಅಗತ್ಯ ಇರುವವರಿಗೆ ಹತ್ತಿರದ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಕ್ಸ್‌ರೇ ಪರೀಕ್ಷೆಗೆ ಒಳಪಡಿಸಲಾಗುವುದು. ನಂತರ ಸೋಂಕು ತಗುಲಿರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು