ಗುರುವಾರ , ಆಗಸ್ಟ್ 5, 2021
22 °C

ಲಸಿಕೆ ಬಳಿಕ ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭ: ತಜ್ಞರ ಸಮಿತಿ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗೆ ಕೋವಿಡ್‌ ಲಸಿಕೆ ನೀಡಿದ ಬಳಿಕ ಹಂತ ಹಂತವಾಗಿ ಎಲ್ಲ ರೀತಿಯ ಪದವಿ ಕಾಲೇಜುಗಳಲ್ಲಿ ತರಗತಿ ಆರಂಭಿಸುವಂತೆ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತಜ್ಞರ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಿತು. ಬಳಿಕ ಸಮಿತಿಯ ಸದಸ್ಯರೊಂದಿಗೆ ಮುಖ್ಯಮಂತ್ರಿ ವಿಸ್ತೃತವಾಗಿ ಚರ್ಚಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನು ಹಂತ ಹಂತವಾಗಿ ಪುನರಾರಂಭ ಮಾಡುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಮೊದಲ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಿ, ಪದವಿ ಕಾಲೇಜುಗಳ ತರಗತಿಗಳನ್ನು ಆರಂಭಿಸುವಂತೆ ಶಿಫಾರಸು ಮಾಡಿದೆ’ ಎಂದರು.

18 ವರ್ಷ ವಯಸ್ಸಿಗಿಂತ ಮೇಲಿನ ಎಲ್ಲ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ನಂತರ ತರಗತಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಲಸಿಕೆ ಲಭ್ಯವಿಲ್ಲ. ಪ್ರಾಯೋಗಿಕ ಹಂತದಲ್ಲಿ ಇದೆ. ಈ ಕುರಿತು ನಂತರ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ವಿಶೇಷ ಆಸ್ಪತ್ರೆ ಆರಂಭಕ್ಕೆ ಶಿಫಾರಸು: ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಆಗಬಹುದು ಎಂಬ ಅನುಮಾನ ಇದೆ. ಈ ಕುರಿತು ಸಮಿತಿ ಅಧ್ಯಯನ ನಡೆಸುತ್ತಿದೆ. ಮೂರನೇ ಅಲೆ ಎದುರಿಸಲು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ ಮತ್ತು ವಿಶೇಷ ವಾರ್ಡ್‌ಗಳನ್ನು ಸಜ್ಜುಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ, ಕೊರೊನಾ ವೈರಾಣು ಸೋಂಕಿತ ಮಕ್ಕಳಿಗೆ ಮನೋಸ್ಥೈರ್ಯ ತುಂಬಲು ಆಸ್ಪತ್ರೆಗಳಲ್ಲಿ ಮನೋವೈದ್ಯರ ಸೇವೆ, ಕಾರ್ಪೋರೇಟ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಮಾನವ ಸಂಪನ್ಮೂಲ ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಮಿತಿ ಶಿಫಾರಸು ಮಾಡಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು