ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಲಸಿಕೆ ಹಾಕಿಸಿಕೊಳ್ಳಿ: ಅಮಿತ್‌ ಶಾ

ಜನರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ
Last Updated 17 ಜನವರಿ 2021, 14:36 IST
ಅಕ್ಷರ ಗಾತ್ರ

ಬೆಳಗಾವಿ: ‘ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡು ಕೊರೊನಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋರಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬಿಜೆಪಿಯಿಂದ ಆಯೋಜಿಸಿದ್ದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಹೀಗಾಗಿಯೇ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮರಣ ಪ್ರಮಾಣ ನಿಯಂತ್ರಿಸುವುದು ಸಾಧ್ಯವಾಗಿದೆ. ಕರ್ನಾಟಕದಲ್ಲೂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೂಡ ಸಮರ್ಥವಾಗಿ ಹೋರಾಟ ನಡೆಸಿ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದೆ’ ಎಂದರು.

‘ಕೋವಿಡ್ ನಿಯಂತ್ರಿಸಿದ್ದನ್ನು ಕೂಡ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಆಗಲೂ ಟೀಕೆ ಮಾಡಿದರು. ನಮ್ಮ ವಿಜ್ಞಾನಿಗಳು ಹಗಲುರಾತ್ರಿ ಶ್ರಮಪಟ್ಟು ಲಸಿಕೆ ತಯಾರಿಸಿದರೆ ಅದರಲ್ಲೂ ಅನುಮಾನ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಸಂಸ್ಕೃತಿ’ ಎಂದು ಟೀಕಿಸಿದರು.

ಆತ್ಮನಿರ್ಭರ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಇದರಲ್ಲಿ ಭಾರತ ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೇರಲಿದೆ. ಕರ್ನಾಟಕದಲ್ಲಿ ಈ ಯೋಜನೆಯಲ್ಲಿ ಅನೇಕ ಘಟಕಗಳು ನಿರ್ಮಾಣವಾಗಿವೆ. ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಲಪಡಿಸಿದ್ದೀರಿ

‘ಗ್ರಾಮ ಪಂಚಾಯ್ತಿಯ ಒಟ್ಟು ಸದಸ್ಯರಲ್ಲಿ ಶೇ.55ಕ್ಕೂ ಅಧಿಕ ಸದಸ್ಯರು ಪಕ್ಷದ ಕಾರ್ಯಕರ್ತರಾಗಿದ್ದಾರೆ. ರಾಜ್ಯದ ಜನರು ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈಬಲಪಡಿಸಿದ್ದೀರಿ’ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಜೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಉಮೇಶ್ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ಶಾಸಕರಾದ ಪಿ. ರಾಜೀವ, ಮಹಾಂತೇಶ ದೊಡ್ಡಗೌಡರ, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಸಿ.ಪಿ. ಯೋಗೇಶ್ವರ್, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಡಿ.ಎಂ. ಐಹೊಳೆ, ಅನಿಲ ಬೆನಕೆ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಇದ್ದರು.

ಶೌರ್ಯ ಸ್ಮರಣೆ

‘ಕರ್ನಾಟಕದ ಇತಿಹಾಸ ಭಾರತಕ್ಕೆ ಪ್ರೇರಣಾಶಾಲಿಯಾಗಿದೆ’ ಎಂದ ಶಾ ಅವರು, ಬೆಳವಡಿ ಮಲ್ಲಮ್ಮನ ಶೌರ್ಯ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಕೊಂಡಾಡಿ, ದೇಶಕ್ಕಾಗಿ ಬಲಿದಾನಗೈದ ಅವರನ್ನು ಸ್ಮರಿಸಿದರು.

‘ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ಪಕ್ಷ ಮತ್ತು ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ’ ಎಂದು ಸಂತಾಪ ವ್ಯಕ್ತಪಡಿಸಿದರು.

‘ಕನ್ನಡ-ಮರಾಠಿ ಸಮ್ಮಿಳಿತ ಸಂಸ್ಕೃತಿಯ ಮುಂಬೈ ಕರ್ನಾಟಕ ಪ್ರದೇಶವು ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದೆ’ ಎಂದರು.

‘ನೂತನ ಗ್ರಾಮ ‍ಪಂಚಾಯ್ತಿ ಸದಸ್ಯರನ್ನು ಅಭಿನಂದಿಸಿದ ಅವರು, ಈ ಪ್ರಚಂಡ ಗೆಲುವು ಮುಂಬರುವ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲೂ ಮುಂದುವರಿಯಬೇಕು. ಶೇ.75ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಸೂಚಿಸಿದರು.

***

ಕಾಂಗ್ರೆಸ್‌ನಿಂದ ಏಕೆ ಆಗಲಿಲ್ಲ?

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ಸೇರಿದಂತೆ ಬಹತೇಕ ವಿರೋಧ ಪ್ಷಕಗಳು ಟೀಕಿಸಿದವು. ಸರ್ಕಾರದ ವಿರುದ್ಧ ಏನೆಲ್ಲಾ ಮಾತನಾಡಿದರು? ಆದರೆ, ಮೋದಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಆರ್ಟಿಕಲ್ 370 ಶಾಸನವನ್ನು ಕಿತ್ತೆಸೆದರು. ಇದರ ಪರಿಣಾಮ ಜಮ್ಮು–ಕಾಶ್ಮೀರದಲ್ಲಿ ಈಗ ಸಂಪೂರ್ಣ ಶಾಂತಿ ನೆಲಸಿದೆ. ವಾತಾವರಣ ಬದಲಾಗುತ್ತಿದೆ. ಅಲ್ಲಿನ ಜನರು ಅಭಿವೃದ್ಧಿಯತ್ತ ಮುಖ ಮಾಡಿದ್ದಾರೆ’ ಎಂದರು.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಕೇವಲ ದಿನಾಂಕಗಳನ್ನಷ್ಟೇ ಕಂಡಿತ್ತು. ಯಾರಿಗೂ ಮಂದಿರ ನಿರ್ಮಾಣ ಮಾಡುವ ಮನಸ್ಸಿರಲಿಲ್ಲ. ಆದರೆ, ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾದ ಬಳಿಕ ಶಿಲಾನ್ಯಾಸ ನೆರವೇರಿಸಿ ಮಂದಿರದ ನಿರ್ಮಾಣಕ್ಕೆ ದಾರಿ ತೋರಿಸಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟರು. ಇದೆಲ್ಲವೂ ಕಾಂಗ್ರೆಸ್‌ನಿಂದ ಸಾಧ್ಯವಾಗಲಿಲ್ಲವೇಕೆ? ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT