ಶನಿವಾರ, ಸೆಪ್ಟೆಂಬರ್ 18, 2021
30 °C
ಒಂದು ಡೋಸ್‌ – ಶೇ 36ರಷ್ಟು ಮಂದಿ ಮಾತ್ರ* ಮುಂದೆ ಸಾಗದ ಲಸಿಕಾ ಅಭಿಯಾನ

ಕೋವಿಡ್‌: ರಾಜ್ಯದ 6 ಜಿಲ್ಲೆಯಲ್ಲಷ್ಟೇ ಶೇ 50 ಮಂದಿಗೆ ಲಸಿಕೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣಾ ಅಭಿಯಾನವು ಪ್ರಾರಂಭವಾಗಿ ಆರೂವರೆ ತಿಂಗಳು ಕಳೆದರೂ ಒಂದು ಡೋಸ್ ಲಸಿಕೆ ಪಡೆದವರ ಪ್ರಮಾಣ 12 ಜಿಲ್ಲೆಗಳಲ್ಲಿ ಶೇ 40ಕ್ಕಿಂತ ಕಡಿಮೆಯಿದೆ.

ಅಧಿಕ ಸಂಖ್ಯೆಯಲ್ಲಿ ಸಾವು–ನೋವಿಗೆ ಕಾರಣವಾಗಿದ್ದ ಕೋವಿಡ್ ಎರಡನೇ ಅಲೆಯು ಒಂದು ತಿಂಗಳಿಂದೀಚೆಗೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಈಗ ನೆರೆಯ ರಾಜ್ಯ ಕೇರಳದಲ್ಲಿ ಏರುಗತಿ ಪಡೆದಿದೆ. ರಾಜ್ಯದಲ್ಲಿ ಮೂರನೇ ಅಲೆಯು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಲೆಕ್ಕಾಚಾರ ಹಾಕಿದ್ದ ವೈದ್ಯಕೀಯ ತಜ್ಞರು, ಆ ವೇಳೆಗೆ ಶೇ 70ರಷ್ಟು ಮಂದಿಗೆ ಕೋವಿಡ್ ಲಸಿಕೆ ವಿತರಿಸಿರಬೇಕು ಎಂದು ಸಲಹೆ ಕೊಟ್ಟಿದ್ದರು.

ರಾಜ್ಯದಲ್ಲಿ ಕಳೆದ ಜ.16ರಿಂದ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಈವರೆಗೆ ಶೇ 36.5ರಷ್ಟು ಮಂದಿ ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ ಶೇ 9.9ರಷ್ಟು ಮಂದಿ ಎರಡು ಡೋಸ್ ಲಸಿಕೆ ಪೂರ್ಣಗೊಳಿಸಿದ್ದಾರೆ. ಈವರೆಗೆ 3.06 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. 2.40 ಕೋಟಿ ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೇ, 65.71 ಲಕ್ಷ ಮಂದಿ ಎರಡನೆ ಡೋಸ್ ಲಸಿಕೆಯನ್ನೂ ಪಡೆದಿದ್ದಾರೆ. ಕೇಂದ್ರ ಸರ್ಕಾರದಿಂದ ಬೇಡಿಕೆಯಷ್ಟು ಲಸಿಕೆ ಪೂರೈಕೆಯಾಗದಿರುವುದರಿಂದ ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ಸರಾಸರಿ 2.5 ಲಕ್ಷ ಡೋಸ್‌ಗಳನ್ನು ವಿತರಿಸಲಾಗುತ್ತಿದೆ.

6 ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ: ಈವರೆಗೆ ಲಸಿಕೆ ವಿತರಣೆಯನ್ನು ಆಧರಿಸಿ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆ ಮಾಡಿದ್ದು, ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಮಾತ್ರ ಶೇ 50ಕ್ಕಿಂತ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶೇ 86.76, ಉಡುಪಿಯಲ್ಲಿ ಶೇ 62.55, ದಕ್ಷಿಣ ಕನ್ನಡದಲ್ಲಿ ಶೇ 55.91, ಮೈಸೂರಿನಲ್ಲಿ ಶೇ 55.59, ರಾಮನಗರದಲ್ಲಿ ಶೇ 53.80 ಹಾಗೂ ಕೊಡಗಿನಲ್ಲಿ ಶೇ 50.49ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಹಾವೇರಿಯಲ್ಲಿ ಶೇ 28.87ರಷ್ಟು ಮಂದಿ ಮಾತ್ರ ಈವರೆಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಶೇ 40ರ ಗಡಿಯೊಳಗೆ ಇವೆ.

‘ಜನಸಂಖ್ಯೆಗೆ ಅನುಗುಣವಾಗಿ ಲಸಿಕೆಯನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರೂ ಗ್ರಾಮೀಣ ಪ್ರದೇಶದವರು ಹಿಂದೇಟು ಹಾಕುತ್ತಿದ್ದಾರೆ. ಆದಷ್ಟು ಬೇಗ ಎಲ್ಲ 18 ವರ್ಷ ಮೇಲ್ಪಟ್ಟವರಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಒದಗಿಸಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಲಸಿಕೆ: ಹಿಂದೆ ಬಿದ್ದ ಜಿಲ್ಲೆಗಳು

ಜಿಲ್ಲೆ; ವಿತರಣೆ ಪ್ರಮಾಣ (ಶೇ)

ಹಾವೇರಿ; 28.87

ಕಲಬುರ್ಗಿ; 30.93

ರಾಯಚೂರು; 31.80

ಯಾದಗಿರಿ; 32.85

ಬೆಳಗಾವಿ; 34.73

ದಾವಣಗೆರೆ; 34.89

ವಿಜಯಪುರ; 35.11

ಕೊಪ್ಪಳ; 38.12

ಬೀದರ್; 38.45

ಬಾಗಲಕೋಟೆ; 39.16

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು