ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ: 45 ವರ್ಷ ದಾಟಿದ ಶೇ 13 ಜನರಿಗಷ್ಟೇ ಲಸಿಕೆ

18 ದಾಟಿದ ಶೇ 6.2 ಮಂದಿಗೆ ಇದುವರೆಗೆ ಮೊದಲ ಡೋಸ್‌
Last Updated 8 ಜೂನ್ 2021, 20:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡೂ ಡೋಸ್‌ ಹಾಕಿಸಿಕೊಂಡ 45 ವರ್ಷ ದಾಟಿದವರ (60 ವರ್ಷ ದಾಟಿದವರೂ ಸೇರಿ) ಪ್ರಮಾಣ ಈವರೆಗೆ ಶೇ 13 ರಷ್ಟು ಮಾತ್ರ. 18ರಿಂದ 44 ವರ್ಷ ವಯೋಮಾನದವರು ಮೊದಲ ಡೋಸ್ ಹಾಕಿಸಿಕೊಂಡ ಪ್ರಮಾಣ ಅದರ ಅರ್ಧದಷ್ಟು (ಶೇ 6.2) ಮಾತ್ರ!

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ (ಹೆಲ್ತ್‌ ಕೇರ್‌ ವರ್ಕರ್ಸ್‌) ಕೆಲಸ ಮಾಡುವವರ ಪೈಕಿ, ಈವರೆಗೆ ಶೇ 53ರಷ್ಟು ಮಂದಿ ಎರಡೂ ಡೋಸ್‌ ಹಾಕಿಸಿಕೊಂಡಿದ್ದಾರೆ. ಆದರೆ, ಮುಂಚೂಣಿ ಕಾರ್ಯಕರ್ತರೆಂದು (ಫ್ರಂಟ್‌ಲೈನ್‌ ವರ್ಕರ್ಸ್) ಗುರುತಿಸಿದ ವರ್ಗದಲ್ಲಿ ಶೇ 29ರಷ್ಟು ಮಂದಿ ಮಾತ್ರ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಈ ಎರಡೂ ವರ್ಗದ ಕಾರ್ಯಕರ್ತರಲ್ಲಿ ಶೇ 80ಕ್ಕೂ ಹೆಚ್ಚು ಮಂದಿ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ.‌‌

45 ವರ್ಷ ದಾಟಿದವರ (60 ವರ್ಷ ದಾಟಿದವರೂ ಸೇರಿದಂತೆ) ಪೈಕಿ, ಈವರೆಗೆ ಶೇ 52 ಮಂದಿ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ. ಬೆಂಗಳೂರು ನಗರ (ಶೇ 20) ಕೊಡಗು ಮತ್ತು ಬಿಬಿಎಂಪಿ (ಶೇ 17) ಗದಗ (ಶೇ 16) ಎರಡೂ ಡೋಸ್‌ ಹಾಕಿಸಿಕೊಂಡ ಈ ವಯೋಮಾನದವರ ಜಿಲ್ಲೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಹಾವೇರಿ (ಶೇ 6) ಕಲಬುರ್ಗಿ ಮತ್ತು ಬೆಳಗಾವಿ (ಶೇ 7) ವಿಜಯಪುರ (ಶೇ 9) ಈ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿದೆ.

18ರಿಂದ 44 ವಯೋಮಾನ ದವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಮೇ 1ರಂದು ಚಾಲನೆ ನೀಡಲಾಗಿದೆ. ಈ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ಹೊಂದಿದ್ದರೂ, ಲಸಿಕೆ ಲಭ್ಯತೆ ಇಲ್ಲ.

ಕೋಲಾರ ಜಿಲ್ಲೆಯಲ್ಲಿ (ಶೇ 17.7) ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ವಯೋಮಾನದವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರು ನಗರ (13.5), ಬಿಬಿಎಂಪಿ (13.5), ಬೀದರ್‌ (ಶೇ 7), ಕೊಡಗು (ಶೇ 6.6), ರಾಮಗರ (ಶೇ 6.9) ನಂತರದ ಸ್ಥಾನದಲ್ಲಿವೆ. ಅತೀ ಕಡಿಮೆ ವಿಜಯಪುರ (ಶೇ 1), ಬೆಳಗಾವಿ (ಶೇ 1.4), ಹಾವೇರಿ (ಶೇ 1.7), ಚಿತ್ರದುರ್ಗ (ಶೇ 1.8) ಇದೆ.

‘18ರಿಂದ 44 ವಯೋಮಾನದವರಿಗೆ ಕೇಂದ್ರ ಸರ್ಕಾರವೇ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಈ ಉದ್ದೇಶಕ್ಕೆ ಈಗಾಗಲೇ 3 ಕೋಟಿ ಲಸಿಕೆ ಉತ್ಪಾದಕ ಕಂಪನಿಗಳಿಂದ ನೇರವಾಗಿ ಖರೀದಿಸಲು ಸರ್ಕಾರ ಆದೇಶ ನೀಡಿದ್ದು, ಸ್ವಲ್ಪ ಹಣ ಪಾವತಿಸಲಾಗಿದೆ. ಈ ಆದೇಶವನ್ನು ಮರು ಪರಿಶೀಲಿಸಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

* ರಾಜ್ಯಕ್ಕೆ ಹಂತ ಹಂತವಾಗಿ ಕೋವಿಡ್‌ ಲಸಿಕೆ ಪೂರೈಕೆ ಆಗುತ್ತಿದೆ. ಈ ತಿಂಗಳಲ್ಲಿ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುವ ವಿಶ್ವಾಸವಿದೆ.

–ಕೆ.ವಿ. ತ್ರಿಲೋಕಚಂದ್ರ, ಆಯುಕ್ತರು, ಆರೋಗ್ಯ ಇಲಾಖೆ

ಕೆ.ವಿ. ತ್ರಿಲೋಕಚಂದ್ರ
ಕೆ.ವಿ. ತ್ರಿಲೋಕಚಂದ್ರ

* ಈ ತಿಂಗಳಲ್ಲಿ ಕೇಂದ್ರದ 58 ಲಕ್ಷ‌, ಖಾಸಗಿ ಕ್ಷೇತ್ರದಿಂದ 20 ಲಕ್ಷ ಡೋಸ್‌ ಲಸಿಕೆ ಲಭ್ಯವಾಗಲಿದೆ. ಜೂನ್‌ ತಿಂಗಳಲ್ಲಿ ರಾಜ್ಯಕ್ಕೆ 80 ಲಕ್ಷ ಡೋಸ್‌ ಲಸಿಕೆ ಸಿಗಲಿದೆ.

–ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಕೋವಿಡ್‌ ಕಾರ್ಯಪಡೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT