ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದಿಂದ ಬದುಕು ದುಸ್ತರ

Last Updated 21 ಫೆಬ್ರುವರಿ 2021, 21:53 IST
ಅಕ್ಷರ ಗಾತ್ರ

ಬೆಂಗಳೂರು: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳಿಂದ ಜನಸಾಮಾನ್ಯರ ಬದುಕು ದುಸ್ತರಗೊಂಡಿದೆ. ಈ ಸರ್ಕಾರವು ಹಿಂದೂರಾಷ್ಟ್ರ ಪರಿಕಲ್ಪನೆ ಮುಂಚೂಣಿಗೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದೆ’ ಎಂದು ಕಾಮ್ರೆಡ್ ಎಂ.ಎ.ಬೇಬಿ ಟೀಕಿಸಿದರು.

ಮಹಾನ್‌ ತತ್ವಜ್ಞಾನಿ ಫ್ರೆಡರಿಕ್‌ ಏಂಗೆಲ್ಸ್‌ ಅವರ ದ್ವಿಶತಮಾನ ವರ್ಷಾಚರಣೆಯ ಹಿನ್ನೆಲೆಯಲ್ಲಿ ‘ಕಮ್ಯುನಿಸಂ ಎಂದರೇನು’ ಕೃತಿಯ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ರೈತರು, ಕಾರ್ಮಿಕರು, ಆದಿವಾಸಿಗಳ ಮೇಲೆ ಮೋದಿ ಸರ್ಕಾರ ಗದಪ್ರಹಾರ ನಡೆಸುತ್ತಿದೆ. ಸರ್ಕಾರದ ನೀತಿಗಳು ಹಾಗೂ ಸರ್ವಾಧಿಕಾರಿ ಧೋರಣೆ ವಿರುದ್ಧ ರೈತರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಕೇಂದ್ರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತೊಗೆದು ನಿರಂಕುಶ ಪ್ರಭುತ್ವ ಹೇರುವ ಹುನ್ನಾರ ನಡೆಸುತ್ತಿದೆ. ಆರ್‌ಎಸ್‌ಎಸ್‌ನ ಹಿಂದೂ
ರಾಷ್ಟ್ರ ಸಿದ್ಧಾಂತದ ವಿರುದ್ಧ ನಾವೆಲ್ಲ ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ’ ಎಂದರು.

‘ಬಂಡವಾಳಶಾಹಿ ವ್ಯವಸ್ಥೆಯು ಶೋಷಣೆಗೆ ದಾರಿಮಾಡಿಕೊಡುತ್ತದೆ. ಬಂಡವಾಳಶಾಹಿಗಳಿಗೆ ಪ್ರಕೃತಿ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಅವರು ಸಿಕ್ಕಿದ್ದನ್ನೆಲ್ಲಾ ಲೂಟಿ ಮಾಡುತ್ತಾರೆ. ಪ್ರಕೃತಿ ಉಳಿಸಿ ಬೆಳೆಸುವ ಕೆಲಸ ಆಗದಿದ್ದರೆ ಇಡೀ ಮಾನವ ಕುಲವೇ ನಿರ್ನಾಮಗೊಳ್ಳಲಿದೆ’ ಎಂದು ಎಚ್ಚರಿಸಿದರು.

ಕಾಮ್ರೆಡ್ ಟಿ.ಸುರೇಂದ್ರ ರಾವ್ ‘ಏಂಗೆಲ್ಸ್‌ ಅವರ 15 ಪುಟಗಳಮೂಲ ಕೃತಿಯನ್ನು ಓದುತ್ತಿದ್ದಂತೆ ರೋಮಾಂಚನ ಉಂಟಾಗಿತ್ತು. ಅವರ ಬರಹವನ್ನು ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಬಹಳ ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದೇನೆ’ ಎಂದರು.

‘ಫೆ.21ರಿಂದ ದೇಶದಾದ್ಯಂತ ಕೆಂಪು ಪುಸ್ತಕ ದಿನ ಆಚರಿಸಲು ಎಡಪಂಥೀಯ ಪ್ರಕಾಶಕರ ಸಂಘಟನೆ ತೀರ್ಮಾನಿಸಿದೆ. ಏಂಗೆಲ್ಸ್‌ ಅವರ ಕೃತಿಯೊಳಗೆ ಅಡಗಿರುವ ವಿಚಾರಗಳು ಎಲ್ಲಾ ವರ್ಗದವರಿಗೂ ತಲುಪಬೇಕು. ಹೀಗಾಗಿ ಇದನ್ನು ವಿಡಿಯೊ ಮತ್ತು ಆಡಿಯೊ ರೂಪದಲ್ಲೂ ಹೊರತರಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಚಾರಗಳನ್ನು ಪಸರಿಸುವ ಕೆಲಸ ಮಾಡಬೇಕು’ ಎಂದು ಮಾಹಿತಿ ನೀಡಿದರು.

ಸಿಪಿಎಂನ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್‌, ಕೆ.ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT