ಶನಿವಾರ, ಸೆಪ್ಟೆಂಬರ್ 18, 2021
22 °C

ರಾಜೀನಾಮೆ ಕೊಡಲು ಸಿದ್ಧ ಎನ್ನುತ್ತಿರುವ ಬಿಎಸ್‌ವೈ ನಡೆ ನಿಗೂಢ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳುತ್ತಿದ್ದರೂ ಯಡಿಯೂರಪ್ಪನವರ ನಡೆ ಮಾತ್ರ ನಿಗೂಢ.

ವರಿಷ್ಠರು ಸೂಚಿಸಿದ್ದಾರೆ, ಪದಚ್ಯುತಿ ಖಚಿತ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಹಾಗಿದ್ದ ಮೇಲೆ, 25ಕ್ಕೆ ಸಂದೇಶ ಬರುತ್ತದೆ ಎಂದು ಬಹಿರಂಗವಾಗಿ ಹೇಳುವ ಅಗತ್ಯ ಏನಿತ್ತು. ಯಾವ ಸಂದೇಶವನ್ನು ರವಾನಿಸಲು ಹೀಗೆ ಹೇಳಿದರು ಎಂಬ ಚರ್ಚೆಯೂ ನಡೆಯುತ್ತಿದೆ.

‘ಎರಡು ತಿಂಗಳ ಹಿಂದೆ ರಾಜೀನಾಮೆ ನಿರ್ಧಾರ ಮಾಡಿದ್ದೆ’ ಎಂದು ಹೇಳಿದ ಯಡಿಯೂರಪ್ಪ, ಮಠಾಧೀಶರ ಗುಂಪನ್ನು ಸೇರಿಸಿ ಬಲಪ್ರದರ್ಶನ ಮಾಡುತ್ತಿರುವುದು ಏಕೆ? 25ರಂದೇ ಸಂದೇಶ ಬರುವುದಾದರೆ ಮಠಾಧೀಶರು ಸ್ವಯಂ ಪ್ರೇರಣೆಯಿಂದ ಸಮಾವೇಶ ಆಯೋಜಿಸಿದ್ದಾರೆಯೇ? ಹೀಗೆ ಮಾಡುವ ಮೂಲಕ ತಮ್ಮನ್ನು  ಕೆಳಗಿಳಿಸಿದರೆ ಲಿಂಗಾಯತರು ತಿರುಗಿಬೀಳುವುದು ಖಚಿತ ಎಂಬ ಸಂದೇಶ ರವಾನಿಸುವುದು ಯಡಿಯೂರಪ್ಪ ಉದ್ದೇಶವೇ?  ತಮ್ಮ ಮಗ ಬಿ.ವೈ.ವಿಜಯೇಂದ್ರಗೆ ರಾಜಕೀಯ ಭವಿಷ್ಯ ಕಲ್ಪಿಸುವುದರ ಜತೆಗೆ, ತಾವು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿಸಿ, ಅಧಿಕಾರದ ಅಂಕೆ ತಮ್ಮ ಕೈಯಲ್ಲೇ ಇರುವಂತೆ ನೋಡಿಕೊಳ್ಳುವ ಅಂದಾಜು ಇದ್ದಂತಿದೆ ಎಂಬ ವಿಶ್ಲೇಷಣೆ ಪಕ್ಷದೊಳಗೆ ನಡೆದಿದೆ.

ಯಡಿಯೂರಪ್ಪ ಅಷ್ಟು ಸುಲಭಕ್ಕೆಲ್ಲ ಅಧಿಕಾರ ಬಿಟ್ಟುಕೊಡುವ ಜಾಯಮಾನದವರಲ್ಲ. ಕೊನೆ ಗಳಿಗೆಯ ಆಟ ಹಾಕುವುದು ಅವರಿಗೆ ಗೊತ್ತು ಎಂದು  ಹೇಳುತ್ತಾರೆ ಅವರ ಜತೆ ನಿಕಟವಾಗಿ ಗುರುತಿಸಿಕೊಂಡಿರುವ ಶಾಸಕರು.

ಈ ಆತಂಕದಿಂದಲೇ, ಇಂದು ನಡೆಯಬೇಕಿದ್ದ ಶಾಸಕರ ಭೋಜನ ಕೂಟ ರದ್ದುಪಡಿಸುವಂತೆ ವರಿಷ್ಠರು ಸೂಚಿಸಿದ್ದರು ಎಂಬ ಮಾತುಗಳೂ ಇವೆ. ಹಾಗೊಂದು ವೇಳೆ ಮೇಲಿನ ತರ್ಕವೆಲ್ಲ ಸರಿಯಾದರೆ, 29ರಂದು ನಡೆಯಬೇಕಿದ್ದ ಶಿವಮೊಗ್ಗದ ಕಾರ್ಯಕ್ರಮಗಳನ್ನು 24ಕ್ಕೇ ಮುಗಿಸಿದ್ದು ಯಾಕೆ? ಎಂಬ ಪ್ರಶ್ನೆಯೂ ಇದೆ.

‘1–2’ ನಾಯಕರು ಮಾತ್ರ ಕೊಡಬಹುದಾದ ಉತ್ತರಕ್ಕೆ ಯಾರೊಬ್ಬರೂ ಏನನ್ನೂ ಹೇಳಲಾರರು. ಅವರ ತೀರ್ಮಾನವೇ ಯಡಿಯೂರಪ್ಪನವರ ಭವಿಷ್ಯ ನಿರ್ಣಯಿಸಲಿದೆ ಎಂಬುದಷ್ಟೇ ನಿಜ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು