ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಫಿ ಪಾಸ್‌ ಅಡಿ ಮರ ಕಡಿದ ಪ್ರಕರಣ; ತನಿಖೆ ನನೆಗುದಿಗೆ

ಮೂಡಿಗೆರೆಯ ಬಾಳೂರು ಮೀಸಲು ಅರಣ್ಯದ ಸರಹದ್ದು
Last Updated 24 ಜೂನ್ 2021, 19:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮಾಫಿ ಪಾಸ್‌’ ಹೆಸರಿನಲ್ಲಿ ಮೂಡಿಗೆರೆ ತಾಲ್ಲೂಕಿನ ಬಾಳೂರು ಮೀಸಲು ಅರಣ್ಯ ಸರಹದ್ದಿನಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ ಎಂಬ ದೂರಿನ ತನಿಖೆ ನನೆಗುದಿಗೆ ಬಿದ್ದಿದೆ.

‘ ಮಾಫಿ ಪಾಸ್‌’ (ಖಾಸಗಿ ಜಮೀನಿನ ಮರ ಕಡಿಯಲು ನೀಡುವ ಅನುಮತಿ ಪತ್ರ) ಹೆಸರಿನಲ್ಲಿ ಮೂಡಿಗೆರೆ, ಕಳಸ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ. ಇದರಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಫ್‌ಒ ಸತೀಶ್‌ ಅವರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಮರ ಕಡಿದಿರುವ ಜಾಗ ಯಾರಿಗೆ ಸೇರಿದ್ದು (ಖಾಸಗಿ ಅಥವಾ ಅರಣ್ಯ) ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಮೋಜಣಿ ನಡೆಸಲು ತೀರ್ಮಾನಿಸಲಾಗಿದೆ. ನಾಲ್ಕೈದು ತಿಂಗಳು ಕಳೆದರೂ ಮೋಜಣಿ ಕೈಗೆತ್ತಿಕೊಂಡಿಲ್ಲ.

‘ಜಂಟಿ ಮೋಜಣಿಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಕೋವಿಡ್‌ನಿಂದಾಗಿ ಪ್ರಕ್ರಿಯೆ ತಡವಾಗಿದೆ. ಜಂಟಿ ಮೋಜಣಿ ಮುಗಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ್‌ ಪನ್ವಾರ್‌ ‘ಪ್ರಜಾವಾಣಿ’ಗೆತಿಳಿಸಿದರು.

ಆರ್‌ಎಫ್‌ಒ ಅಮಾನತಿಗೆ ಮುಖ್ಯಮಂತ್ರಿಗೆ ಪತ್ರ: ‘ಕಳಸ ವಲಯದ ಆರ್‌ಎಫ್‌ಒ ಜೆ.ವಿಜಯಕುಮಾರ್‌ ಅವರ ಕಾರ್ಯನಿರ್ವಹಣೆ ಬಗ್ಗೆ ಹಲವಾರು ಸಾರ್ವಜನಿಕರು ದೂರು ನೀಡಿದ್ದಾರೆ. ಅವರನ್ನು ಅಮಾನತುಗೊಳಿಸಬೇಕು’ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪತ್ರ ಬರೆದಿದ್ದಾರೆ. ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಯಡಿಯೂರಪ್ಪ ಅವರು ಆ ಪತ್ರದಲ್ಲಿ ಒಕ್ಕಣೆಬರೆದಿದ್ದಾರೆ.

‘ವಿಜಯಕುಮಾರ್‌ ಅವರು,ಮಾಫಿ ಪಾಸ್‌ ಟಿಂಬರ್‌ ಕಂಟ್ರ್ಯಾಕ್ಟರ್‌ ಜತೆ ಕೈಜೋಡಿಸಿದ್ದು, ಹಲಗಡ್ಕಕದ ಸರ್ವೆ ನಂಬರ್‌ 10ರ ಹಿಡುವಳಿಯ ದ್ಯಾವಪ್ಪ ಅವರ ಸ್ವಂತ ಜಾಗದ್ದವು ಎಂದು ಗುರುತಿಸಿ ಬಾಳೂರು ಮೀಸಲು ಅರಣ್ಯದಲ್ಲಿ 500ರಿಂದ 600 ಮರಗಳನ್ನು ಕಡಿಸಿದ್ದಾರೆ’ ಎಂದು ಸಚಿವ ಲಿಂಬಾವಳಿ ಅವರಿಗೆ ಪತ್ರದಲ್ಲಿ ಕುಮಾರಸ್ವಾಮಿ
ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT