ಮಂಗಳವಾರ, ಅಕ್ಟೋಬರ್ 26, 2021
24 °C
ಚಾಮುಂಡಿಬೆಟ್ಟದಲ್ಲಿ ಸರಳ, ಸಾಂಪ್ರದಾಯಿಕ ನಾಡಹಬ್ಬಕ್ಕೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರಿಂದ ಚಾಲನೆ

ಕೊರೊನಾದಿಂದ ಚಾಮುಂಡೇಶ್ವರಿ ರಕ್ಷಿಸಲಿ: ಎಸ್.ಎಂ.ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: 'ಮನುಕುಲಕ್ಕೆ ಬಂದಿರುವ ದೊಡ್ಡ ಗಂಡಾಂತರವಾದ ಕೊರೊನಾದಿಂದ ಎಲ್ಲರನ್ನೂ ಚಾಮುಂಡೇಶ್ವರಿ ಪಾರು ಮಾಡಲಿ' ಎಂದು ಬಿಜೆಪಿ ನಾಯಕ ಎಸ್‌.ಎಂ‌.ಕೃಷ್ಣ ಕೋರಿದರು.

ಚಾಮುಂಡಿ‌ಬೆಟ್ಟದಲ್ಲಿ ಗುರುವಾರ ಬೆಳಿಗ್ಗೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಅವರು, 'ಕಷ್ಟ ಕಾಲದಲ್ಲಿ ದೇವಿಯ ಅಗ್ರಪೂಜೆಯೊಂದಿಗೆ ಆರಂಭವಾದ ಉತ್ಸವ ಸುಲಲಿತವಾಗಿ ನಡೆಯಲಿ. ಎಲ್ಲರಿಗೂ ಒಳಿತು ಮಾಡಲಿ' ಎಂದರು.

ಮಂಜು ಮುಸುಕಿದ ವಾತಾವರಣದಲ್ಲಿ, ಕೋವಿಡ್ ಮೂರನೇ ಅಲೆ ಭೀತಿ ನಡುವೆ ನಡೆದ ನಾಡಹಬ್ಬ ಆಚರಣೆಯ ಆರಂಭದ ಕ್ಷಣಗಳಿಗೆ ಗಣ್ಯರು, ಗ್ರಾಮಸ್ಥರು ಸಾಕ್ಷಿಯಾದರು.

ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಿದ್ದ ವೇದಿಕೆಯ ಎಡಭಾಗದಲ್ಲಿ ಬೆಳ್ಳಿ ಮಂಟಪದಲ್ಲಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕೃಷ್ಣ ಅವರು ಬೆಳಿಗ್ಗೆ 8.25ಕ್ಕೆ ಪುಷ್ಪನಮನ ಸಲ್ಲಿಸಿದರು. ಊರುಗೋರು ನೆರವಿನಲ್ಲಿ ನಿಧಾನವಾಗಿ ನಡೆದು‌ಬಂದು, ದೇವಿಗೆ ಮಂಗಳಾರತಿ ಬೆಳಗಿದರು.

ನಂತರ ಅವರು, ‘ಮೈಸೂರು ಜೊತೆಯಲ್ಲೇ ಬೆಳೆದೆ’ ಎಂದು ಬಾಲ್ಯವನ್ನು ಸ್ಮರಿಸಿದರು. 'ಕೃಷ್ಣರಾಜ ಜಲಾಶಯವನ್ನು ನಿರ್ಮಿಸಲು ರಾಜಮನೆತನದ ಒಡವೆಗಳನ್ನು ಒತ್ತೆ ಇಟ್ಟು ಹಣ ತಂದ ಅರಸರಿಗೆ ಲಕ್ಷಾಂತರ ರೈತರ ಪರವಾಗಿ ಅನಂತ ವಂದನೆಗಳು. ರಾಜಶಾಹಿಯನ್ನು ನಾವು ವಿರೋಧಿಸುತ್ತೇವೆ. ಆದರೆ, ಅವರು ಮಾಡಿದ ಇಂಥ ಜನಪರ‌ ಕೆಲಸಗಳನ್ನು ಇತಿಹಾಸದಿಂದ ಅಳಿಸಲು ಆಗುವುದಿಲ್ಲ' ಎಂದರು.

'ದಸರಾ ಉತ್ಸವದ ವೇಳೆ ಪ್ರವಾಸಿಗರಿಗೆ ರಾಜ್ಯದ ವಿವಿಧೆಡ ಪ್ರವಾಸ ಕರೆದೊಯ್ಯುವ ಪ್ಯಾಕೇಜ್ ಮಾಡಿದರೆ ಆರ್ಥಿಕವಾಗಿ ಲಾಭವಾಗುತ್ತದೆ' ಎಂದು ಸಲಹೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ: ಅರಮನೆ ಆವರಣದಲ್ಲಿ ಸಂಜೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮೃದಂಗ ವಿದ್ವಾಂಸ ಎ.ವಿ.ಆನಂದ್‌ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಸರಸ್ವತಿ ಪುತ್ಥಳಿ ಒಳಗೊಂಡಿದೆ.

ದಸರಾ ಟೂರಿಸಂ ಸರ್ಕಿಟ್‌: ಸಿ.ಎಂ

'ದಸರಾ ಉತ್ಸವವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಟೂರಿಸಂ ಸರ್ಕಿಟ್ ಮಾಡಲು ಪ್ರಯತ್ನಿಸಲಿದ್ದು, ಆ ಕ್ಷೇತ್ರದ ಪರಿಣಿತರ ಸಹಕಾರ ಪಡೆಯಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಸ್‌.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದಿದ್ದ ಯಶಸ್ವಿನಿ ಯೋಜನೆಯನ್ನು, ಸರ್ಕಾರದ ಹಣಕಾಸು ಸ್ಥಿತಿ ಸುಧಾರಣೆಯಾದರೆ ಮತ್ತೆ ಚಾಲನೆಗೊಳಿಸಲಾಗುವುದು’ ಎಂದರು.

'ದೇವಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಿದರೆ, ಮಳೆ ಬೆಳೆ‌ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ವರ್ಷ ಅದ್ಧೂರಿ ದಸರಾ ಹಮ್ಮಿಕೊಳ್ಳಲು ಸರ್ಕಾರ ಸಿದ್ಧವಿದೆ' ಎಂದು ಹೇಳಿದರು. 

ಸರಳ ದಸರಾಗೆ ಚಾಲನೆ

ಮಡಿಕೇರಿ: ಇಲ್ಲಿನ ಬನ್ನಿಮಂಟಪದ ಪಂಪಿನಕೆರೆಯ ಬಳಿ ಗುರುವಾರ ಸಂಜೆ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸಿ ಮಡಿಕೇರಿ ದಸರಾಕ್ಕೆ ಚಾಲನೆ ನೀಡಲಾಯಿತು.

ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ಕರಗೋತ್ಸವದ ನಗರ ಪ್ರದಕ್ಷಿಣೆ ನಡೆದಾಗ ಭಕ್ತರು ವಿನಮ್ರರಾಗಿ ನಮಿಸಿದರು. ಒಂಬತ್ತು ದಿನ ಕರಗಗಳು ಮನೆ ಮನೆ ಸಂಚಾರ ಮಾಡಲಿವೆ.

ಕೋವಿಡ್‌ ಕಾರಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಕ್ರೀಡಾಕೂಟ ಹಾಗೂ ಕವಿಗೋಷ್ಠಿ ರದ್ದಾಗಿವೆ.

‘ವಿಜಯದಶಮಿ ದಿನ ರಾತ್ರಿ ವಿವಿಧ ದೇವಸ್ಥಾನಗಳ ಮಂಟಪಗಳ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಜನರು ಸೇರುವಂತಿಲ್ಲ’ ಎಂದು ಜಿಲ್ಲಾಡಳಿತ ಸೂಚಿಸಿದೆ.

‘ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯು ಸತತ ಎರಡನೇ ವರ್ಷವೂ ದಸರಾ ಸಂಭ್ರಮ ಕಸಿದುಕೊಂಡಿದೆ. ಕರಗೋತ್ಸವವನ್ನು ಯಾವ ಕಾರಣಕ್ಕೂ ಸ್ಥಗಿತಗೊಳಿಸುವಂತಿಲ್ಲ. ಸೀಮಿತ ಜನರು ಸೇರಿ ನಡೆಸುತ್ತಿದ್ದೇವೆ’ ಎಂದು ನಗರ ಸತೀಶ್‌ ಹೇಳಿದರು.

ಶ್ರೀರಂಗಪಟ್ಟಣ ದಸರಾಗೆ ಅ.9ರಿಂದ ಮೂರು ದಿನ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ಕಿರಂಗೂರು ಬಳಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಬನ್ನಿ ಮಂಟಪದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಜಂಬೂ ಸವಾರಿ ನಡೆಯಲಿದ್ದು ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು