ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲರ ನೇಮಕಕ್ಕೂ ಪರೀಕ್ಷೆ

ಖಾಸಗಿ ಕಾಲೇಜು ಬೋಧಕರಿಗೂ ಸರ್ಕಾರಿ ಕಾಲೇಜಿನಲ್ಲಿ ಅವಕಾಶ
Last Updated 11 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಬೋಧಕರಿಗಷ್ಟೇ ಬಡ್ತಿ ಮೂಲಕ ದೊರೆಯುತ್ತಿದ್ದ ಅಲ್ಲಿನ ಪ್ರಾಂಶುಪಾಲ ಹುದ್ದೆಗಳು ಇನ್ನು ಮುಂದೆ ಖಾಸಗಿ ಅನುದಾನರಹಿತ ಪದವಿ ಕಾಲೇಜುಗಳ ಬೋಧಕರಿಗೂ ಸಿಗಲಿವೆ.

ಪ್ರಾಂಶುಪಾಲರ ಆಯ್ಕೆಗಾಗಿ ಅರ್ಹತಾ ನಿಯಮಗಳನ್ನು ಅಂತಿಮಗೊಳಿಸಿ ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇರ ನೇಮಕಾತಿ ಮುಖೇನ ಈ ಹುದ್ದೆಗಳನ್ನು ಭರ್ತಿಗೆ ನಿರ್ಧರಿಸಿರುವ ಸರ್ಕಾರ, ಅಭ್ಯರ್ಥಿಯ ವಯಸ್ಸನ್ನು 55ಕ್ಕೆ ಮಿತಿಗೊಳಿಸಿದೆ.

ಅರ್ಹತೆಗಳು: ಅರ್ಜಿ ಸಲ್ಲಿಸುವವರಿಗೆ ಪಿಎಚ್‌.ಡಿ ಕಡ್ಡಾಯ. ರಾಜ್ಯದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥವಾ ಖಾಸಗಿ ಪದವಿ ಕಾಲೇಜುಗಳಲ್ಲಿ ಪ್ರಾಧ್ಯಾಪಕ ಅಥವಾ ಸಹ ಪ್ರಾಧ್ಯಾಪಕರಾಗಿರಬೇಕು. 15 ವರ್ಷಗಳ ಬೋಧನಾ ಅಥವಾ ಸಂಶೋಧನಾ ಅಥವಾ ಆಡಳಿತ ಅನುಭವ ಹೊಂದಿರಬೇಕು. ಕನಿಷ್ಠ 10 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರಬೇಕು.ಭಾರತೀಯ ನಾಗರಿಕರಾಗಿರಬೇಕು.

100 ಅಂಕಗಳ ಪರೀಕ್ಷೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು 100 ಅಂಕಗಳ ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರಬೇಕು. ಸಾಮಾನ್ಯ ಜ್ಞಾನ, ಗ್ರಹಿಕೆ, ಪಿಂಚಣಿ ಮತ್ತು ವೇತನ ಲೆಕ್ಕಾಚಾರ, ಕೆಸಿಎಸ್‌ಆರ್‌ ಕಾಯ್ದೆ ಮತ್ತು ನಿಯಮಗಳು, ಪಠ್ಯೇತರ ಚಟುವಟಿಕೆ, ಕಂಪ್ಯೂಟರ್‌ ಜ್ಞಾನ, ತಾರ್ಕಿಕ ಮತ್ತು ನೈತಿಕತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಒಳಗೊಂಡಿರಬೇಕು. ಈ ಹುದ್ದೆಗಳ ಭರ್ತಿಗೆ ಯಾವುದೇ ಸಂದರ್ಶನ ಇರುವುದಿಲ್ಲ.

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವರ ಮೆರಿಟ್‌ ಪಟ್ಟಿಯನ್ನು ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಕೆಇಎ ಸಿದ್ಧಪಡಿಸಬೇಕು. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಆಡಳಿತ ಅನುಭವ, ಸಂಶೋಧನಾ ಚಟುವಟಿಕೆಗಳ ದಾಖಲೆಗಳ ಪರಿಶೀಲನೆಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಆರು ಜನರ ಸಮಿತಿ ರಚಿಸಬೇಕು ಎಂದು ತಿಳಿಸಲಾಗಿದೆ.

ಸೇವಾ ಅವಧಿ ಐದು ವರ್ಷ: ಪ್ರಾಂಶುಪಾಲ ಹುದ್ದೆಗೆ ಆಯ್ಕೆ ಆಗುವವರ ಸೇವಾ ಅವಧಿ ಐದು ವರ್ಷ ಮಾತ್ರ. ಈ ಅವಧಿಯಲ್ಲಿ ಅವರು ಉತ್ತಮ ಸೇವೆ ಸಲ್ಲಿಸಿದ್ದರೆ ಸೇವಾ ಅವಧಿಯನ್ನು ಮತ್ತೆ ಐದು ವರ್ಷಗಳಿಗೆ(ನಿವೃತ್ತಿ ಅವಧಿ 5 ವರ್ಷಕ್ಕೂ ಹೆಚ್ಚಿದ್ದರೆ) ವಿಸ್ತರಿಸಬಹುದು. ಇಲ್ಲದಿದ್ದರೆ ಇಲಾಖೆ ನಿಯೋಜಿಸುವ ಕಾಲೇಜಿನಲ್ಲಿ ಬೋಧನಾ ಕಾರ್ಯಮುಂದುವರಿಸಬೇಕು.

ಅಧ್ಯಾಪಕರ ಸಂಘದ ಆಕ್ಷೇಪ

‘ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಇರುವ ಶೇ 80ರಷ್ಟು ಸಹ ಪ್ರಾಧ್ಯಾಪಕರ ವಯಸ್ಸು 55 ದಾಟಿದೆ. ಪ್ರಾಂಶುಪಾಲ ಹುದ್ದೆಗಾಗಿ 11 ವರ್ಷ ಹೋರಾಡಿದ ಇವರನ್ನು ಆ ಹುದ್ದೆಯಿಂದ ವಂಚಿತರನ್ನಾಗಿಸಲಾಗುತ್ತಿದೆ. ಖಾಸಗಿ ಅನುದಾನ ರಹಿತ ಪದವಿ ಕಾಲೇಜುಗಳ ಬೋಧಕರಿಗೂ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಲು ಅರ್ಹತೆ ಕಲ್ಪಿಸಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ’ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ (ಕೆಜಿಸಿಟಿಎ) ಅಧ್ಯಕ್ಷ ಟಿ.ಎಂ. ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಪದವಿ ಕಾಲೇಜುಗಳ ಆಡಳಿತ ಮಂಡಳಿಗಳು ನೇಮಕಾತಿ, ಬಡ್ತಿ ಹಾಗೂ ವೇತನ ಪಾವತಿ ವಿಚಾರಗಳಲ್ಲಿ ಯುಜಿಸಿ ನಿಯಮ ಪಾಲಿಸುತ್ತಿಲ್ಲ. ಹೀಗಿರುವಾಗ ಅವರಿಗೆ ಸರ್ಕಾರಿ ಕಾಲೇಜುಗಳ ಪ್ರಾಚಾರ್ಯರನ್ನಾಗಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.

ಪ್ರಾಂಶುಪಾಲ ಹುದ್ದೆಗೆ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಯುಜಿಸಿ ಸೂಚಿಸಿದ್ದರೆ, ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT