ಶನಿವಾರ, ಜೂನ್ 19, 2021
21 °C
‘ಸರ್ಕಾರವೇ ಜನರನ್ನು ಹತ್ಯೆ ಮಾಡುವ ನಿರ್ಧಾರವಿದು’

ಕೊರೊನಾ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆ ಕಡಿಮೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ. ಇದು ಸರ್ಕಾರವೇ ಜನರನ್ನು ಹತ್ಯೆ ಮಾಡುವ ನಿರ್ಧಾರ. ಜನರ ಸಾವಿಗೆ ಸರ್ಕಾರವೇ ನೇರ ಕಾರಣವಾಗುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುವಂತೆ ಐಸಿಎಂಆರ್ ಹೇಳಿದೆ. ಸರ್ಕಾರ ಶೇ 50ರಷ್ಟು ಪರೀಕ್ಷೆ ಕಡಿಮೆ ಮಾಡಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ’ ಎಂದರು.

‘ಪರೀಕ್ಷೆ ಮಾಡಿದಷ್ಟು ಜನ ಜಾಗೃತರಾಗುತ್ತಾರೆ. ಸೋಂಕಿನ ಪ್ರಕರಣ ಹೆಚ್ಚಾಗುತ್ತದೆ ಎಂದು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ. ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಬೇಕು. ಇದರಿಂದ ಸೋಂಕಿತರು ಆರಂಭದಲ್ಲೇ ಗುಣಪಡಿಸಿಕೊಳ್ಳಲು ನೆರವಾಗುತ್ತದೆ. ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರು ಕೋವಿಡ್‌ ಕಾರ್ಯಪಡೆ ಹೊಣೆ ವಹಿಸಿಕೊಂಡ ಬಳಿಕ ಈ ಆದೇಶ ನೀಡಲಾಗಿದೆ’ ಎಂದು ದೂರಿದರು.

‘ಜನರ ಜೀವ ಉಳಿಸಲು ಸರ್ಕಾರ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ನಾವು ಸಹಕಾರ ನೀಡುತ್ತೇವೆ. ಆದರೆ, ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ನಾವು ಮಾಡಿದ್ದೆ ಸರಿ ಎನ್ನುವುದಾದರೆ ನಾವು ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ’ ಎಂದರು.

‘ಸಚಿವರು ಈಗ ಕೋವಿಡ್‌ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕೆಲಸ ಮಾಡಿ ಎಂದು ನಾನು ಕಳೆದ ತಿಂಗಳ 18ರಂದೇ ಹೇಳಿದ್ದೆ. ವಿರೋಧ ಪಕ್ಷದವರು ಹೇಳಿದ್ದನ್ನು ಮಾಡಲು ಈ ಸರ್ಕಾರ ಬೇಕೇ? ಇವರ ಕೈಯಲ್ಲಿ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಇವರು ಮನೆಗೆ ಹೋಗಿ, ರಾಜ್ಯಪಾಲರ ಆಡಳಿತ ಬರುವುದೇ ಉತ್ತಮ’ ಎಂದರು.

ಶಿಕ್ಷಕರ ಸಾವಿಗೆ ಸರ್ಕಾರವೇ ಹೊಣೆ: ‘ಉಪ ಚುನಾವಣೆ ನಡೆದ ಬಸವಕಲ್ಯಾಣದಲ್ಲಿ 42 ಜನ ಶಿಕ್ಷಕರು ಕೊರೊನಾದಿಂದ ಮೃತಪಟ್ಟಿರುವುದು ನಮ್ಮೆಲ್ಲರ ಅಪರಾಧ. ಚುನಾವಣಾ ಆಯೋಗ, ಸರ್ಕಾರ, ಎಲ್ಲ ರಾಜಕೀಯ ಪಕ್ಷಗಳು ಜಾಗ್ರತೆ ವಹಿಸಬೇಕಿತ್ತು’ ಎಂದು ಶಿವಕುಮಾರ್‌ ಹೇಳಿದರು.

‘ಚುನಾವಣೆ ಮುಂದೂಡಬೇಕು ಎಂಬ ಸಲಹೆ ಇತ್ತಾದರೂ ಚುನಾವಣೆ ನಡೆಸುವುದು ಆಯೋಗದ ತೀರ್ಮಾನವಾಗಿತ್ತು. ನನ್ನನ್ನೂ ಸೇರಿ ರಾಜಕೀಯ ಪಕ್ಷದವರು ಅಂತರ ಕಾಪಾಡಲು ಸಾಧ್ಯವಾಗಲಿಲ್ಲ. ನಾವು ಜನ ಸಂಘಟನೆ, ಮತ ಪಡೆಯಬೇಕು ಎಂಬ ಅಮಲಿನಲ್ಲಿದ್ದೆವು. ಆದರೆ, ಸರ್ಕಾರ ಚುನಾವಣೆ ಕೆಲಸ ಮಾಡಿದ ನಮ್ಮ ಶಿಕ್ಷಕ ವೃಂದಕ್ಕೆ ರಕ್ಷಣೆ ನೀಡಬಹುದಾಗಿತ್ತು’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಕರ ಸಾವಿಗೆ ಚುನಾವಣೆ ನಡೆಸಿದ ಆಡಳಿತವೇ ಹೊಣೆ. ಸೋಂಕು ಹೆಚ್ಚುತ್ತಿದೆ, ಹೀಗಾಗಿ ಚುನಾವಣೆ ಮುಂದೂಡಿ ಎಂದು ಸರ್ಕಾರ ಹೇಳಿದ್ದರೆ, ಆಯೋಗ ಚುನಾವಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೆಲವರಿಗೆ ಆತುರವಾಗಿ ಚುನಾವಣೆ ಮಾಡಬೇಕಿತ್ತು. ಅದಕ್ಕೆ ಶಿಕ್ಷಕರನ್ನು ಬಲಿ ಕೊಟ್ಟಿದ್ದಾರೆ’ ಎಂದರು.

ಶ್ರೀನಿವಾಸ್ ಬೆಂಬಲಕ್ಕೆ ಕೆಪಿಸಿಸಿ ನಿಲ್ಲಲಿದೆ: ‘ದೆಹಲಿ ಪೊಲೀಸರು ರಾಷ್ಟ್ರೀಯ ಯುವ ಕಾಂಗ್ರೆಸ್ ಕಚೇರಿಗೆ ನುಗ್ಗಿ, ಯುವ ಅಧ್ಯಕ್ಷರನ್ನು ವಿಚಾರಣೆಗೆ ಒಳಪಡಿಸಿದ್ದಾರೆಂಬ ವಿಚಾರ ತಿಳಿದಿದೆ. ಶ್ರೀನಿವಾಸ್ ಅವರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಯುವ ಹೋರಾಟದ ಮೂಲಕ ಬೆಳೆದು ಬಂದವರು ಎಂಬುದನ್ನು ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ಅರಿಯಬೇಕು. ಅವರ ಸೇವೆಗೆ ಇಡೀ ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಈ ನಡೆಯನ್ನು ನಾನು ಖಂಡಿಸುತ್ತೇನೆ. ಅವರು ಯುವಕರ ಆಂದೋಲನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರು ರಾಜಕೀಯ ಕೆಲಸ ಮಾಡುತ್ತಿಲ್ಲ. ಬದಲಿಗೆ ದೇಶದ ಜನರ ಸೇವೆಗೆ ಶ್ರಮಿಸುತ್ತಿದ್ದಾರೆ. ಮಾನವೀಯ ಸೇವೆ ಮಾಡುತ್ತಿದ್ದಾರೆ’ ಎಂದರು.

‘ಎಲ್ಲ ಯುವಕರು ಶ್ರೀನಿವಾಸ್ ಅವರ ಪರ ನಿಲ್ಲಬೇಕು. ಅವರ ಪರಿಶ್ರಮ, ಅಪಾರ ಜನಸೇವೆಗೆ ಇಡೀ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಶ್ರೀನಿವಾಸ್ ಅವರ ಬೆನ್ನಿಗೆ ನಿಲ್ಲಲಿದೆ. ಶ್ರೀನಿವಾಸ್ ನೀವು ಯಾವುದೇ ಕಾರಣಕ್ಕೂ ಅಂಜಬೇಡಿ. ನಾವು ನಿಮ್ಮ ಜತೆಗಿದ್ದೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು