ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್‌ ಮಂಡಳಿ ಹಗರಣ; ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

Last Updated 27 ನವೆಂಬರ್ 2020, 19:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಕ್ಫ್‌ ಮಂಡಳಿಯಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಪ್ರತಿ ನಿತ್ಯವೂ ವಕ್ಫ್‌ ಮಂಡಳಿಯ ಅಕ್ರಮಗಳ ಕುರಿತು ರಾಜ್ಯ ಸರ್ಕಾರಕ್ಕೆ ದೂರುಗಳು ಬರುತ್ತಲೇ ಇವೆ. ಆದರೆ, ಈ ಕುರಿತು ಸರಿಯಾದ ಕ್ರಮ ಕೈಗೊಂಡಿಲ್ಲ. ವಕ್ಫ್‌ ಮಂಡಳಿಯನ್ನು ತಕ್ಷಣವೇ ಅಮಾನತಿನಲ್ಲಿ ಇರಿಸಬೇಕು. ಮಂಡಳಿಯಲ್ಲಿ ನಡೆದಿರುವ ಸಾವಿರಾರು ಅವ್ಯವಹಾರಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರಿಗೂ ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.

‘ಮೈಸೂರಿನಲ್ಲಿ ವಕ್ಫ್‌ ಮಂಡಳಿಯ ಮತ್ತೊಂದು ಹೊಸ ಹಗರಣ ಬಯಲಿಗೆ ಬಂದಿದೆ. ಮೈಸೂರಿನ ಮಜ್ಲೀಸ್‌–ಇ– ರಿಫಾಹುಲ್‌ ಮುಸ್ಲಿಮೀನ್‌ ಬಾಲಕರು ಮತ್ತು ಬಾಲಕಿಯರ ಅನಾಥಾಶ್ರಮಕ್ಕೆ 2004ರಲ್ಲಿ ತಾತ್ಕಾಲಿಕ ಆಡಳಿತ ಸಮಿತಿ ನೇಮಿಸಲಾಗಿತ್ತು. 2011ರಲ್ಲಿ ಹೊಸ ಉಪ ನಿಯಮಗಳ ಅನುಮೋದನೆಯೊಂದಿಗೆ ಹೊಸ ಆಡಳಿತ ಮಂಡಳಿ ನೇಮಿಸಲಾಗಿತ್ತು. ಈ ನಡುವೆ 2008ರಲ್ಲಿ ತಾತ್ಕಾಲಿಕ ಆಡಳಿತ ಮಂಡಳಿಯು ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇರಿಸಿ ಕೆನರಾ ಬ್ಯಾಂಕ್‌ನಲ್ಲಿ ₹ 8.5 ಕೋಟಿ ಸಾಲ ಪಡೆದಿತ್ತು. ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು’ ಎಂದು ಪತ್ರದಲ್ಲಿ ಅನ್ವರ್ ಮಾಣಿಪ್ಪಾಡಿ ದೂರಿದ್ದಾರೆ.

ಈಗ ಸಾಲದ ಅಸಲು ಮತ್ತು ಬಡ್ಡಿಯ ಮೊತ್ತ ಸೇರಿ ₹ 32 ಕೋಟಿ ಬಾಕಿಯಾಗಿದೆ. ಕೆನರಾ ಬ್ಯಾಂಕ್‌ ಸಾಲ ವಸೂಲಿಗಾಗಿ ಅನಾಥಾಶ್ರಮದ ಆಸ್ತಿಗಳ ಹರಾಜಿಗೆ ನೋಟಿಸ್‌ ನೀಡಿದೆ. ಶಾಸಕ ತನ್ವೀರ್‌ ಸೇಠ್‌ ಮತ್ತು ಅವರ ತಂದೆ ಅಜೀಜ್‌ ಸೇಠ್‌ ಈ ಹಗರಣದ ರೂವಾರಿಗಳು. ಆಡಳಿತ ಮಂಡಳಿಯ ದಿಕ್ಕುತಪ್ಪಿಸಿ ಹಗರಣ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT