ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೀಸಲಾತಿ ಸೌಲಭ್ಯವನ್ನು ಒಂದೆರಡು ಜಾತಿಯವರು ಬಾಚಿಕೊಂಡರೆ ಎಷ್ಟು ಸರಿ?'

ಅನುಭವ ಮಂಟಪ | ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
Last Updated 2 ಸೆಪ್ಟೆಂಬರ್ 2020, 2:59 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಲ್ಲಿನ ಒಳ ಜಾತಿಗಳಿಗೆ ಒಳಮೀಸಲಾತಿ ನೀಡಬಹುದು. ಅದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ರಾಜ್ಯಗಳಿಗೆ ಹೇಳಿದೆ, ನಿಮ್ಮ ಅಭಿಪ್ರಾಯವೇನು?

ಈ ವಿಷಯ ಬಂದಾಗ ಎರಡು ಮುಖ್ಯ ಅಂಶಗಳನ್ನು ಗಮನಿಸಬೇಕು. ಮೊದಲನೆಯದು 2005 ರಲ್ಲಿ ಇ.ವಿ. ಚೆನ್ನಯ್ಯ ವರ್ಸಸ್‌ ಆಂಧ್ರಪ್ರದೇಶ ಸರ್ಕಾರದ ಪ್ರಕರಣ. ಆಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದ ಸಂತೋಷ್ ಹೆಗ್ಡೆ ಅವರ ಮುಂದೆ ಈ ಪ್ರಕರಣ ಬಂದಿತ್ತು. ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌,‌ ‘ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಕೊಡುವ ಅಧಿಕಾರ ಇಲ್ಲ’ ಎಂದು ತೀರ್ಪು ನೀಡಿತ್ತು. ಆಂಧ್ರಪ್ರದೇಶ ಸರ್ಕಾರ ನೀಡಿದ್ದ ಒಳಮೀಸಲಾತಿಯನ್ನು ಅನೂರ್ಜಿತಗೊಳಿಸಿತ್ತು. ಎರಡನೆಯದಾಗಿ, ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಪೀಠವು ‘ಒಳಮೀಸಲಾತಿ ಕೊಟ್ಟಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ’ ಎಂದು ಹೇಳಿದೆ. ಮುಂದುವರಿದು, ಒಂದೇ ವರ್ಗ ಎಂಬ ಕಾರಣಕ್ಕೆ ಹಣ್ಣುಗಳ ಇಡೀ ಬುಟ್ಟಿಯನ್ನು ಬಲಶಾಲಿಯಾದ ಒಂದೇ ಜಾತಿಗೆ ಕೊಡಲು ಆಗುವುದಿಲ್ಲ ಎಂದು ಹೇಳಿರುವ ಮಾತು ಸರಿಯಾಗಿಯೇ ಇದೆ.

ಇಲ್ಲಿಯವರೆಗೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿಯಲ್ಲಿ ಕೆಲವೇ ಕೆಲವು ಪ್ರಬಲ ಜಾತಿಗಳಿಗೆ ಮಾತ್ರ ಮೀಸಲಾತಿ ಲಾಭ ಸಿಕ್ಕಿದೆ. ಆ ಸಮುದಾಯಗಳ ಕಟ್ಟ ಕಡೆಯ ಮನುಷ್ಯನವರೆಗೆ ಇದರ ಲಾಭ ತಲುಪಿಲ್ಲ ಎಂಬ ದೂರು, ಅಸಮಾಧಾನ ವ್ಯಾಪಕವಾಗಿದೆಯಲ್ಲ?

ದೇಶದಲ್ಲಿ ಮೀಸಲಾತಿ ಜಾರಿಗೆ ತಂದವರು ತುಂಬಾ ಹಿರಿಯರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಸಂವಿಧಾನ ಬರೆದವರು ಮತ್ತು ಆಡಳಿತ ಮಾಡಿದವರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಅಸ್ಪೃಶ್ಯರನ್ನು ಮೇಲಕ್ಕೆ ಎತ್ತಬೇಕು, ಸಾಮಾಜಿಕ ನ್ಯಾಯ ಕೊಡಬೇಕು ಎಂಬ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದರು. ಆರಂಭದಲ್ಲಿ ಅಂದರೆ ಮೊದಲ 20ರಿಂದ 25 ವರ್ಷಗಳು ಸರಿಯಾಗಿಯೇ ಇದ್ದವು. ಆನಂತರ ಮೀಸಲಾತಿಯ ದುರುಪಯೋಗ ಆರಂಭವಾಯಿತು. ಮೀಸಲಾತಿ ಆರಂಭಿಸಿದಾಗ ಎಸ್‌ಸಿಯಲ್ಲಿ ಕೇವಲ 6 ಜಾತಿಗಳು ಇದ್ದವು. ಈಗ ಎಸ್‌ಸಿ ಪಟ್ಟಿಯಲ್ಲೇ 101 ಜಾತಿಗಳಿವೆ. ಸರ್ಕಾರ ನೀಡುವ ಮೀಸಲಾತಿ ಸೌಲಭ್ಯವನ್ನು ಒಂದೆರಡು ಜಾತಿಯವರೇ ಬಾಚಿಕೊಂಡು ತಿನ್ನುತ್ತಾ ಕೂರುವುದು ಸರಿಯೆ? ಇದರಿಂದ ಮೀಸಲಾತಿಯ ವ್ಯಾಪಕ ಉದ್ದೇಶ, ಆಶಯ ಈಡೇರಲು ಸಾಧ್ಯವೇ. ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿಯಲ್ಲಿ ಈವರೆಗೂ ಮೀಸಲಾತಿ ಸೌಲಭ್ಯ ಸಿಗದ ಪ್ರತಿಯೊಂದು ಕುಟುಂಬಕ್ಕೂ ಅದರ ಪ್ರಯೋಜನ ಸಿಗುವಂತಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ.

ಒಳಮೀಸಲಾತಿ ಜಾರಿಗೆ ಸರ್ಕಾರ ಮಾಡಿಕೊಂಡಿರುವ ಸಿದ್ಧತೆಗಳೇನು?

ಪ್ರತಿಯೊಬ್ಬ ಶೋಷಿತನಿಗೂ ಮೀಸಲಾತಿಯ ಪ್ರಯೋಜನ ಸಿಗಲೇಬೇಕು ಎಂಬುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯ ಮತ್ತು ಶೋಷಿತರ ಪರವಾದ ಒಲವು ಹೊಂದಿವೆ. ಆದರೆ, ಸುಪ್ರೀಂ ಕೋರ್ಟ್,‌ ಇ.ವಿ.ಚೆನ್ನಯ್ಯ ಪ್ರಕರಣದಲ್ಲಿ 2005ರಲ್ಲಿ ನೀಡಿದ ತೀರ್ಪಿನ ಮರುಪರಿಶೀಲನೆ ಅಗತ್ಯ ಇದೆ. ಅದಕ್ಕಾಗಿ ಏಳು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳಿರುವ ಪೀಠ ರಚಿಸಬೇಕು ಎಂದು ಐವರು ನ್ಯಾಯಮೂರ್ತಿಗಳ ಪೀಠವು ಮುಖ್ಯ ನ್ಯಾಯಮೂರ್ತಿಯವರಿಗೆ ಕೋರಿಕೆ ಸಲ್ಲಿಸಿದೆ. ವಿಸ್ತೃತ ಪೀಠಕ್ಕೆ ಒಪ್ಪಿಸಿದರೆ, ಆ ಪೀಠದಿಂದ ಯಾವ ನಿರ್ಣಯ ಬರುತ್ತದೆಯೋ ಅದಕ್ಕೆ ಸರ್ಕಾರ ಬದ್ಧವಾಗಿರುತ್ತದೆ.

ನ್ಯಾ.ಸದಾಶಿವ ಆಯೋಗದ ವರದಿ ಜಾರಿ ತರಲು ಸಮಸ್ಯೆ ಏನು?

ಈ ಹಿಂದೆ ಅಧಿಕಾರದಲ್ಲಿ ಇದ್ದವರು ಸದಾಶಿವ ಆಯೋಗದ ವರದಿ ಕುರಿತು ಏನೇನು ಹೇಳಿದ್ದಾರೆ ಎಂಬ ಎಲ್ಲ ಮಾಹಿತಿಯೂ ಇದೆ. ಈಗ ನಾನು ವಿವಾದ ಸೃಷ್ಟಿಸಲು ಹೋಗುವುದಿಲ್ಲ. ಯಾರಿಗೆ ಅನ್ಯಾಯವಾಗಿದೆಯೊ ಅವರಿಗೆ ನ್ಯಾಯ ಕೊಡಬೇಕು ಎಂಬುದು ನಮ್ಮ ಉದ್ದೇಶ. ಮೀಸಲಾತಿಯ ಫಲ ಸಿಗಬೇಕು, ಅವರು ಇತರ ಎಲ್ಲರಂತೆ ಮುಂದಕ್ಕೆ ಬರಬೇಕು.

ಒಳಮೀಸಲಾತಿ ಜಾರಿಗೆ ಪ್ರಬಲ ಸಮುದಾಯಗಳು ಅಡ್ಡಿ ಮಾಡಿದರೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ?

ಪ್ರಬಲರು ಯಾವಾಗಲೂ ವಿರೋಧ ಮಾಡುತ್ತಾರೆ. ಇಲ್ಲಿ ಪರ–ವಿರೋಧ ಪ್ರಶ್ನೆ ಅಲ್ಲ. ಶೋಷಿತರನ್ನು ಸಂಕಷ್ಟದಿಂದ ಮೇಲೆತ್ತಬೇಕು. ಹೀಗಾಗಿ ಒಳಮೀಸಲಾತಿಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಎಲ್ಲರೂ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ಆಶಯಕ್ಕೆ ಬದ್ಧವಾಗಿರಲೇಬೇಕು. ಅದಕ್ಕೆ ಎಲ್ಲರೂ ಸಹಕಾರ ನೀಡಲೇಬೇಕು ಎಂಬುದು ನನ್ನ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT