ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ | ‘ಅಪ್ಪನೂ ಬಿಟ್ಟು ಹೋಗ್ಬುಟ್ರು’

ಈಶ್ವರಹಳ್ಳಿಯ ಬಾಲಕ ನಿರಂಜನ್‌ನ ನೋವಿನ ನುಡಿ
Last Updated 21 ಜೂನ್ 2021, 21:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಎರಡು ವರ್ಷದವನಿದ್ದಾಗಲೇ ಅಮ್ಮ ತೀರಿಕೊಂಡ್ರು. ಕೋವಿಡ್‌ನಿಂದ ಕಳೆದ ತಿಂಗಳು ಅಪ್ಪನೂ ಹೋಗ್ಬುಟ್ರು. ಬದುಕಿನ ಹಾದಿಯೇ ಕುಸಿದಂತಾಗಿದೆ..’

ಇದು ಪೋಷಕರನ್ನು ಕಳೆದುಕೊಂಡ ಚಿಕ್ಕಮಗಳೂರು ತಾಲ್ಲೂಕಿನ ಈಶ್ವರಹಳ್ಳಿ ಬಾಲಕ ನಿರಂಜನ್‌ನ ನೋವಿನ ನುಡಿಗಳು. 13 ವರ್ಷದ ಈ ಬಾಲಕ ಬಾಳೆಹೊನ್ನೂರಿನ ಸೀಗೋಡಿನ ನವೋದಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ.

ನಿರಂಜನ್‌ ತಂದೆ ರಂಗಸ್ವಾಮಿ (58) ಅವರು ಮೇ 23ರಂದು ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೇಟಿಯನ್ನು ಕಳೆದುಕೊಂಡು ಕುಟುಂಬ ಸಂಕಷ್ಟದ ಸುಳಿಗೆ
ಸಿಲುಕಿದೆ.

‘ಅಪ್ಪ ಕೂಲಿ ಮಾಡಿಕೊಂಡಿದ್ದರು. ಮನೆಗೆ ಅವರೇ ಆಧಾರ ಸ್ತಂಭವಾಗಿದ್ದರು. ನನ್ನನ್ನು ಚೆನ್ನಾಗಿ ಓದಿಸಬೇಕು ಎಂಬ ಕನಸು ಕಂಡಿದ್ದರು. ಆದರೆ, ಬದುಕಿನ ಅರ್ಧ ದಾರಿಯಲ್ಲೇ ತಬ್ಬಲಿ ಮಾಡಿ ಹೋಗ್ಬಿಟ್ರು. ಅಪ್ಪನಿಗೆ ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ದಿದ್ದೆವು. ವಾಪಸ್‌ ಮನೆಗೆ ಬರಲೇ ಇಲ್ಲ’ ಎಂದು ನಿರಂಜನ್‌ ದುಃಖ ತೋಡಿಕೊಂಡರು.

ರಂಗಸ್ವಾಮಿ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಶಾಂತಮ್ಮ. ಮೇಘನಾ ಮತ್ತು ನಿರಂಜನ್‌ ಈ ದಂಪತಿ ಮಕ್ಕಳು. ಶಾಂತಮ್ಮ ಅವರು 2010ನೇ ಇಸವಿಯಲ್ಲಿ ಮೃತಪಟ್ಟಿದ್ದಾರೆ. ಮೇಘನಾ ಮತ್ತು ಬೇಲೂರಿನ ಬಸವರಾಜು ಮದುವೆಯಾಗಿ, ಒಡಿಶಾ ರಾಜ್ಯದ ಗುಣಪುರದಲ್ಲಿ ಬೇಕರಿ ಇಟ್ಟುಕೊಂಡಿದ್ದಾರೆ. ರಂಗಸ್ವಾಮಿ ಅವರ ಮತ್ತೊಬ್ಬ ಪತ್ನಿ ಇಂದಿರಮ್ಮ. ಅವರಿಗೂ ಒಬ್ಬ ಪುತ್ರ ಇದ್ದಾನೆ.

‘ಕೋವಿಡ್‌ ತಗುಲಿ ಅಪ್ಪ ಸಾವಿಗೀಡಾದರು. ಸಹೋದರ ನಿರಂಜನ್‌ನನ್ನು ಸದ್ಯಕ್ಕೆ ಗುಣಪುರದಲ್ಲಿ ನಮ್ಮ ಜೊತೆ ಇಟ್ಟುಕೊಂಡಿದ್ದೇನೆ. ಶಾಲೆ ಆರಂಭವಾದರೆ ಅವನನ್ನು ಸೀಗೋಡಿಗೆ ಕಳಿಸುತ್ತೇನೆ. ನನಗೆ ಇಬ್ಬರು ಮಕ್ಕಳು ಇದ್ದಾರೆ. ತಮ್ಮನ ಜವಾಬ್ದಾರಿಯೂ ಹೆಗಲಿಗಿದೆ. ನಮ್ಮದು ಬಡ ಕುಟುಂಬ. ಸಹೋದರನಿಗೆ ಒಳ್ಳೆಯ ಭವಿಷ್ಯ ರೂಪಿಸಲು ದಾನಿಗಳು ಆಸರೆಯಾದರೆ ಅನುಕೂಲವಾಗುತ್ತದೆ’ ಎಂದು ಮೇಘನಾ
ವಿನಂತಿಸಿಕೊಂಡರು.

"ಚೆನ್ನಾಗಿ ವಿದ್ಯಾಭ್ಯಾಸ ಮಾಡಿ, ಅಪ್ಪನ ಕನಸನ್ನು ನನಸಾಗಿಸುತ್ತೇನೆ. ಏರೋನಾಟಿಕಲ್‌ ಎಂಜಿನಿಯರ್‌ ಆಗಬೇಕು ಎಂಬ ಗುರಿ ಇದೆ.

-ನಿರಂಜನ್‌, ಈಶ್ವರಹಳ್ಳಿ ಬಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT