ಸೋಮವಾರ, ಜೂನ್ 27, 2022
24 °C

ನುಡಿದಂತೆ ನಡೆವ ನಾಯಕ ದೇವೇಗೌಡ: ಪತ್ರಕರ್ತ ಸುಗತ ಶ್ರೀನಿವಾಸರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ನುಡಿದಂತೆ ನಡೆಯುವ ನಾಯಕ. ಅವರ ರಾಜಕೀಯ ಬದುಕಿನಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳಿವೆ’ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ತಿಳಿಸಿದರು.

ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜೆಡಿಎಸ್‌ ಹಮ್ಮಿಕೊಂಡಿದ್ದ ‘ಸಾಧನೆ ಸ್ಮರಣೆ ಅಭಿಯಾನ’ದಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು.  

‘ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ಸಂಸತ್‌ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಈ ಹುದ್ದೆಯಲ್ಲಿರುವಷ್ಟು ದಿನ ಬಡವರು, ತುಳಿತಕ್ಕೊಳಗಾದವರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದರು. ಪಲಾಯನವಾದ ಅನುಸರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಿರ್ಜೀವ ವಸ್ತುಗಳಾಗಿರುವ ಸಂಸತ್‌ ಭವನದ ಎಲ್ಲಾ ಕಂಬಗಳಿಂದಲೂ ದೇವರು ಪ್ರತ್ಯಕ್ಷನಾಗಬಲ್ಲ ಎಂಬುದನ್ನೂ ತಿಳಿಸಿದ್ದರು’ ಎಂದು ಸ್ಮರಿಸಿದರು.

‘ದೇವೇಗೌಡರು ಸರಳವಾಗಿ ಬದುಕಿದವರು. ಸಂಸದರು ಮಧ್ಯರಾತ್ರಿ ಕರೆ ಮಾಡಿದರೂ ಸ್ವೀಕರಿಸಿ ಮಾತನಾಡುತ್ತಿದ್ದರು. ಅವರು ದೇಶ ಕಂಡ ಅಪರೂಪದ ರಾಜಕಾರಣಿ. ಬಹಳ ಅಧ್ಯಯನಶೀಲ ರಾಜಕಾರಣಿಯೂ ಹೌದು. ಸರ್ಕಾರಿ ವರದಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ಅವರಿಗೆ ಅದ್ಭುತವಾದ ಗ್ರಹಿಕೆ ಶಕ್ತಿ ಇದೆ. ತಮ್ಮ ಅನುಭವವನ್ನು ಸಾಮಾನ್ಯ ಜ್ಞಾನವೆಂಬ ರೀತಿಯಲ್ಲಿ ಇನ್ನೊಬ್ಬರಿಗೆ ವರ್ಗಾಯಿಸುತ್ತಾರೆ. ಇದು ಅವರ ವಿಶೇಷತೆ. ಅವರ ಕಾಲದಲ್ಲಿ ಕೃಷಿ ವಲಯದಲ್ಲಿ ಶೇ 8ರಷ್ಟು ಅಭಿವೃದ್ಧಿ ಸಾಧಿಸಲಾಗಿತ್ತು’ ಎಂದರು.

‘ದೇವೇಗೌಡರು ಗಂಗಾ ನದಿಯನ್ನು ಬಾಂಗ್ಲಾದೇಶಕ್ಕೆ ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅಲ್ಲಿನ ಜನ ಅವರನ್ನು ಪೂಜ್ಯಭಾವದಿಂದ ಕಾಣುತ್ತಾರೆ. 40 ವರ್ಷದಿಂದ ಕಗ್ಗಂಟಾಗಿದ್ದ ಸಮಸ್ಯೆಯನ್ನು ಅವರು ಎರಡೇ ವಾರದಲ್ಲಿ ಪರಿಹರಿಸಿದ್ದರು. ಇದು ಅವರ ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿಯಂತಿದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು