ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ– ಮಾಕುಟ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿಸಿ: ದೇವೇಗೌಡ ಮನವಿ

ಸಚಿವ ನಿತಿನ್ ಗಡ್ಕರಿಗೆ ಎಚ್‌.ಡಿ. ದೇವೇಗೌಡ ಮನವಿ
Last Updated 3 ಆಗಸ್ಟ್ 2021, 22:19 IST
ಅಕ್ಷರ ಗಾತ್ರ

ಬೆಂಗಳೂರು: ಚನ್ನರಾಯಪಟ್ಟಣ–ಮಡಿಕೇರಿ– ಮಾಕುಟ ಮೂಲಕ ಕೇರಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಂತೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಸಂಸದ ಎಚ್‌.ಡಿ.ದೇವೇಗೌಡ ನೇತೃತ್ವದ ನಿಯೋಗ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದೆ.

ದೆಹಲಿಯಲ್ಲಿ ಮಂಗಳವಾರ ಗಡ್ಕರಿ ಅವರನ್ನು ಭೇಟಿ ಮಾಡಿದ ದೇವೇಗೌಡ, ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವುದರಿಂದ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳು ನಿರ್ಮಾಣಗೊಂಡು ಕೃಷಿ ಮತ್ತು ಆರ್ಥಿಕ ಚಟುವಟಿಕೆಗೆ ಹೆಚ್ಚಿನ ಒತ್ತು ಸಿಗುತ್ತದೆ ಎಂದು ಕೇಂದ್ರ ಸಚಿವರಿಗೆ ವಿವರಿಸಿದರು.

ಕೊಡಗು ಪ್ರದೇಶ ಬೆಟ್ಟ, ಗುಡ್ಡ ಮತ್ತು ಕಾಡುಗಳಿಂದ ಕೂಡಿದೆ. ಇಲ್ಲಿ ಈಗ ಇರುವ ರಸ್ತೆ ಸಂಚಾರಕ್ಕೆ ಕಷ್ಟವಾಗಿದೆ. ಮಳೆಗಾಲದಲ್ಲಿ ಭೂಕುಸಿತದಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಲು ದೇಶ–ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ರಸ್ತೆ ಸಂಪರ್ಕದ ಸಮಸ್ಯೆ ಇರುವುದರಿಂದ ಚನ್ನರಾಯಪಟ್ಟಣ– ಹೊಳೆ ನರಸಿಪುರ–ಅರಕಲಗೂಡು–ಕೊಡ್ಲಿಪೇಟೆ–ಮಡಿಕೇರಿ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಾಲ್ಕು ಪಥಗಳಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಈ ಹೆದ್ದಾರಿ ಮೇಲ್ದರ್ಜೆಗೇರಿ ಸಲು ಆದಷ್ಟು ಶೀಘ್ರವೇ ಅನುಮೋದನೆ ನೀಡಬೇಕು. ಈ ಹೆದ್ದಾರಿ ನಿರ್ಮಾಣ ದಿಂದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಿಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗುತ್ತದೆ, ಹಾಸನ ಮತ್ತು ಕೊಡಗು ಜಿಲ್ಲೆಗಳ ಆರ್ಥಿಕ ಚಟುವಟಿಕೆ ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕೋಪಯೋಗಿ ಇಲಾಖೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್)ತಯಾರಿಸಿ, ಕೇಂದ್ರ ಹೆದ್ದಾರಿಗಳ ಇಲಾಖೆಗೆ 2018 ರಲ್ಲೇ ಸಲ್ಲಿಸಿದೆ ಎಂದು ದೇವೇಗೌಡ ತಿಳಿಸಿದರು.

ಅಲ್ಲದೆ, ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಯಡಗೋಡ ನಹಳ್ಳಿ, ಬಿಳಿಕೆರೆ ಮತ್ತು ಹಾಸನ– ಬೇಲೂರು ನಡುವಿನ ಎರಡು ಪಥದ ರಾಜ್ಯ ಹೆದ್ದಾರಿಯನ್ನು ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿ ವರ್ತಿಸಲು ಟೆಂಡರ್‌ಗೆ ಅನುಮೋದನೆ ನೀಡಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಗಡ್ಕರಿ ಅವರು ಟೆಂಡರ್‌ ಕರೆಯಲು ಅನುಮೋದನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT