ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಗ್ರಂಥಾಲಯ: ಕೋಟಿ ದಾಟಿದ ನೋಂದಣಿ

Last Updated 15 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದಲ್ಲಿ ಈವರೆಗೆ ನೋಂದಣಿಯಾದವರ ಸಂಖ್ಯೆ 1 ಕೋಟಿ ಗಡಿ ದಾಟಿದೆ.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965ರ ಅನ್ವಯ ರಾಜ್ಯದಲ್ಲಿ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. 2020ರ ಫೆಬ್ರುವರಿಯಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಇಲಾಖೆ ಪ್ರಾರಂಭಿಸಿತ್ತು. ಕೋವಿಡ್ ಕಾಣಿಸಿಕೊಂಡ ಬಳಿಕ ಗ್ರಂಥಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಇದರಿಂದಾಗಿ ಹೆಸರು ನೋಂದಣಿ ಹಾಗೂ ಓದುಗರ ಸಂಖ್ಯೆ ಹೆಚ್ಚಳವಾಗತೊಡಗಿದೆ.

ರಾಜ್ಯದಾದ್ಯಂತ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು ಹಾಗೂ 216 ತಾಲ್ಲೂಕು ಗ್ರಂಥಾಲಯಗಳು ಸೇರಿದಂತೆ ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರಥಮ ಹಂತದ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ.

18.75 ಲಕ್ಷ ಇ–ವಿಷಯಗಳನ್ನು ಡಿಜಿಟಲ್ ಗ್ರಂಥಾಲಯಕ್ಕೆ ವಿಷಯವಾರು ಅಳವಡಿಕೆ ಮಾಡಲಾಗಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಯ ವಿಷಯಗಳನ್ನು ಅಳವಡಿಸಲಾಗಿದೆ. ರಾಜ್ಯ ಮತ್ತು ಸಿಬಿಎಸ್‌ಸಿ ಪಠ್ಯವನ್ನೂ ಡಿಜಿಟಲ್ ರೂಪದಲ್ಲಿ ಒದಗಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುವ ವಿಷಯಗಳೂ ಡಿಜಿಟಲ್ ಗ್ರಂಥಾಲಯದ ಪೋರ್ಟಲ್‌ನಲ್ಲಿ ಸಿಗುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ 10 ಲಕ್ಷ ವಿದ್ಯಾರ್ಥಿಗಳಿಗೆ ವೆಬ್‌ಸೈಟ್ ಮತ್ತು ಮೊಬೈಲ್‌ ಆ್ಯಪ್ ನೆರವಿನಿಂದ ಕಲಿಕಾ ವಿಷಯಗಳನ್ನು ಒದಗಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

5.57 ಲಕ್ಷ ವಿಡಿಯೊ: ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದಡಿ ಕಲಬುರ್ಗಿಯಲ್ಲಿ 16.68 ಲಕ್ಷ ಮಂದಿ ನೋಂದಣಿಯಾಗಿದ್ದು, ಅಧಿಕ ಮಂದಿ ನೋಂದಣಿಗೊಂಡ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡದಲ್ಲಿ 16.61 ಲಕ್ಷ, ಬೆಂಗಳೂರು ನಗರದಲ್ಲಿ 16.15 ಲಕ್ಷ ಹಾಗೂ ಹಾಸನದಲ್ಲಿ 10.38 ಲಕ್ಷ ಮಂದಿ ನೋಂದಣಿಯಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆಯಿದೆ.

ಒಟ್ಟು 4.13 ಲಕ್ಷ ಇ–ಪುಸ್ತಕ ಹಾಗೂ ನಿಯತಕಾಲಿಕೆಗಳನ್ನು ಓದುಗರಿಗೆ ಒದಗಿಸಲಾಗಿದೆ. ಕಥೆ, ನಾಟಕಗಳು, ರೂಪಕಗಳು ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳು, ದಿನ ಪತ್ರಿಕೆಗಳು ಹಾಗೂ ವಿಡಿಯೊ ಲಿಂಕ್‌ಗಳನ್ನು ಡಿಜಿಟಲ್ ಗ್ರಂಥಾಲಯ ಜಾಲತಾಣದಲ್ಲಿ ಅಳವಡಿಸಲಾಗಿದೆ. 5.57 ಲಕ್ಷ ವಿಡಿಯೊಗಳಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

ಇಲಾಖೆ ಅಭಿವೃದ್ಧಿಪಡಿಸಿರುವ ‘ಇ–ಸಾರ್ವಜನಿಕ ಗ್ರಂಥಾಲಯ’ ಮೊಬೈಲ್ ಆ್ಯಪ್ ಹಾಗೂ ಜಾಲತಾಣ www.karnatakadigitalpubliclibrary.org ಮೂಲಕ ನೋಂದಣಿ ಮಾಡಿಕೊಂಡು ಪುಸ್ತಕಗಳನ್ನು ಓದಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT